ಸಾರಾಂಶ
ನವದೆಹಲಿ : 79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ 103 ನಿಮಿಷ ದೇಶವನ್ನುದ್ದೇಶಿ ಮಾತನಾಡುವ ಮೂಲಕ ಅವರು ಕೆಂಪುಕೋಟೆಯಲ್ಲಿ ಅತಿ ದೀರ್ಘ ಭಾಷಣ ಮಾಡಿದ ಪ್ರಧಾನಿ ಎನ್ನುವ ದಾಖಲೆ ನಿರ್ಮಿಸಿದರು.ಕಳೆದ ವರ್ಷ ಮೋದಿ 98 ನಿಮಿಷ ಮಾತನಾಡಿದ್ದರು. ಆದರೆ ಈ ಸಲ 1 ಗಂಟೆ 43 ನಿಮಿಷ ಭಾಷಣದ ಮೂಲಕ ತಮ್ಮದೇ ದಾಖಲೆ ಮುರಿದಿದ್ದಾರೆ. 2015ರಲ್ಲಿ ಮೋದಿ 88 ನಿಮಿಷ ಮಾತನಾಡುವ ಮೂಲಕ ನೆಹರು ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದರು.
ಅತಿ ಕಡಿಮೆ ಮಾತನಾಡಿದ ದಾಖಲೆ ನೆಹರು, ಇಂದಿರಾ ಗಾಂಧಿ ಅವರ ಹೆಸರಿನಲ್ಲಿದೆ. 1954ರಲ್ಲಿ ನೆಹರು ಹಾಗೂ 1966ರಲ್ಲಿ ಇಂದಿರಾ ಅವರು ಕೇವಲ 14 ನಿಮಿಷ ಮಾತನಾಡಿದ್ದರು.
ಅಂದಹಾಗೆ ಇದುವರೆಗೆ ಕೆಂಪುಕೋಟೆಯಲ್ಲಿ ಮೋದಿ ಭಾಷಣದ ಅವಧಿ ನೋಡೋಣ ಬನ್ನಿ.
ಸತತ 12ನೇ ಸಲ ಧ್ವಜಾರೋಹಣ: ಇಂದಿರಾ ದಾಖಲೆ ಮುರಿದ ಮೋದಿ
ನವದೆಹಲಿ: ಕೆಂಪುಕೋಟೆಯಲ್ಲಿ ಸತತ 12ನೇ ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದಿರಾ ಗಾಂಧಿ ಅವರನ್ನು ಹಿಂದಿಕ್ಕಿ ಸತತವಾಗಿ ಅತಿಹೆಚ್ಚು ಧ್ವಜಾರೋಹಣ ಮಾಡಿದ ದೇಶದ 2ನೇ ಪ್ರಧಾನಿ ಎನ್ನುವ ದಾಖಲೆ ಸೃಷ್ಟಿಸಿದರು.
1947ರ ಸ್ವಾತಂತ್ರ್ಯ ಬಳಿಕ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಸತತ 17 ವರ್ಷ ಕೆಂಪುಕೋಟೆಯಲ್ಲಿ ತಿರಂಗ ಹಾರಿಸಿದ್ದರು. ಆ ಬಳಿಕ ಸತತವಾಗಿ ಅತಿ ಹೆಚ್ಚು ಸಲ ಧ್ವಜಾರೋಹಣ ಮಾಡಿದ ಹೆಗ್ಗಳಿಕೆಯನ್ನು ಇಂದಿರಾ ಗಾಂಧಿ ಹೊಂದಿದ್ದರು. ಅವರು 1966- 1977ರ ತನಕ ಒಟ್ಟು 11 ಸಲ ಸತತವಾಗಿ ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದರು. ಆದರೆ ಈ ಬಾರಿ ಮೋದಿ ಆ ದಾಖಲೆಯನ್ನು ಮುರಿದಿದ್ದಾರೆ.
ಇನ್ನು ಇಂದಿರಾ ಗಾಂಧಿ 1980 ರಿಂದ 1984ರಲ್ಲಿಯೂ ಧ್ವಜಾರೋಹಣ ಮಾಡಿ ಒಟ್ಟು 16 ಸಲ ಸ್ವಾತಂತ್ರ್ಯ ದಿನದಲ್ಲಿ ಭಾಗಿಯಾಗಿರುವ ದಾಖಲೆ ಹೊಂದಿದ್ದಾರೆ,
ನೆಹರೂ, ಮೋದಿ, ಇಂದಿರಾ ಗಾಂಧಿ ನಂತರ ಸ್ಥಾನಗಳಲ್ಲಿ ಸತತವಾಗಿ ಅತಿಹೆಚ್ಚು ಧ್ವಜಾರೋಹಣ ಮಾಡಿದ ಪ್ರಧಾನಿಗಳ ಸಾಲಿನಲ್ಲಿ ಮನಮೋಹನ್ ಸಿಂಗ್ 10, ಅಟಲ್ ಬಿಹಾರಿ ವಾಜಪೇಯಿ 6, ರಾಜೀವ್ ಗಾಂಧಿ 5, ಪಿವಿ ನರಸಿಂಹ ರಾವ್ 4 ಇದ್ದಾರೆ