ಸಾರಾಂಶ
ಮೋದಿ ಮತ್ತಿತರ ವಿದೇಶಿ ಗಣ್ಯರು ನನ್ನನ್ನು ಭೇಟಿಯಾಗಲು ಬಂದಾಗ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಕಚೇರಿಗಳ ಮುಂದಿನ ಟೆಂಟ್, ಭಿತ್ತಿಪತ್ರ, ರಸ್ತೆ ಗುಂಡಿಗಳನ್ನು ನೋಡುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ವಾಷಿಂಗ್ಟನ್ ಡಿಸಿಯ ಸ್ವಚ್ಛತೆಗೆ ಸೂಚಿಸಿದ್ದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ನ್ಯೂಯಾರ್ಕ್/ವಾಷಿಂಗ್ಟನ್: ಪ್ರಧಾನಿ ಮೋದಿ ಮತ್ತಿತರ ವಿದೇಶಿ ಗಣ್ಯರು ನನ್ನನ್ನು ಭೇಟಿಯಾಗಲು ಬಂದಾಗ ರಾಷ್ಟ್ರರಾಜಧಾನಿಯಲ್ಲಿ ಸರ್ಕಾರಿ ಕಚೇರಿಗಳ ಮುಂದಿನ ಟೆಂಟ್, ಭಿತ್ತಿಪತ್ರ, ರಸ್ತೆ ಗುಂಡಿಗಳನ್ನು ನೋಡುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ನಾನು ವಾಷಿಂಗ್ಟನ್ ಡಿಸಿಯ ಸ್ವಚ್ಛತೆಗೆ ಸೂಚಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದ ರಾಜಧಾನಿಯನ್ನು ಸ್ವಚ್ಛ, ಉತ್ತಮ ಮತ್ತು ಹಿಂದೆಂದಿಗಿಂತಲೂ ಸುರಕ್ಷಿತ ಸ್ಥಳವನ್ನಾಗಿಸಲಾಗುವುದು. ವಾಷಿಂಗ್ಟನ್ ಡಿಸಿಯು ಎಲ್ಲರೂ ಮೆಚ್ಚುವಂಥ ನಗರವಾಗಬೇಕು ಎಂದು ಇದೇ ವೇಳೆ ಹೇಳಿದ್ದಾರೆ.
'ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್, ಬ್ರಿಟನ್ ಪ್ರಧಾನಿ ಮತ್ತಿತರರು ಒಂದೂವರೆ ವಾರಗಳ ಹಿಂದೆ ನನ್ನನ್ನು ಭೇಟಿಯಾಗಲು ಅಮೆರಿಕಕ್ಕೆ ಆಗಮಿಸಿದ್ದರು. ಆಗ ಅವರು ನಮ್ಮ ನಗರದಲ್ಲಿ ಟೆಂಟ್, ಭಿತ್ತಿಪತ್ರ, ರಸ್ತೆಗುಂಡಿಗಳನ್ನು ನೋಡುವುದು ಇಷ್ಟವಿರಲಿಲ್ಲ. ಹಾಗಾಗಿ ನಾನು ನಗರವನ್ನು ಸುಂದರಗೊಳಿಸಿದ್ದೇನೆ. ಅದೇ ರೀತಿ ನಾವು ನಮ್ಮ ರಾಜಧಾನಿಯನ್ನು ಅಪರಾಧಮುಕ್ತ ಮಾಡಬೇಕಿದೆ, ಇಲ್ಲಿಗೆ ಬರುವ ಜನ ದರೋಡೆ, ಗುಂಡಿನ ದಾಳಿ ಅಥವಾ ಅತ್ಯಾಚಾರಕ್ಕೊಳಗಾಗುವಂಥ ಸ್ಥಿತಿ ನಿರ್ಮಾಣವಾಗಬಾರದು. ಈ ನಗರವನ್ನು ಎಲ್ಲಾ ರೀತಿಯಿಂದ ಸ್ವಚ್ಛಗೊಳಿಸಲಾಗುವುದು'''''''' ಎಂದು ಟ್ರಂಪ್ ಹೇಳಿದರು.
ರಾಷ್ಟ್ರ ರಾಜಧಾನಿಯನ್ನು ಸ್ವಚ್ಛಗೊಳಿಸುವಲ್ಲಿ ವಾಷಿಂಗ್ಟನ್ ಡಿಸಿ ಮೇಯರ್ ಮುರಿಯೆಲ್ ಬೌಸರ್ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಇದೇ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಅವರು ವೈಟ್‌ಹೌಸ್‌ಗೆ ಭೇಟಿ ನೀಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಮತ್ತಿತರ ಗಣ್ಯರು ಭೇಟಿ ನೀಡಿದ್ದರು.