ಸಾರಾಂಶ
ಪ್ರತಿಯೊಂದು ಸಮಾಜ ಹಾಗೂ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಆದರ್ಶವಿರುವುದು ಸಹಜ.
ಆದರೆ ಎಲ್ಲ ವ್ಯಕ್ತಿಗಳ, ಎಲ್ಲ ಸಮಾಜಗಳ ಹಾಗೂ ಎಲ್ಲ ರಾಷ್ಟ್ರಗಳ ಸಾರ್ವತ್ರಿಕ ಆದರ್ಶವ? ಅಲ್ಲ, ಸಾರ್ವತ್ರಿಕ ಅವಶ್ಯಕತೆ - ‘ಚಾರಿತ್ರ್ಯ’. ಚಾರಿತ್ರ್ಯವಂತ ಮಾತ್ರ ಚರಿತ್ರೆ ನಿರ್ಮಿಸಬಲ್ಲ.ಚಾರಿತ್ರ್ಯ ಎನ್ನುವುದು ವ್ಯಕ್ತಿಯೊಬ್ಬನ ಆಲೋಚನೆಗಳು, ಉದ್ದೇಶಗಳು, ಸ್ವಭಾವ ಹಾಗೂ ನಡೆವಳಿಕೆಗಳ ಒಟ್ಟು ಮೊತ್ತ. ಟೋಜರ್ ಎನ್ನುವವರು ಚಾರಿತ್ರ್ಯದ ಬಗ್ಗೆ ಹೀಗೆ ಹೇಳುತ್ತಾರೆ: ‘As the excellence of gold is its purity and the excellence of art is its beauty, so the excellence of man is his character.’ ಆಲ್ಬರ್ಟ್ ಐನ್‌ಸ್ಟೀನ್ ಹೇಳುತ್ತಾರೆ: ‘Most people say that it is intellect which makes a great scientist. They are wrong: it is character.’ ವ್ಯಕ್ತಿಯೊಬ್ಬ ಮೊದಲು ಮಾನವನಾದ ನಂತರ ಬರುವ ಪ್ರಶ್ನೆ ಆತ ವಿಜ್ಞಾನಿಯೋ, ಕಲಾವಿದನೋ, ಮತ್ತೊಂದೋ ಎನ್ನುವುದು. ಒಬ್ಬ ಶ್ರೇಷ್ಠ ವಿಜ್ಞಾನಿಯಾಗುವುದಕ್ಕೇ ‘ಚಾರಿತ್ರ್ಯ’ ಎನ್ನುವುದು ಅವಶ್ಯಕವಾದರೆ, ಇನ್ನು ನಿಜವಾದ ಅರ್ಥದಲ್ಲಿ ಒಬ್ಬ ‘ಮಾನವ’ನಾಗಲು ಅದು ಅನಿವಾರ್ಯ.ವ್ಯಕ್ತಿಯೊಬ್ಬನ ಚಾರಿತ್ರ್ಯನಿರ್ಮಾಣ ಪ್ರಾರಂಭವಾಗುವುದು ಭ್ರೂಣಾವಸ್ಥೆಯಿಂದಲೇ, ಅದು ಮುಂದುವರೆಯುವುದು ಮನೆ, ಶಾಲೆ ಮತ್ತು ಸಮಾಜದಲ್ಲಿ. ಸುಸಂಸ್ಕೃತ ಸಮಾಜವನ್ನು ಸೃಷ್ಠಿಸುವವರು ವ್ಯಕ್ತಿಗಳು; ಸುಸಂಸ್ಕೃತ ವ್ಯಕ್ತಿ ಆ ಸಮಾಜದ ಸೃಷ್ಟಿ. ಇಲ್ಲಿ ಸುಸಂಸ್ಕೃತ ಸಮಾಜವೆಂದರೆ ಸಚ್ಚಾರಿತ್ರ್ಯವಂತರ ಸಮೂಹ. ಇಂತಹ ಚಾರಿತ್ರ್ಯ ನಿರ್ಮಾಣದ ಮೊದಲ ಪಾಠಶಾಲೆ ಮನೆಯೇ. ಅದರಲ್ಲೂ ಮಗುವಿನ ಚಾರಿತ್ರ್ಯ ಎರಕ ಹೊಯ್ಯುವಲ್ಲಿ ತಾಯಿಯ ಪ್ರಭಾವ ಅತ್ಯಮೂಲ್ಯವಾದುದು.
