ನೇಪಾಳದಂತೆ ದಂಗೆ ನಮ್ಮಲ್ಲೂ ಆದೀತು ಹುಷಾರ್‌ : ಭಾಗ್ವತ್‌

| N/A | Published : Oct 03 2025, 01:07 AM IST / Updated: Oct 03 2025, 02:47 AM IST

ಸಾರಾಂಶ

‘ಭಾರತದ ನೆರೆಯ ದೇಶಗಳಲ್ಲಿನ ಅಶಾಂತಿಗೆ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕದ ಕೊರತೆ, ಅಸಮರ್ಥ ಆಡಳಿತವೇ ಕಾರಣ. ಭಾರತದಲ್ಲೂ ಅಂತಹ ಅಶಾಂತಿ ಬಯಸುವ ಮನಸ್ಥಿತಿ ಸಕ್ರಿಯವಾಗಿದೆ. ನಮ್ಮಲ್ಲೂ ಸಂಪರ್ಕದ ಕೊರತೆ ಆದರೆ ಇದೇ ಪರಿಸ್ಥಿತಿ ಬರಬಹುದು’  - ಮೋಹನ್‌ ಭಾಗವತ್‌ ಎಚ್ಚರಿಕೆ  

  ನಾಗ್ಪುರ :  ‘ಭಾರತದ ನೆರೆಯ ದೇಶಗಳಲ್ಲಿನ ಅಶಾಂತಿಗೆ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕದ ಕೊರತೆ, ಅಸಮರ್ಥ ಆಡಳಿತವೇ ಕಾರಣ. ಭಾರತದಲ್ಲೂ ಅಂತಹ ಅಶಾಂತಿ ಬಯಸುವ ಮನಸ್ಥಿತಿ ಸಕ್ರಿಯವಾಗಿದೆ. ನಮ್ಮಲ್ಲೂ ಸಂಪರ್ಕದ ಕೊರತೆ ಆದರೆ ಇದೇ ಪರಿಸ್ಥಿತಿ ಬರಬಹುದು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿನ ರೇಶಿಂಬಾಗ್‌ನಲ್ಲಿ ನಡೆದ ಆರ್‌ಎಸ್‌ಎಸ್‌ ವಿಜಯದಶಮಿ ಕಾರ್ಯಕ್ರಮದಲ್ಲಿ ಹಾಗೂ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ‘ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳದಲ್ಲಿ ನಡೆದ ಗಲಭೆಗಳ ರೀತಿಯೇ ಭಾರತದಲ್ಲೂ ಕೆಲವು ಶಕ್ತಿಗಳು ದೇಶದ ಒಳಗೆ ಮತ್ತು ಹೊರಗೆ ಸಕ್ರಿಯವಾಗಿವೆ. ಅಲ್ಲಿನ ನಡೆದ ಹಿಂಸೆಗೆ ಸರ್ಕಾರ ಮತ್ತು ಸಮಾಜದ ನಡುವಿನ ಸಂಪರ್ಕ, ಆಡಳಿತಗಾರರ ಕೊರತೆಯೇ ಕಾರಣ. ಆದರೆ, ಹಿಂಸೆಗೆ ಅಪೇಕ್ಷಣೀಯ ಬದಲಾವಣೆ ತರುವ ಶಕ್ತಿಯಿರುವುದಿಲ್ಲ. ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಇಂಥ ಬದಲಾವಣೆ ಸಾಧ್ಯ. ಸರ್ಕಾರಗಳು ಜನರು ಹಾಗೂ ತಮ್ಮ ನಡುವೆ ಸಂಪರ್ಕ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಪಹಲ್ಗಾಂ ವಿಚಾರದ ಬಗ್ಗೆಯೂ ಮಾತನಾಡಿದ ಅವರು, ‘26 ಭಾರತೀಯರನ್ನು ಅವರ ಧರ್ಮ ಪರೀಕ್ಷಿಸಿ ಕೊಂದರು. ಇದು ಅಪಾರ ನೋವು ಮತ್ತು ಕೋಪವನ್ನು ಉಂಟು ಮಾಡಿತು. ನಾವು ಇತರ ದೇಶಗಳೊಂದಿಗೆ ಸ್ನೇಹ ಸಂಬಂಧ ಉಳಿಸಿಕೊಂಡಿದ್ದೇವೆ ಮತ್ತು ನಾವು ಅದನ್ನು ಮುಂದುವರೆಸುತ್ತೇವೆ. ಆದರೆ ನಮ್ಮ ಭದ್ರತೆಯ ವಿಷಯ ಬಂದಾಗ ನಾವು ಹೆಚ್ಚು ಜಾಗರೂಕರಾಗಿರಬೇಕು. ಪಹಲ್ಗಾಂ ದಾಳಿಯ ನಂತರ ಇತರ ದೇಶಗಳ ನೀತಿ ಮತ್ತು ಪ್ರತಿಕ್ರಿಯೆಗಳು ಅವುಗಳಲ್ಲಿ ಯಾರು ನಮ್ಮ ಸ್ನೇಹಿತರು ಮತ್ತು ಎಷ್ಟರ ಮಟ್ಟಿಗೆ ಎಂಬುದನ್ನು ಬಹಿರಂಗಪಡಿಸಿವೆ’ ಎಂದು ಹೇಳಿದರು.

ಇದೇ ವೇಳೆ ‘ಹಿಂದೂ ಸಮಾಜದ ಶಕ್ತಿ ಮತ್ತು ಗುಣಲಕ್ಷಣಗಳು ಏಕತೆಯ ಖಚಿತತೆ ನೀಡುತ್ತದೆ. ಹಿಂದೂ ಸಮಾಜ ಹೊಣೆಗಾರಿಕೆಯುಳ್ಳ ಸಮಾಜ. ಇಲ್ಲಿ ನಾವು ಮತ್ತು ಅವರು ಎಂಬುದಕ್ಕೆ ಅವಕಾಶವೇ ಇಲ್ಲ. ಒಡೆದ ಮನೆ ಎಂದಿಗೂ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡಾ ವಿಶಿಷ್ಟ. ಹಲವಾರು ದಾಳಿಕೋರರು ಬಂದರು, ಹೋದರು ಆದರೆ ನಮ್ಮ ಬಾಳ್ವಿಕೆ ರೀತಿ ಅದನ್ನು ಸಹಿಸಿಕೊಂಡಿತು. ನಮ್ಮಲ್ಲಿ ಅಂತರ್ಗತವಾಗಿರುವ ಸಂಸ್ಕೃತಿಯೇ ನಮ್ಮ ಶಕ್ತಿ’ ಎಂದು ಭಾಗವತ್‌ ಹೇಳಿದರು.

ಜೊತೆಗೆ, ಆತ್ಮನಿರ್ಭರತೆ ಬಗ್ಗೆ ಒತ್ತು ನೀಡಿದ ಭಾಗವತ್‌, ಸ್ವದೇಶಿ ಮತ್ತು ಸ್ವಾವಲಂಬನೆ ನಮ್ಮ ಗುರಿಯಾಗಬೇಕು. ಜಾಗತಿಕ ಸ್ವಾತಂತ್ರ್ಯ ನಮಗೆ ಕಡ್ಡಾಯವಾಗಬಾರದು ಎಂದರು.

ಭಾಗವತ್‌ ಹೇಳಿದ್ದೇನು?

- ದೇಶದ ಭದ್ರತೆಯ ವಿಷಯ ಬಂದಾಗ ನಾವು ಹೆಚ್ಚು ಜಾಗರೂಕರಾಗಿರಬೇಕು

- ಹಿಂಸೆ ನಡೆಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವು ಶಕ್ತಿಗಳಿಂದ ಸಂಚು

- ಒಡೆದ ಮನೆ ಎಂದಿಗೂ ಒಗ್ಗಟ್ಟಾಗಿರಲು ಸಾಧ್ಯವಿಲ್ಲ, ಇದಕ್ಕೆ ಅವಕಾಶ ಬೇಡ

- ದುಷ್ಟಶಕ್ತಿಗಳ ಬಗ್ಗೆ ಎಚ್ಚರದಿಂದಿದ್ದು ಜನರ ಜತೆ ನಿಕಟ ಸಂಪರ್ಕ ಗಳಿಸಬೇಕು

ಆರ್‌ಎಸ್‌ಎಸ್‌ಗೆ 100: ವಿಶೇಷ ಅಂಚೆ ಚೀಟಿ, ನಾಣ್ಯದ ಬಿಡುಗಡೆ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಭಾರತ ಮಾತೆಯ ಚಿತ್ರವಿರುವ ₹ 100 ನಾಣ್ಯ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದರು.

Read more Articles on