ಸಾರಾಂಶ
ಪ್ರಲ್ಹಾದ್ ಜೋಶಿ
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ
------
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಸಾಧನೆಗೆ ಭಾರತಕ್ಕೆ ಯಾವ ದೇಶವೂ ಸಾಟಿಯಲ್ಲ. ಪ್ರಧಾನಿ ಮೋದಿ ಅವರ ನೇರ ಹಸ್ತಕ್ಷೇಪದ ಪರಿಣಾಮ ಇದು. ಈಗ, ಭಾರತವು ಈ ಕ್ಷೇತ್ರದಲ್ಲಿ ಕೇವಲ ಆಟಗಾರನಾಗದೆ, ಈ ವಲಯವನ್ನೇ ಮುನ್ನಡೆಸುತ್ತಿದೆ. ಇದು ಕಳೆದ 10 ವರ್ಷಗಳಲ್ಲಿ ನಮಗೆ ಜಾಗತಿಕ ಮನ್ನಣೆ ನೀಡಿದೆ.
------
2070ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತರುವ ಭಾರತದ ಮಹತ್ವಾಕಾಂಕ್ಷಿ ಗುರಿಯು ನವೀಕರಿಸಬಹುದಾದ ಇಂಧನ ಮೂಲಗಳ ವಿಸ್ತರಣೆ ಮತ್ತು ಏಕೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಇದು ಸುಸ್ಥಿರ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವ ದೇಶದ ಬದ್ಧತೆಯ ಪ್ರಮುಖ ಅಂಶವಾಗಿದೆ. ವೇಗವಾಗಿ ವಿಸ್ತರಿಸುತ್ತಿರುವ ಜನಸಂಖ್ಯೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು, ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಕಾಲಘಟ್ಟದಲ್ಲೇ ಹೆಚ್ಚುತ್ತಿರುವ ಇಂಧನ ಬಳಕೆಯನ್ನು ಎದುರಿಸುವ ಸಂಯೋಜಿತ ಸವಾಲನ್ನು ಸಹ ಎದುರಿಸುತ್ತಿದೆ. ನವೀಕರಿಸಬಹುದಾದ ಇಂಧನವು ಈ ಅಂಶಗಳನ್ನು ಸಮತೋಲನಗೊಳಿಸಲು ಅತ್ಯಂತ ಕಾರ್ಯಸಾಧು ಪರಿಹಾರವಾಗಿದೆ. ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ - ಇದು ಸ್ವಂತ ವಿಮೋಚನೆ ಮತ್ತು ಪ್ರಪಂಚದ ಕಲ್ಯಾಣವನ್ನು ಸೂಚಿಸುತ್ತದೆ. ಭಾರತವು ಇಡೀ ವಿಶ್ವದಲ್ಲೇ ಅತಿ ಕಡಿಮೆ ಪ್ರಮಾಣದ ಇಂಗಾಲ ಹೊರಸೂಸುವಿಕೆ ಹೊಂದಿದ್ದರೂ, ದೇಶವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸದೃಢ ನಾಯಕತ್ವದಲ್ಲಿ ಸ್ವಚ್ಛ ಇಂಧನ ಉತ್ಪಾದನೆ ಕಾರಣಕ್ಕಾಗಿ ಮಾತ್ರ ಚಾಂಪಿಯನ್ ಆಗುತ್ತಿಲ್ಲ, ಈ ನಿಟ್ಟಿನಲ್ಲಿ ಅದು ಇತರೆ ರಾಷ್ಟ್ರಗಳಿಗೂ ಪ್ರೇರಣೆ ನೀಡುತ್ತಿದೆ.
ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ತರುವ ಭಾರತದ ಸಂಕಲ್ಪವನ್ನು ಗ್ಲಾಸ್ಗೋದಲ್ಲಿ ಜರುಗಿದ ಸಿಒಪಿ26 ಶೃಂಗಸಭೆಯ ಘೋಷಣೆಯಲ್ಲಿ ಒತ್ತಿಹೇಳಲಾಯಿತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಪಂಚಾಮೃತ’ ಉಪಕ್ರಮದ ಅಡಿ, ಪ್ರಮುಖ ಪಂಚ ಗುರಿಗಳನ್ನು ನೀಡಿದರು. ಅದರಲ್ಲಿ ನವೀಕರಿಸಬಹುದಾದ ಇಂಧನವು ನಿರ್ಣಾಯಕ ಅಂಶವಾಗಿದೆ. ದೇಶವು 2030ರ ವೇಳೆಗೆ 500 ಗಿಗಾವ್ಯಾಟ್ ಉರವಲೇತರ (ನಾನ್-ಫಾಸಿಲ್) ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸಲು ಶಪಥ ಅಥವಾ ವಾಗ್ದಾನ ಮಾಡಿತು. ವಾಸ್ತವವೆಂದರೆ, ಭಾರತವು ಅದೇ ವರ್ಷದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇ.50ರಷ್ಟು ಇಂಧನ ಅಗತ್ಯತೆಗಳನ್ನು ಪೂರೈಸಿತು. ಸೌರಶಕ್ತಿಯ ಉತ್ಪಾದನೆ ಶೇ.58ರಷ್ಟು ಮತ್ತು ಪವನಶಕ್ತಿಯ ಉತ್ಪಾದನೆ ಶೇ.20ರಷ್ಟು ಆಯಿತು. ಈ ಗುರಿಗಳು ಭಾರತದ ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 1 ಶತಕೋಟಿ ಟನ್‌ಗಳಷ್ಟು ಕಡಿಮೆ ಮಾಡುವ ಮತ್ತು 2030ರ ವೇಳೆಗೆ ಭಾರತದ ಆರ್ಥಿಕತೆಯಲ್ಲಿ ಇಂಗಾಲ ತೀವ್ರತೆಯನ್ನು 45% ಕಡಿಮೆ ಮಾಡುವ ದೂರದೃಷ್ಟಿಯನ್ನು ಹೊಂದಿದೆ.
ಮೋದಿ ಸಂಕಲ್ಪದ ಫಲಿತಾಂಶ
ಪ್ರಧಾನ ಮಂತ್ರಿ ಅವರ ದಿಟ್ಟ ನಾಯಕತ್ವದ ಸರ್ಕಾರವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಕಳೆದ 10 ವರ್ಷಗಳಲ್ಲಿ ಪರಿವರ್ತನೀಯ ಬದಲಾವಣೆಗಳಿಗೆ ತೆರೆದುಕೊಂಡಿರುವ ಒಂದು ವಲಯವಾಗಿದೆ.
ನವೀಕರಿಸಬಹುದಾದ ಇಂಧನ ಕ್ಷೇತ್ರದ ಮೇಲೆ ಪ್ರಧಾನ ಮಂತ್ರಿ ಅವರ ವಿಶೇಷ ಗಮನವು ಭಾರತವು ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನಕ್ಕೆ ಏರಲು ಸಹಾಯ ಮಾಡಿದೆ. ಪವನಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ 4ನೇ ಸ್ಥಾನ ಮತ್ತು ಸೌರಶಕ್ತಿ ಉತ್ಪಾದನೆ ಸಾಮರ್ಥ್ಯದಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ. ಸೌರಶಕ್ತಿ ಉತ್ಪಾದನೆ ಸಾಮರ್ಥ್ಯದಲ್ಲಿ ಭಾರತವು 2014ರ ವರೆಗೆ ಕೇವಲ 12.5 ಗಿಗಾವ್ಯಾಟ್ ಉತ್ಪಾದನೆ ನಡೆಸಿತ್ತು. ಆದರೆ, ಮೋದಿ ಸರ್ಕಾರದ ಅಡಿ, ನಾವು 2024 ಮೇ ತಿಂಗಳವರೆಗೆ ಅನ್ವಯವಾಗುವಂತೆ, 84 ಗಿಗಾವ್ಯಾಟ್ ಗಿಂತ ಹೆಚ್ಚಿನ ಉತ್ಪಾದನೆ ಸಾಧಿಸಿದ್ದೇವೆ. ಕೇವಲ 10 ವರ್ಷಗಳಲ್ಲಿ ಉತ್ಪಾದನೆ 30 ಪಟ್ಟು ಹೆಚ್ಚಾಗಿದೆ. ಪವನಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಸಹ 10 ವರ್ಷಗಳಲ್ಲಿ 21 ಗಿಗಾವ್ಯಾಟ್ ನಿಂದ 46 ಗಿಗಾವ್ಯಾಟ್ ಗೆ ಅಂದರೆ, 2.2 ಪಟ್ಟು ಭಾರಿ ಜಿಗಿತ ಕಂಡಿದ್ದೇವೆ. ನವೀಕರಿಬಸಬಹದಾದ ಇಂಧನಗಳು ಜನರಿಗೆ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ, ಗ್ರಿಡ್-ಸಂಪರ್ಕಿತ ಸೌರವಿದ್ಯುತ್ ಸ್ಥಾವರಗಳಿಗೆ 2010-11 ರಲ್ಲಿ ಇದ್ದ ಬೆಲೆ 10.95 ರು.ನಿಂದ 2023-24ರ ಅವಧಿಯಲ್ಲಿ 2.60 ರು.ಗೆ ಇಳಿಕೆ ಮಾಡಿ, 76% ಸುಂಕ ತಗ್ಗಿಸಲಾಗಿದೆ. ನವೀಕರಿಸಬಹುದಾದ ಇಂಧನ ವಲಯನ್ನು ಮುಂಚೂಣಿಗೆ ತರಲು ಪ್ರಧಾನ ಮಂತ್ರಿ ಮೋದಿ ಅವರು ಮುನ್ನಡೆದು, ರಾಜಮಾರ್ಗ ತೋರಿದ್ದಾರೆ. ಅದು ಈಗ ದೇಶಕ್ಕೆ ಸಮೃದ್ಧ ಲಾಭಾಂಶ ತರುತ್ತಿದೆ. ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ)ಯ ಮೂಲಕ ದೇಶೀಯ ವಿದ್ಯುತ್ ಕೋಶ ಉತ್ಪಾದನೆಗೆ ನೀಡಿರುವ ಪ್ರೋತ್ಸಾಹವು ಭಾರತದಲ್ಲಿ ಹಸಿರು ಬೆಳವಣಿಗೆಗೆ ವರದಾನವಾಗಿದೆ. ಇದು ಈ ವಲಯದಲ್ಲಿ ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕಾರಣವಾಗುತ್ತದೆ.
ಸೌರಶಕ್ತಿ, ಪವನಶಕ್ತಿಗೆ ಒತ್ತು
10 ವರ್ಷಗಳಲ್ಲಿ ಇಂಧನದ ಅಗತ್ಯ ಪೂರೈಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ಮತ್ತು ನಿಯೋಜನೆಯು ಕಾರ್ಯಾಚರಣೆ ಮಾದರಿಯಲ್ಲಿದೆ. ದೇಶದಲ್ಲಿ ನವೀಕರಿಸಬಹುದಾದ ಇಂಧನದ 200 ಗಿಗಾವ್ಯಾಟ್ ಸ್ಥಾಪಿತ ಸಾಮರ್ಥ್ಯದ ಸುಮಾರು 55% ಸೌರಶಕ್ತಿಯಿಂದಲೇ ಬರುತ್ತದೆ. ಸುಮಾರು 30% ಮತ್ತೊಂದು ಗಣನೀಯ ಭಾಗವು ಪವನಶಕ್ತಿಯಿಂದ ಬರುತ್ತದೆ.