ಮನು ಮಹರ್ಷಿಗಳು ಹೇಳುತ್ತಾರೆ:ಉಪಾಧ್ಯಾಯಾನ್ ದಶಾಚಾಯಃ ಆಚಾರ್ಯಾಣಾಂ ಶತಂ ಪಿತಾ?
ಸಹಸ್ರಂ ತು ಪಿತೃನ್ ಮಾತಾ ಗೌರವೇಣಾತಿರಿಚ್ಯತೇ?ರಾಮಕೃಷ್ಣ ಪರಂಪರೆಯ ಪೂಜ್ಯ ಸ್ವಾಮಿ ಬುಧಾನಂದಜೀರವರು ಹೇಳುತ್ತಾರೆ, ‘ಜೀವನ ಪರ್ಯಂತ ತಮ್ಮ ಸ್ವಂತ ಚಾರಿತ್ರ್ಯವನ್ನು ರೂಪಿಸಿಕೊಳ್ಳಲು ಸತತ ಪ್ರಯತ್ನಿಸುವ ತಂದೆ ತಾಯಿಗಳು ಮಾತ್ರವೇ ತಮ್ಮ ಮಕ್ಕಳ ನಿಜವಾದ ಚಾರಿತ್ರ್ಯವನ್ನು ರೂಪಿಸಬಲ್ಲರು.’ ಸ್ವಾಮಿ ವಿವೇಕಾನಂದರ ಜೀವನದಲ್ಲಿ ಅವರ ಜನ್ಮದಾರಭ್ಯ ಪ್ರತಿ ಹಂತದಲ್ಲಿಯೂ ಅವರ ಚಾರಿತ್ರ್ಯನಿರ್ಮಾಣದ ಪರಿ ಅಧ್ಯಯನ ಯೋಗ್ಯ. ಅದು ನಮ್ಮ ಮತ್ತು ನಮ್ಮ ಮಕ್ಕಳ ಚಾರಿತ್ರ್ಯ ನಿರ್ಮಾಣಕ್ಕೊಂದು ಪಥದರ್ಶಿ.
ತಾಯಿ ಭುವನೇಶ್ವರಿದೇವಿ ಹಾಗೂ ಶ್ರೀ ವಿಶ್ವನಾಥದತ್ತರ ವಿಶೇಷ ಪ್ರಾರ್ಥನೆಯ ಫಲವಾಗಿ ಕಾಶಿ ವಿಶ್ವೇಶ್ವರ ಶಿವನ ವರಪ್ರಸಾದವಾಗಿ ಜನಿಸಿದವನೇ ‘ನರೇಂದ್ರ’. ಭಗವಂತನಲ್ಲಿ ಶರಣಾಗಿದ್ದುಕೊಂಡು ಜೀವನದ ಸಂಕಷ್ಟಗಳನ್ನು ಎದುರಿಸಬೇಕೆಂಬುದೇ ಭುವನೇಶ್ವರಿದೇವಿಯ ಧ್ಯೇಯ ಮಂತ್ರ.ಅವಳಿಂದ ‘ಮಗೂ, ನೀನು ನಿನ್ನ ಜೀವನದುದ್ದಕ್ಕೂ ಪರಿಶುದ್ಧನಾಗಿರಬೇಕು, ನಿನ್ನ ಆತ್ಮಗೌರವವನ್ನು ಯಾವಾಗಲೂ ಕಾಪಾಡಿಕೋ; ಹಾಗೆಯೇ ಇತರರ ಗೌರವಕ್ಕೆ ಧಕ್ಕೆ ತರದಂತೆ ನೋಡಿಕೋ. ಯಾವಾಗಲೂ ಸಮಾಧಾನದಿಂದ ಇರುವುದನ್ನು ಅಭ್ಯಾಸಮಾಡು. ಆದರೆ ಸಮಯ ಬಂದಾಗ ಕಲ್ಲೆದೆಯವನಾಗಿರುವುದಕ್ಕೂ ಸಿದ್ದನಾಗಿರು’ ಎನ್ನುವ ಮಾತುಗಳನ್ನು ಕೇಳುತ್ತಾ ಬೆಳೆದ ನರೇಂದ್ರ ಮುಂದೆ ಸ್ವಾಮಿ ವಿವೇಕಾನಂದರಾಗಿ ಆ ಮಾತುಗಳ ಮೂರ್ತರೂಪವೇ ಆದದ್ದು ಈಗ ಇತಿಹಾಸ.
