ಸಾರಾಂಶ
ಹಾಲಿ ಇರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದಾರೆ. ‘
ನವದೆಹಲಿ : ಹಾಲಿ ಇರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಲ್ಲಿ ಮಹತ್ವದ ಬದಲಾವಣೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದಾರೆ. ‘ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಕ್ರಮ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಲಿದೆ. ಇದು ಜನಸಾಮಾನ್ಯರಿಗೆ ಕೇಂದ್ರದಿಂದ ನೀಡುವ ದೀಪಾವಳಿ ಕೊಡುಗೆಯಾಗಿದೆ’ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯ ಹೇಳಿಕೆ ನೀಡಿದ್ದು, ‘ದೇಶದಲ್ಲಿ ಇದೀಗ ಶೇ.5, ಶೇ.12, ಶೇ.18 ಮತ್ತು ಶೇ.28- ಹೀಗೆ 4 ಸ್ತರಗಳಲ್ಲಿ ಜಿಎಸ್ಟಿ ವಿಧಿಸಲಾಗುತ್ತಿದೆ. ಇದನ್ನು 2 ಸ್ತರಗಳಿಗೆ ಇಳಿಸಲು ಸಚಿವಾಲಯ ಶಿಫಾರಸು ಮಾಡಿದೆ’ ಎಂದಿದೆ. ಅರ್ಥಾತ್ ಈ 4 ಸ್ತರಗಳ ಜಿಎಸ್ಟಿಗಳ ಪೈಕಿ 2 ಸ್ತರಗಳು ರದ್ದಾಗಲಿವೆ.
ಇದೇ ವೇಳೆ ಮಾಹಿತಿ ನೀಡಿರುವ ಮೂಲಗಳು, ‘ಶೇ.18 ಹಾಗೂ ಶೇ.5 ಸ್ಲ್ಯಾಬ್ ಮಾತ್ರ ಉಳಿವ ಸಾಧ್ಯತೆ ಇದೆ. ಶೇ.12ರ ಸ್ಲ್ಯಾಬ್‌ನಲ್ಲಿರುವ ಶೇ.99 ವಸ್ತುಗಳು ಶೇ.5ರ ಸ್ಲ್ಯಾಬ್‌ಗೆ ಇಳಿಕೆ ಆಗುವ ಸಾಧ್ಯತೆ ಇದೆ. ಶೇ.28ರ ಸ್ಲ್ಯಾಬ್‌ನಲ್ಲಿರುವ ಶೇ.90ರಷ್ಟು ವಸ್ತುಗಳ ಜಿಎಸ್ಟಿ ಶೇ.18ಕ್ಕೆ ಇಳಿಯಲಿದೆ. ಈವರೆಗೆ ಶೇ.28ರಷ್ಟು ಜಿಎಸ್ಟಿಯಲ್ಲಿದ್ದ ಮದ್ಯ, ಸಿಗರೇಟ್‌ನಂಥ ಉತ್ಪನ್ನಕ್ಕೆ (ಸಿನ್ ಗೂಡ್ಸ್) ಶೇ.40ರಷ್ಟು ಜಿಎಸ್ಟಿ ಹಾಕುವ ಯೋಚನೆ ಇದೆ’ ಎಂದು ಹೇಳಿವೆ.
ಸೆಪ್ಟೆಂಬರ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಜಿಎಸ್ಟಿ ಕೌನ್ಸಿಲ್‌ನ ಸಭೆ ನಡೆಯಲಿದ್ದು, ಅಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಮೂಲಗಳ ಪ್ರಕಾರ, ದಿನನಿತ್ಯದ ವಸ್ತುಗಳನ್ನು ಶೇ.5ರಷ್ಟು ಜಿಎಸ್ಟಿ ವ್ಯಾಪ್ತಿಗೆ ತರಲು ಹಾಗೂ ತೀರಾ ಅನಿವಾರ್ಯ ವಸ್ತುಗಳಿಗೆ ಶೂನ್ಯ ಜಿಎಸ್ಟಿ ನಿರ್ಧರಿಸಲಾಗಿದೆ. ಆದರೆ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರದೇ ಇರಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಮೋದಿ ಹೇಳಿಕೆ ಹಾಗೂ ಹಣಕಾಸು ಸಚಿವಾಲಯದ ಹೇಳಿಕೆಗಳು ದೀಪಾವಳಿ ಹೊತ್ತಿಗೆ ದಿನಬಳಕೆ ವಸ್ತುಗಳ ತೆರಿಗೆ ಭಾರ ಇಳಿಕೆಯಾಗುವ ಸುಳಿವು ನೀಡಿವೆ. ಇದನ್ನು ಉದ್ಯಮ ವಲಯ ಹಾಗೂ ಜನಸಾಮಾನ್ಯರು ಸ್ವಾಗತಿಸಿದ್ದಾರೆ.
ಸ್ವಾತಂತ್ರ್ಯ ದಿನದ ಸಿಹಿ ಘೋಷಣೆ:
ಇದಕ್ಕೂ ಮುನ್ನ 79ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಸಂಪ್ರದಾಯದಂತೆ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಅವರು, ‘ಸರಕು-ಸೇವಾ ತೆರಿಗೆ ಜಾರಿಗೆ ಬಂದು 8 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಹತ್ವದ ಸುಧಾರಣೆ ತರುವ ಕಾಲ ಸನ್ನಿಹಿತವಾಗಿದೆ’ ಎಂದರು.