ಸೌರ ಮಾಡ್ಯೂಲ್‌ಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಭಾರತವು ಉತ್ಪಾದನೆ ಸಂಪರ್ಕಿತ ಉತ್ತೇಜನಾ (ಪಿಎಲ್‌ಐ) ಯೋಜನೆಯಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರ ಜತೆಗೆ, ಹಸಿರು ಹೈಡ್ರೋಜನ್‌ನಲ್ಲಿ ಹಸಿರು ಹೈಡ್ರೋಜನ್ ಪರಿವರ್ತನೆಗಾಗಿ ಕಾರ್ಯತಂತ್ರ ಮಧ್ಯಸ್ಥಿಕೆಗಳು (ಸೈಟ್-ಎಸ್ಐಜಿಎಚ್ ಟಿ) ಕಾರ್ಯಕ್ರಮವು ಎಲೆಕ್ಟ್ರೋಲೈಸರ್‌ಗಳ ಉತ್ಪಾದನೆ ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ. ಭಾರತದ ಹಸಿರು ಹೈಡ್ರೋಜನ್ ಕಥೆಯೇ ಸ್ಫೂರ್ತಿದಾಯಕವಾಗಿದೆ. ಭಾರತವು ತನ್ನದೇ ಆದ ಲಸಿಕೆ ಉತ್ಪಾದಿಸುವ ಮೂಲಕ ಕೋವಿಡ್ ಲಸಿಕೆ ಸಾಧನೆಯಂತೆ, ಭಾರತವು ಹಸಿರು ಹೈಡ್ರೋಜನ್ ಉಪಕ್ರಮಗಳನ್ನು ಪ್ರವರ್ತಿಸುತ್ತಿದೆ. ಏಕೆಂದರೆ ಇದು ಜಾಗತಿಕವಾಗಿ ಉತ್ಪಾದನೆ ಮತ್ತು ರಫ್ತುಗಳ ಕೇಂದ್ರ(ಗಮ್ಯತಾಣ)ವಾಗುವ ಗುರಿ ಹೊಂದಿದೆ. ಇದು ಮತ್ತೆ ಕೆಲಸ ಮಾಡುತ್ತಿರುವ ಮೋದಿ ಮ್ಯಾಜಿಕ್!
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ, ಪಿಎಂ-ಕುಸುಮ್ ಯೋಜನೆ ಮತ್ತು ಕಡಲಾಚೆಯ ಪವನಶಕ್ತಿ ಯೋಜನೆಗಳು ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತವು ಹಲವಾರು ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದೆ. ವಾಸ್ತವವಾಗಿ, ದೇಶದಲ್ಲಿ ಇವಿ(ವಿದ್ಯುಚ್ಛಾಲಿತ ವಾಹನಗಳು) ಮೂಲಸೌಕರ್ಯ ಅಳವಡಿಸಿಕೊಳ್ಳುವ ವಿಷಯಕ್ಕೆ ಬಂದಾಗ, ಉರವಲು ಇಂಧನ ಮೂಲಗಳನ್ನು ಬಳಸದೆ, ಭವಿಷ್ಯದಲ್ಲಿ ವಿದ್ಯುಚ್ಛಾಲಿತ ವಾಹನಗಳನ್ನು ಚಾರ್ಜ್ ಮಾಡಲು ನವೀಕರಿಸಬಹುದಾದ ಮೂಲಗಳನ್ನು ಮಾತ್ರ ಬಳಸುವುದಕ್ಕೆ ದಾರಿ ಮಾಡಿಕೊಡಲು ಪ್ರಧಾನಿ ಉತ್ಸುಕರಾಗಿದ್ದಾರೆ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯು ನಾಗರಿಕರು ತಮ್ಮ ವಾಹನಗಳಿಗೆ ಶಕ್ತಿ ತುಂಬಲು ಮೇಲ್ಛಾವಣಿಯ ಸೌರಶಕ್ತಿ ಬಳಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಶ್ವಕ್ಕೇ ನಾವೀಗ ನಾಯಕರು