ಇನ್ನು ವಿಶ್ವನಾಥದತ್ತ ತನ್ನ ಮಗನ ವ್ಯಕ್ತಿತ್ವವನ್ನು ರೂಪಿಸಿದ ರೀತಿ ಜಗತ್ತಿನ ಪ್ರತಿಯೊಬ್ಬ ತಂದೆಗೂ ಆದರ್ಶಪ್ರಾಯ. ತನ್ನ ಮಕ್ಕಳಿಗಾಗಿ ಹಣವನ್ನು ಕೂಡಿಡುವುದರಲ್ಲಿ ನಂಬಿಕೆ ಇಟ್ಟವನಲ್ಲ ಆತ. ಬದಲಾಗಿ ಮಕ್ಕಳನ್ನು ಗುಣವಂತರನ್ನಾಗಿ ಮಾಡಬೇಕೇ ಹೊರತು ಧನವಂತರನ್ನಾಗಿ ಅಲ್ಲ, ಎಂದು ನಂಬಿದವ. ಜೊತೆಗೆ ವಿಶ್ವನಾಥದತ್ತ ತನ್ನ ಮಗನಿಗೆ, ‘ಯಾವುದಕ್ಕೂ ಆಶ್ಚರ್ಯಪಡದಿರುವುದೇ ಉತ್ತಮ ನಡವಳಿಕೆಯ ಲಕ್ಷಣ’ ಎಂದು ಕಲಿಸಿದ ಮಹತ್ತರವಾದ ಪಾಠ. ಸ್ವಾಮಿ ವಿವೇಕಾನಂದರಿಗೆ ಅವರ ಜೀವನದುದ್ದಕ್ಕೂ ಅನುಭವ ವೇದ್ಯವಾದ ಸಂದರ್ಭಗಳು ಅಸಂಖ್ಯ.ಬಡತನವೆಂಬುದು ಮಾನವನನ್ನು ಕ್ರೂರಿಯಾಗಿಸಿದರೆ ಸಿರಿತನವು ಆತನನ್ನು ಧೂರ್ತನನ್ನಾಗಿಸುತ್ತದೆ ಎನ್ನುವುದು ಅತಿ ಸಹಜದಂತೆ ಕಂಡರೂ ಗಮನಿಸಿ ನೋಡಿದಾಗ ವೇದ್ಯವಾಗುವ ವಿಚಾರ - ಈ ಎರಡೂ ರೀತಿಯ ಅತಿರೇಕಗಳು ಚಾರಿತ್ರ್ಯಹೀನತೆಯ ದುಷ್ಫಲಗಳು ಎಂಬುದು. ಆದರೆ ಇದೇ ಸಿರಿತನ ಬಡತನಗಳು ಸಚ್ಚಾರಿತ್ರ್ಯವಂತನ ವಿಷಯದಲ್ಲಿ ಅವನ ವ್ಯಕ್ತಿತ್ವವನ್ನು ಪುಟಕ್ಕಿಟ್ಟು ಅಪರಂಜಿಯನ್ನಾಗಿಸುವ ಕುಲುಮೆಗಳು. ಮಹಾನ್ ದಾರ್ಶನಿಕ ಕನ್‌ಫ್ಯೂಷಿಯಸ್ ಹೇಳುತ್ತಾನೆ - ‘ಯಾವ ವ್ಯಕ್ತಿ ನಿಜವಾದ ಮನುಷ್ಯನಲ್ಲವೋ, ಅರ್ಥಾತ್ ಸಚ್ಚಾರಿತ್ರ್ಯವಂತನಲ್ಲವೋ ಆತ ದೀರ್ಘಕಾಲ ಬಡತನವನ್ನು ಸಹಿಸಲಾರ, ಸಿರಿವಂತಿಕೆಯನ್ನೂ ಸಹಿಸಲಾರ.’