‘ನಾವು ರಾಜ್ಯಗಳ ಜತೆಗೆ ಈ ಸಂಬಂಧ ಮಾತುಕತೆ ನಡೆಸಿದ್ದೇವೆ. ಮುಂದಿನ ತಲೆಮಾರಿನ ಜಿಎಸ್ಟಿ ಸುಧಾರಣೆ ದೀಪಾವಳಿ ಹೊತ್ತಿಗೆ ಸಿದ್ಧವಾಗಲಿದ್ದೇವೆ. ಇದು ದೇಶವಾಸಿಗಳ ಪಾಲಿನ ದೀಪಾವಳಿ ಗಿಫ್ಟ್ ಆಗಿರಲಿದೆ. ಜನಸಾಮಾನ್ಯನ ಮೇಲಿನ ತೆರಿಗೆ ಹೊರೆ ಸಾಕಷ್ಟು ಕಡಿಮೆಯಾಗಲಿದೆ. ನಮ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ. ದಿನಬಳಕೆ ವಸ್ತುಗಳ ಬೆಲೆಗಳೂ ಕಡಿಮೆಯಾಗಲಿವೆ’ ಎಂದ ಮೋದಿ, ದೇಶದ ಆರ್ಥಿಕತೆಗೂ ಇದು ಚೈತನ್ಯ ನೀಡಲಿದೆ ಎಂದರು.
ಇದೇ ವೇಳೆ, ಜನರಿಗೆ ಅನುಕೂಲವಾಗುವ ರೀತಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಮಹತ್ವದ ತೆರಿಗೆ ಸುಧಾರಣೆ ಕೈಗೊಂಡಿದೆ. 12 ಲಕ್ಷ ರು.ವರೆಗೆ ಆದಾಯ ತೆರಿಗೆ ವಿನಾಯ್ತಿ ನೀಡಿದೆ ಎಂದೂ ಹೇಳಿದರು.
ಟಾಪ್ 10 ಘೋಷಣೆ
- ಭಾರತ ನಿರ್ಮಿತ, ಭಾರತೀಯರೇ ಸಿದ್ಧಪಡಿಸಿದ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ
- ಅಕ್ರಮ ಒಳನುಸುಳುವಿಕೆಯಿಂದ ದೇಶದ ಜನಸಂಖ್ಯಾ ಸಂರಚನೆಯೇ ಬದಲು. ಇದಕ್ಕೆ ಕಡಿವಾಣ ಹಾಕಲು ಡೆಮಾಗ್ರಫಿ ಮಿಷನ್
- ಕೃಷಿಯಲ್ಲಿ ಹಿಂದುಳಿದ 100 ಜಿಲ್ಲೆಗಳಲ್ಲಿ ಕೃಷಿ ಅಭಿವೃದ್ಧಿ ಉತ್ತೇಜಿಸಲು ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಅನುಷ್ಠಾನ
- ರಕ್ತ, ನೀರು ಒಟ್ಟಿಗೆ ಹರಿಯವುದಿಲ್ಲ. ಉಗ್ರರಿಗೆ ಸಹಾಯ ಮಾಡುವವರೂ ಶತ್ರುಗಳು. ಅವರ ಅಣುಬಾಂಬ್ ಬೆದರಿಕೆಗೂ ಜಗ್ಗುವುದಿಲ್ಲ
- ಇಸ್ರೇಲ್‌ನ ಐರನ್ ಡೋಂ ರೀತಿ ಮುಂದಿನ 10 ವರ್ಷದಲ್ಲಿ ‘ಸುದರ್ಶನ ಚಕ್ರ’ ಎಂಬ ಸ್ವದೇಶಿ ವಾಯುರಕ್ಷಣಾ ವ್ಯವಸ್ಥೆ ಅಭಿವೃದ್ಧಿ
- ಸಮುದ್ರದಾಳದಲ್ಲಿರುವ ತೈಲ, ಅನಿಲ ನಿಕ್ಷೇಪ ಪತ್ತೆ ಹಚ್ಚಲು ‘ಸಮುದ್ರ ಮಂಥನ’ ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್
- ಜಾಗತಿಕ ಆರ್ಥಿಕ ಸ್ವಾರ್ಥ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ಆತ್ಮ ನಿರ್ಭರ ಮಾಡಲು ಸಮೃದ್ಧ ಭಾರತ ನಿರ್ಮಾಣಕ್ಕೆ ಪಣ
- 2 ವರ್ಷದಲ್ಲಿ ಮೂರೂವರೆ ಕೋಟಿ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಲು ವಿಕಸಿತ ಭಾರತ ರೋಜ್‌ಗಾರ್ ಯೋಜನೆಗೆ ಚಾಲನೆ
- ದೇಶದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿ 2047ಕ್ಕೆ ವಿಕಸಿತ ಭಾರತ ಕನಸಿನ ಗುರಿ ತಲುಪಲು ವಿಶೇಷ ಕಾರ್ಯಪಡೆ ರಚನೆ
- 2027ಕ್ಕೆ ಮಾನವಸಹಿತ ಗಗನಯಾನ, 2035ರ ವೇಳೆಗೆ ಸ್ವದೇಶಿ ಬಾಹ್ಯಾಕಾಶ ನಿಲ್ದಾಣ ಉದ್ಘಾಟನೆ ಮಾಡುವ ಗುರಿ