ಭಾರತದ ನವೀಕರಿಸಬಹುದಾದ ಇಂಧನ ವಲಯದ ಪ್ರಯಾಣವನ್ನು ಪಟ್ಟಿ ಮಾಡುತ್ತಿರುವ ಮಾಪನ, ಅಳತೆ ಮತ್ತು ವೇಗಕ್ಕೆ ಸರಿಸಾಟಿಯಿಲ್ಲ. ಪ್ರಧಾನಿ ಮೋದಿ ಅವರ ನೇರ ಹಸ್ತಕ್ಷೇಪದ ಪರಿಣಾಮ ಇದಾಗಿದೆ. ಈಗ, ಭಾರತವು ಈ ಜಾಗದಲ್ಲಿ ಕೇವಲ ಆಟಗಾರನಾಗದೆ, ಈ ವಲಯವನ್ನು ಮುನ್ನಡೆಸುತ್ತಿದ್ದೇವೆ! ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಪರಿವರ್ತನಾಶೀಲ ಪ್ರಯಾಣವು ನಮ್ಮನ್ನು ಮುಂಚೂಣಿಯಲ್ಲಿ ಇರಿಸಿದೆ. ಇದು ಕಳೆದ 10 ವರ್ಷಗಳಲ್ಲಿ ನಮಗೆ ಜಾಗತಿಕ ಮನ್ನಣೆ ನೀಡಿದೆ.
ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತಕ್ಕೆ ಇರುವ ಪ್ರಚಂಡ ಲಾಭಗಳ ಹೊರತಾಗಿಯೂ, ಅದರ ಮಹತ್ವಾಕಾಂಕ್ಷೆಯ ಗುರಿಗಳನ್ನು ಪೂರೈಸಲು ಎದುರಾಗಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸಬೇಕಾಗಿದೆ. ಉದಾಹರಣೆಗೆ, ಪ್ರಸ್ತುತ ವ್ಯವಸ್ಥೆಗೆ ದೊಡ್ಡ ಪ್ರಮಾಣದ ನವೀಕರಿಸಬಹುದಾದ ಇಂಧನವನ್ನು ಸೇರಿಸುವುದರಿಂದ ಪರಿಣಾಮಕಾರಿ ಪ್ರಸರಣ ಮತ್ತು ಶೇಖರಣೆಗಾಗಿ ಗ್ರಿಡ್ ಮೂಲಸೌಕರ್ಯವನ್ನು ಸುಧಾರಿಸುವ ಅಗತ್ಯವಿದೆ.
ಬೆಳವಣಿಗೆ ಕಾಣುತ್ತಿರುವ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಗಮನಾರ್ಹ ಹೂಡಿಕೆಗಳು ಬೇಕಾಗುತ್ತವೆ. ಸೌರ ಮತ್ತು ಪವನಶಕ್ತಿ ವೆಚ್ಚವು ಗಣನೀಯವಾಗಿ ಕಡಿಮೆಯಾಗಿದೆಯಾದರೂ, ಪ್ರಮುಖ ಯೋಜನೆಗಳಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣಕಾಸು ಒದಗಿಸುವ ಅಗತ್ಯವಿದೆ.
ಪ್ರಧಾನಿ ಮೋದಿ ಅವರ ಸದೃಢ ನಾಯಕತ್ವದಲ್ಲಿ, ಭಾರತವು ತನ್ನ ಆರ್ಥಿಕ ಅಭಿವೃದ್ಧಿಯಲ್ಲಿ ರಾಜಿ ಮಾಡಿಕೊಳ್ಳದೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯತ್ತ ಕಳೆದ 10 ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.
ನಮ್ಮ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 2014 ಮಾರ್ಚ್ ನಲ್ಲಿ ಇದ್ದ 75.52 ಗಿಗಾವ್ಯಾಟ್‌ನಿಂದ ಈಗ 203 ಗಿಗಾವ್ಯಾಟ್‌ಗಿಂತ ಹೆಚ್ಚಿದೆ. ಇದು 10 ವರ್ಷಗಳಲ್ಲಿ ಅಸಾಧಾರಣವಾದ 165% ಹೆಚ್ಚಳವಾಗಿದೆ.