ಹುಟ್ಟಿನಿಂದಲೇ ಅರಮನೆಯಂತಹ ಮನೆಯಲ್ಲಿ ಶ್ರೀಮಂತಿಕೆಯ ವೈಭವವನ್ನಷ್ಟೂ ಕಂಡಿದ್ದ ನರೇಂದ್ರ ಮತ್ತು ಅವನ ಕುಟುಂಬ ವಿಶ್ವನಾಥದತ್ತನ ಅಕಾಲಿಕ ಮರಣದ ಮರುಕ್ಷಣವೇ ಅಪಾರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಯಿತು. ಸಾವಿರಾರು ಜನರಿಗೆ ಅನ್ನದಾನ ಮಾಡಿದ್ದ ಅವನ ಮನೆತನ ಹೊತ್ತೊಪ್ಪತ್ತಿನಲ್ಲಿ ಹಿಡಿ ಅನ್ನಕ್ಕಾಗಿ ಪರಿತಪಿಸುವಂತಾಯಿತು. ಆಗ ನರೇಂದ್ರನು ಕೌಟುಂಬಿಕ ಹೊಣೆಗಾರಿಕೆಯನ್ನು ಹೊತ್ತು, ಕಷ್ಟಪಟ್ಟು, ಅದನ್ನು ನಿರ್ವಹಿಸುತ್ತಾ ಬಂದ. ಅನ್ಯಾಯದ ಮಾರ್ಗಗಳಿಂದ ಹಣ ಸಂಪಾದನೆ ಮಾಡಿದ್ದ ನರೇಂದ್ರನ ಹಲವಾರು ಮಿತ್ರರು ಆತನ ಆರ್ಥಿಕ ಮುಗ್ಗಟ್ಟನ್ನು ಕಂಡು ಮರುಗಿ ತಮ್ಮೊಂದಿಗೆ ಕೈ ಜೋಡಿಸಲು ಆಹ್ವಾನವಿತ್ತಾಗ ನರೇಂದ್ರನು ಸ್ಪಷ್ಟವಾಗಿ ನಿರಾಕರಿಸಿದ. ಇದು ನರೇಂದ್ರನ ನೈತಿಕತೆಯೆಂಬುದು ಮರಳಿನ ಮೇಲೆ ಕಟ್ಟಿದ ಕಟ್ಟಡವಲ್ಲ ಎಂಬುದನ್ನು ಆ ಸ್ನೇಹಿತರಿಗೆ ಸಾಬೀತು ಪಡಿಸಿತು.ಆರ್ಥಿಕ ಸಂಕಷ್ಟದಲ್ಲಿದ್ದ ನರೇಂದ್ರನಿಗೆ ಆತನ ಮೇಲೆ ಕಣ್ಣಿಟ್ಟಿದ್ದ ಶ್ರೀಮಂತ ಮಹಿಳೆಯೊಬ್ಬಳು ಅನೈತಿಕ ಸಲಹೆಯನಿತ್ತು ಅದನ್ನು ಪೂರೈಸಿದರೆ ಆತನ ಸಂಕಷ್ಟಗಳನ್ನೆಲ್ಲ ತಾನು ಪರಿಹರಿಸುವುದಾಗಿ ಸೂಚಿಸಿದಾಗ ಆತ ಆಕೆಯ ಸಲಹೆಯನ್ನು ಕಟುವಾಗಿ ತುಚ್ಛೀಕರಿಸಿದ.
ಮನೆಯವರ ಕಣ್ಣುತಪ್ಪಿಸಿಯಾದರೂ ಕೈಗೆ ಸಿಕ್ಕಿದ್ದನ್ನು ದೀನ ದಲಿತರಿಗೆ ದಾನಮಾಡಿಬಿಡುತ್ತಿದ್ದ ನರೇಂದ್ರನಲ್ಲಿ ಹೇಗೆ ‘ಸಿರಿತನ’ ಎನ್ನುವುದು ಅಮಲೇರಿಸಲಿಲ್ಲವೂ ಅಂತೆಯೇ ಅವನ ಬದುಕಿನಲ್ಲಿ ಎದುರಾದ ಕಷ್ಟಗಳಿಗೆ ಆತನನ್ನು ನೈತಿಕ ಶಿಖರದಿಂದ ಜಾರಿಸಲೂ ಸಾಧ್ಯವಾಗಲಿಲ್ಲ. ಇದು ನಿಜವಾದ ಸಚ್ಛರಿತನ ಲಕ್ಷಣ. ದಾರಿದ್ರ್ಯದಲ್ಲೂ ಪ್ರಕಾಶಿಸುವ ದಿವ್ಯ ತೇಜಸ್ಸು ಚಾರಿತ್ರ್ಯ.ಮುಂದೆ ವಿವೇಕಾನಂದರೇ ಹೇಳುತ್ತಾರೆ - ‘Neither money pays, nor name, nor fame, it is CHARACTER that can cleave through adamantine walls of difficulties’ ಮತ್ತೊಮ್ಮೆ ಸ್ವಾಮೀಜಿ ಹೇಳಿದ್ದುಂಟು, ‘ಅಮೇರಿಕಾ ದೇಶದಲ್ಲಿ ನನ್ನ ಮೊದಲ ಉಪನ್ಯಾಸದಲ್ಲಿ ಶೋತೃಗಳನ್ನು ಕುರಿತು ನಾನು ‘ಸೋದರ ಸೋದರಿಯರೇ’ ಎಂದು ಸಂಬೋಧಿಸಿದೆ. ನೆರೆದಿದ್ದವರೆಲ್ಲಾ ಹರ್ಷೋದ್ಘಾರಗೈದರು. ಅವರಲ್ಲಿನ ಉತ್ಸಾಹ ಹಾಗೂ ಭಾವನೆಗಳು ಪುಟಿದೆದ್ದು ಅವರುಗಳನ್ನು ತುದಿಗಾಲ ಮೇಲೆ ನಿಲ್ಲಿಸಿತು. ಅವರ ಈ ನಡವಳಿಕೆಗೆ ಕಾರಣವೇನಿರಬಹುದು?’
‘ನನ್ನಲ್ಲಿರಬಹುದಾದ ಯಾವ ವಿಶೇಷ ಶಕ್ತಿಯು, ಅಪರೂಪವಾದ ಶಕ್ತಿಯು ಅವರುಗಳನ್ನು ಈ ರೀತಿಯಲ್ಲಿ ಪ್ರತಿಕ್ರಿಯಿಸಲು ಪ್ರೇರೇಪಿಸಿರಬಹುದು? ನನ್ನಲ್ಲಿರುವ ವಿಶೇಷ ಶಕ್ತಿಯ ಬಗ್ಗೆ ನೀವು ತಿಳಿಯಬಯಸಿದಾಗ ನಿಮಗೆ ಆಶ್ಚರ್ಯವಾಗಬಹುದು. ನಿಜ! ಇದುವರೆಗೂ ನನ್ನ ಜೀವನದಲ್ಲಿ ಯಾವುದೇ ಲೈಂಗಿಕ ಆಲೋಚನೆಯು ನನ್ನ ಮನಸ್ಸಿನಲ್ಲಿ ಸುಳಿಯಲು ಆಸ್ಪದ ನೀಡಲಿಲ್ಲ. ನನ್ನ ಮನಸ್ಸು, ಆಲೋಚನೆ ಮತ್ತು ಸಾಮರ್ಥ್ಯಗಳನ್ನು ಉನ್ನತ ಸ್ತರದಲ್ಲಿ ಸುಶಿಕ್ಷಿತಗೊಳಿಸಿದ್ದರಿಂದ ನನ್ನನ್ನು ಯಾವ ಪ್ರಲೋಭನೆಗಳೂ ನಿಯಂತ್ರಿಸಲಾರದವು.’‘By the observance of Brahmacharya all learning can be mastered in a short time – one has an unfailing memory of what one hears or knows but once’ ಎಂದಿರುವ ಸ್ವಾಮೀಜಿ, ‘ಪರಿಪೂರ್ಣ ಬ್ರಹ್ಮಚರ್ಯವು ವ್ಯಕ್ತಿಯಲ್ಲಿ ಅತ್ಯುತ್ತಮವಾದ ಬೌದ್ದಿಕ ಹಾಗೂ ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ದೊರಕಿಸಿಕೊಡುತ್ತದೆ’ ಎನ್ನುತ್ತಾರೆ.
ನರೇಂದ್ರನ ಹಾಡುಗಾರಿಕೆ, ವಾದ್ಯನುಡಿಸುವಿಕೆ, ಅವುಗಳಿಗಷ್ಟೇ ಅಲ್ಲದೆ ಜಿತೇಂದ್ರಿಯನಾದ ಆತನ ಮನಸ್ಸು ಸದಾಕಾಲ ಭಗವಂತನೆಡೆಗೇ ಇರುವುದನ್ನು ಶ್ರೀರಾಮಕೃಷ್ಣರು ಗುರುತಿಸಿದ್ದರು. ‘ನರಕದ ಭೀತಿಗಾಗಿ ದೇವರನ್ನು ನಂಬುವ ಹೇಡಿಯಲ್ಲ ನಾನು’ ಎಂಬ ನರೇಂದ್ರನ ಮಾತಿನಲ್ಲಿ ಅವನು ನಿರ್ಭಯತೆಯ ಮೂರ್ತರೂಪದಂತಿದ್ದ ಎಂಬುದನ್ನು ತೋರಿಸುತ್ತದೆ. ನರೇಂದ್ರನ್ನು ಕುರಿತು ಯಾರಾದರೂ ಟೀಕಿಸಿ ಮಾತನಾಡಿದರೆ, ಶ್ರೀರಾಮಕೃಷ್ಣರು ‘ಏನು ಮಾತನಾಡುತ್ತಿದ್ದೀಯೆ ನೀನು? ಶಿವನಿಂದೆ! ಶಿವನಿಂದೆ ಮಾಡುತ್ತಿದ್ದೀ!’ ಎಂದು ಗದರುತ್ತಿದ್ದುದು ನರೇಂದ್ರನ ಶುದ್ದ ಚಾರಿತ್ರ್ಯದ ಬಗ್ಗೆ ಅವರಿತ್ತ ಯೋಗ್ಯತಾಪತ್ರವಲ್ಲದೆ ಮತ್ತೇನು?ಚಾರಿತ್ರ್ಯದ ಲಕ್ಷಣವನ್ನು ವಿವರಿಸುತ್ತ ಸ್ವಾಮಿ ವಿವೇಕಾನಂದರು ಹೇಳುತ್ತಾರೆ - ‘ಯಾವುದೇ ವ್ಯಕ್ತಿಯ ಚಾರಿತ್ರ್ಯವು ಆತನ ಒಲವು, ಸ್ವಭಾವಗಳ ಸಮಷ್ಟಿಯಲ್ಲದೆ ಬೇರೆ ಅಲ್ಲ. ನಮ್ಮ ಆಲೋಚನೆಗಳೇ ನಮ್ಮನ್ನು ಈ ರೀತಿಯಾಗಿ ರೂಪಿಸಿವೆ. ಭಾವನೆಗಳು ಬದುಕುತ್ತವೆ! ಅವು ದೂರ ಸಾಗುತ್ತವೆ. ಈ ಕಾರಣದಿಂದ ನೀವು ಏನನ್ನು ಆಲೋಚಿಸುವಿರಿ ಎಂಬುದರ ಬಗ್ಗೆ ಎಚ್ಚರವಾಗಿರಿ. ನಾವು ಮಾಡುವ ಪ್ರತಿಯೊಂದು ಕೆಲಸ, ಶರೀರದ ಪ್ರತಿಯೊಂದು ಚಲನೆ, ಭಾವಿಸುವ ಪ್ರತಿಯೊಂದು ಭಾವನೆ ಚಿತ್ತದಲ್ಲಿ ಮುದ್ರೆಯನ್ನೊತ್ತುತ್ತವೆ. ಮನಸ್ಸಿನ ಮೇಲಿನ ಈ ಸಂಸ್ಕಾರಗಳ ಒಟ್ಟು ಮೊತ್ತವೇ ಚಾರಿತ್ರ್ಯ. ಪ್ರತಿಯೊಬ್ಬ ವ್ಯಕ್ತಿಯ ಚಾರಿತ್ರ್ಯ ಈ ಸಂಸ್ಕಾರಗಳ ಒಟ್ಟು ಮೊತ್ತದಿಂದ ನಿರ್ಧಾರವಾಗುತ್ತದೆ. ಉತ್ತಮ ಭಾವನೆಗಳು ಮೇಲುಗೈ ಸಾಧಿಸಿದರೆ ಚಾರಿತ್ರ್ಯವು ಉತ್ತಮಗೊಳ್ಳುತ್ತದೆ. ಕೆಟ್ಟವಾದರೆ ಅದೂ ಕೆಟ್ಟದಾಗುತ್ತದೆ.’
ಸ್ವಾಮಿ ಬುಧಾನಂದಜೀರವರು ಹೇಳುತ್ತಾರೆ - ‘ಜೀವನದ ಯಾವುದೇ ಗೂಢ ಸಮಸ್ಯೆಯ ಕೀಲಿಕೈ ಚಾರಿತ್ರ್ಯ. ಅದು ಪ್ರತಿಯೊಂದು ದುಷ್ಟತನದ ಎಲ್ಲೆಯನ್ನು ಬೇಧಿಸಬಲ್ಲದು. ಚಾರಿತ್ರ್ಯದಿಂದ ಬಿಡಿಸಲಾಗದ ರಹಸ್ಯವಿಲ್ಲ, ವಾಸಿ ಮಾಡಲಾಗದ ಗಾಯವಿಲ್ಲ, ತುಂಬಲಾರದ ಕೊರತೆ ಹಾಗೂ ನಷ್ಟವಿಲ್ಲ. ಈ ಕಾರಣದಿಂದ ಜೀವನದ ಎಲ್ಲಾ ಕ್ರಿಯಾತ್ಮಕ ಪ್ರಯತ್ನಗಳಲ್ಲಿ ತನ್ನ ಸ್ವಂತ ಚಾರಿತ್ರ್ಯ ನಿರ್ಮಿಸುವ ವಿಧಾನವನ್ನು ತಿಳಿದುಕೊಳ್ಳುವುದು ಹಾಗೂ ತನ್ನ ಜೊತೆಯಲ್ಲಿರುವವರ ಚಾರಿತ್ರ್ಯ ನಿರ್ಮಾಣಕ್ಕೆ ನೆರವಾಗುವುದು ಅತಿ ಮುಖ್ಯವಾಗಿ ಆಗಬೇಕಾದ ಕೆಲಸ.’‘ಶಿಕ್ಷಣವೇ ಸರ್ವ ಸಮಸ್ಯೆಗಳಿಗೆ ರಾಮಬಾಣ’ ಎಂದರಿತಿದ್ದ ಸ್ವಾಮಿ ವಿವೇಕಾನಂದರು, ‘ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣವೆಂದರೆ ಚಾರಿತ್ರ್ಯ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ಮಾಣದ ಮೂಲಕ ಮಾತ್ರವೇ ರಾಷ್ಟ್ರನಿರ್ಮಾಣವನ್ನು ಸಾಧಿಸಬಹುದು’ ಎಂಬ ಹೇಳಿದರು. ಅವರ ಪ್ರಕಾರ ಶಿಕ್ಷಣವು ಚಾರಿತ್ರ್ಯವಂತರನ್ನು ರೂಪಿಸಬೇಕು.
ಸ್ವಾಮಿ ವಿವೇಕಾನಂದರ ಸಂದೇಶಗಳಲ್ಲಿ ‘Be and make’ ಎಂಬುದು ಜನಜನಿತವಾದುದು. ಶುದ್ಧ ಚಾರಿತ್ರ್ಯದ ಮೂರ್ತರೂಪವೇ ಅವರಾಗಿದ್ದರಲ್ಲದೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವರು ಸೂಚಿಸಿದ ವಿಚಾರಗಳು ಸಾರ್ವಕಾಲಿಕವಾಗಿವೆ.