ನವೀಕರಿಸಬಹುದಾದ ಇಂಧನವು ಒಂದು ಸಾಮೂಹಿಕ ಆಂದೋಲನವಾಗಬೇಕೆಂದು ನಾವು ಬಯಸುತ್ತೇವೆ. ಅಲ್ಲಿ ಸಾಮಾನ್ಯ ನಾಗರಿಕರು ಸಹ ಬ್ರ್ಯಾಂಡ್ ಅಂಬಾಸಿಡರ್ ಆಗಿರುತ್ತಾರೆ. ಏಕೆಂದರೆ ಇದು ಭವಿಷ್ಯದ ಪೀಳಿಗೆಯ ಸುರಕ್ಷತೆ ಒಳಗೊಂಡಿದೆ.
ಇಂದಿನಿಂದ ಗುಜರಾತಲ್ಲಿ ಸಮ್ಮೇಳನ
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು RE-INVEST-2024 ಸಮ್ಮೇಳನವನ್ನು 2024ರ ಸೆಪ್ಟೆಂಬರ್ 16-18ರಂದು ಗುಜರಾತ್‌ನ ಗಾಂಧಿನಗರದಲ್ಲಿ ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ವಲಯದ ಉತ್ತಮ ಅಭ್ಯಾಸಗಳ ಕಲಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು 2030ರ ವೇಳೆಗೆ ನಾವು 500 ಗಿಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವತ್ತ ಸಾಗುತ್ತಿರುವಾಗ ಹೊಸ ಮೈತ್ರಿಗಳನ್ನು ರೂಪಿಸುವ ಗುರಿಯೊಂದಿಗೆ ಜರ್ಮನಿ, ಡೆನ್ಮಾರ್ಕ್, ಆಸ್ಟ್ರೇಲಿಯಾ, ನಾರ್ವೆ ಮತ್ತು ಯುಎಇಯಿಂದ ಪ್ರತಿನಿಧಿಗಳು ಸಮ್ಮೇಳನಗಳು ಭಾಗವಹಿಸುವರು.
ನವೀಕರಿಸಬಹುದಾದ ಇಂಧನ ಕ್ಷೇತ್ರದ ಎಲ್ಲಾ ಪಾಲುದಾರರು ಮತ್ತು ಹೂಡಿಕೆದಾರರು, ರಾಜ್ಯ ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರು REINVEST ಶೃಂಗಸಭೆಯಲ್ಲಿ ಭಾಗವಹಿಸುವಂತೆ ನಾನು ಒತ್ತಾಯಿಸುತ್ತೇನೆ. ಇಲ್ಲಿ ಮುಖ್ಯಮಂತ್ರಿಗಳ ಸಮಗ್ರ ಸಭೆ, ಸಿಇಒ ದುಂಡುಮೇಜಿನ ಸಭೆ ಮತ್ತು ಹಲವಾರು ರಾಜ್ಯಗಳು, ದೇಶಗಳು ಮತ್ತು ತಾಂತ್ರಿಕ ಸೇರಿದಂತೆ 44 ಅಧಿವೇಶನಗಳು ಜರುಗಲಿವೆ. ಕಲಾಪಗಳು, ಸಂವಾದಗಳು, ಆರ್ಷಕ ವಿಚಾರ ವಿನಿಮಯಗಳು ಇಲ್ಲಿ ನಡೆಯಲಿವೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ, ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣವು ಸುಸ್ಥಿರತೆಯ ರಾಜಮಾರ್ಗದಲ್ಲಿ ಸಾಗಲು ಇತರೆ ಉದಯೋನ್ಮುಖ ಆರ್ಥಿಕತೆಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತದೆ.