‘ಯಂಗ್ ಇಂಡಿಯನ್ ಲಿಮಿಟೆಡ್’ ಕಂಪನಿಗೆ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸೋದರ ಡಿ.ಕೆ. ಸುರೇಶ್‌ 2.5 ಕೋಟಿ ರು. ದೇಣಿಗೆ ನೀಡಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.

ನವದೆಹಲಿ: ‘ನ್ಯಾಷನಲ್ ಹೆರಾಲ್ಡ್ ಅಕ್ರಮ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೂ ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಿಯಂತ್ರಣದಲ್ಲಿರುವ ‘ಯಂಗ್ ಇಂಡಿಯನ್ ಲಿಮಿಟೆಡ್’ ಕಂಪನಿಗೆ ದೊಡ್ಡ ಮೊತ್ತವನ್ನು ದೇಣಿಗೆ ನೀಡುವಂತೆ ಕಾಂಗ್ರೆಸ್‌ ವರಿಷ್ಠರು ಪಕ್ಷದ ವಿವಿಧ ನಾಯಕರಿಗೆ ನಿರ್ದೇಶಿಸಿದ್ದರು. ಆ ಪ್ರಕಾರ, ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಅವರ ಸೋದರ ಡಿ.ಕೆ. ಸುರೇಶ್‌ 2.5 ಕೋಟಿ ರು. ದೇಣಿಗೆ ನೀಡಿದ್ದರು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಹೇಳಿದೆ.

ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಪರಭಾರೆ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ. ಕಳೆದ ತಿಂಗಳು ದಿಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ, ‘ಕಾಂಗ್ರೆಸ್‌ ನಾಯಕರಿಗೆ ಯಂಗ್‌ ಇಂಡಿಯನ್‌ ಕಂಪನಿಗೆ ದೇಣಿಗೆ ನೀಡುವಂತೆ ಪಕ್ಷದ ವರಿಷ್ಠರು ಬಲವಂತ ಮಾಡಿದ್ದರು. ನೀಡದಿದ್ದರೆ ಕ್ರಮ ಎದುರಿಸಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದರು. ಗಾಂಧಿದ್ವಯರು ದೇಣಿಗೆಯ ನೆಪದಲ್ಲಿ ಯಂಗ್ ಇಂಡಿಯನ್‌ಗೆ ಅಕ್ರಮವಾಗಿ ಹಣ ಪಡೆದಿದ್ದು, ಅದರ ಫಲಾನುಭವಿಗಳಾಗಿದ್ದಾರೆ ಎಂದು ಚಾರ್ಜ್‌ಶೀಟಲ್ಲಿ ಉಲ್ಲೇಖಿಸಲಾಗಿದೆ’ ಎಂದು ಕೆಲವು ರಾಷ್ಟ್ರೀಯ ಮಧ್ಯಮಗಳು ವರದಿ ಮಾಡಿವೆ.

ಇತ್ತೀಚೆಗೆ ಇ.ಡಿ. ದಿಲ್ಲಿ ಕೋರ್ಟಿನಲ್ಲಿ, ‘ರಾಹುಲ್‌ ಹಾಗೂ ಸೋನಿಯಾ ಅವರು ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಪರಭಾರೆಯ ಫಲಾನುಭವಿಗಳು. 142 ಕೋಟಿ ರು. ಅಕ್ರಮ ಆದಾಯವನ್ನು ಅವರು ಸವಿದಿದ್ದರು’ ಎಂದು ವಾದಿಸಿತ್ತು. ಇದರ ಬೆನ್ನಲ್ಲೇ ಈ ವಿಷಯ ಬೆಳಕಿಗೆ ಬಂದಿದೆ.

2.5 ಕೋಟಿ ಕೊಟ್ಟಿದ್ದ ಡಿಕೆ ಬ್ರದರ್ಸ್:

‘ಹಿರಿಯ ಕಾಂಗ್ರೆಸ್ ನಾಯಕ ಪವನ್ ಬನ್ಸಲ್ ಅವರು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆದ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಅವರಿಗೆ ಏಪ್ರಿಲ್ 2022ರಲ್ಲಿ ತಲಾ 25 ಲಕ್ಷ ರು. ದೇಣಿಗೆ ನೀಡುವಂತೆ (ಒಟ್ಟಾರೆ 50 ಲಕ್ಷ ರು.) ಸೂಚಿಸಿದ್ದರು. ಅದೇ ತಿಂಗಳಲ್ಲಿ, ಶಿವಕುಮಾರ್ ಅವರೊಂದಿಗೆ ಸಂಪರ್ಕ ಹೊಂದಿದ್ದ ನ್ಯಾಷನಲ್‌ ಎಜುಕೇಶನ್‌ ಟ್ರಸ್ಟ್, ಯಂಗ್ ಇಂಡಿಯನ್‌ಗೆ 2 ಕೋಟಿ ರು. ದೇಣಿಗೆ ನೀಡಿತ್ತು ಎಂದು ಆರೋಪಪಟ್ಟಿಯಲ್ಲಿ ಇ.ಡಿ. ಹೇಳಿದೆ’ ಎಂದು ವರದಿಯಾಗಿದೆ.

ಆದರೆ ಆರೋಪಪಟ್ಟಿಯಲ್ಲಿ ಡಿಕೆ ಸೋದರರನ್ನು ಇ.ಡಿ. ಆರೋಪಿಗಳು ಎಂದು ಉಲ್ಲೇಖಿಸಿದ ಬಗ್ಗೆ ಮಾಹಿತಿ ಇಲ್ಲ ಎಂದು ವರದಿಗಳು ಹೇಳಿವೆ.

ತೆಲಂಗಾಣ ಸಿಎಂ, ಇತರರಿಂದಲೂ ದೇಣಿಗೆ:

ತೆಲಂಗಾಣದ ಆಗಿನ ಶಾಸಕ ಮತ್ತು ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಸೂಚನೆಯಂತೆ, ನಾಲ್ವರು ಕಾಂಗ್ರೆಸ್ ನಾಯಕರು 2022ರಲ್ಲಿ ಯಂಗ್ ಇಂಡಿಯನ್‌ಗೆ 80 ಲಕ್ಷ ರು.ಗಳಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ ಎಂದೂ ಇ.ಡಿ. ಹೇಳಿದೆ.

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಮಿತ್ ವಿಜ್ 2015 ರಲ್ಲಿ ಮೂರು ಪ್ರತ್ಯೇಕ ಕಂತುಗಳಲ್ಲಿ 3.30 ಕೋಟಿ ರು.ಗಳನ್ನು ದೇಣಿಗೆ ನೀಡಿದ್ದರು ಎಂದು ಗೊತ್ತಾಗಿದೆ.

ಡಿಕೆಶಿ, ಡಿಕೆಸು ವಿಚಾರಣೆ?:

ನ್ಯಾಯಾಲಯದಲ್ಲಿ ಪೂರಕ ಸಾಕ್ಷ್ಯಗಳನ್ನು ಸಲ್ಲಿಸಲು ಇ.ಡಿ. ಸಿದ್ಧತೆ ನಡೆಸುತ್ತಿರುವಂತೆಯೇ, ಮುಂಬರುವ ದಿನಗಳಲ್ಲಿ ಹಲವಾರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸುವ ನಿರೀಕ್ಷೆಯಿದೆ. ಹೀಗಾಗಿ ಡಿಕೆಶಿ ಹಾಗೂ ಡಿಕೆಸು ಅವರನ್ನೂ ವಿಚಾರಣೆಗೆ ಕರೆದರೆ ಅಚ್ಚರಿಯಿಲ್ಲ ಎನ್ನಲಾಗಿದೆ.

ಏನಿದು ನ್ಯಾಷನಲ್ ಹೆರಾಲ್ಡ್ ಹಗರಣ?:

‘ಪಂ. ಜವಾಹರಲಾಲ್‌ ನೆಹರು ಸ್ಥಾಪಿತ ‘ನ್ಯಾಷನಲ್‌ ಹೆರಾಲ್ಡ್‌’ ಪತ್ರಿಕೆಯನ್ನು ಮೊದಲು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ ನಡೆಸುತ್ತಿತ್ತು. ದೇಶದ ಅನೇಕ ಕಡೆ ಅದು ಒಟ್ಟು 2000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿತ್ತು. ಆದರೆ ಅದು 90 ಕೋಟಿ ರು. ಸಾಲಕ್ಕೆ ತುತ್ತಾಗಿತ್ತು. ಈ ಸಾಲ ತೀರಿಸುವ ನೆಪದಲ್ಲಿ ಸೋನಿಯಾ, ರಾಹುಲ್‌ ಷೇರುದಾರರಾಗಿರುವ ‘ಯಂಗ್‌ ಇಂಡಿಯನ್‌ ಕಂಪನಿ’ ಕೇವಲ ನೆಪಮಾತ್ರಕ್ಕೆ 50 ಲಕ್ಷ ರು. ನೀಡಿ 2,000 ಕೋಟಿ ರು. ಮೌಲ್ಯದ ನ್ಯಾಷನಲ್ ಹೆರಾಲ್ಡ್‌ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇದು ಅಕ್ರಮ’ ಎಂಬುದು ದೂರುದಾರರಾದ ಬಲಪಂಥೀಯ ನಾಯಕ ಸುಬ್ರಮಣಿಯನ್‌ ಸ್ವಾಮಿ ಆರೋಪ.

ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಮೊದಲ ಆರೋಪಿಯನ್ನಾಗಿ ಮತ್ತು ರಾಹುಲ್ ಗಾಂಧಿ ಅವರನ್ನು ಎರಡನೇ ಆರೋಪಿಯನ್ನಾಗಿ ಇ.ಡಿ. ಹೆಸರಿಸಿದೆ.

ರಾಜಾರೋಷವಾಗಿ ಹಣ ಕೊಟ್ಟಿದ್ದೇವೆ

ನ್ಯಾಷನಲ್‌ ಹೆರಾಲ್ಡ್‌ ಎಂಬುದು ನಮ್ಮ ಪಕ್ಷ ನಡೆಸುವ ಪತ್ರಿಕೆ‌. ನಾನು, ನನ್ನ ತಮ್ಮ ತಲಾ 25 ಲಕ್ಷ ರು. ಹಣವನ್ನು ಆ ಸಂಸ್ಥೆಗೆ ರಾಜಾರೋಷವಾಗಿ ಕೊಟ್ಟಿದ್ದೇವೆ. ನಮ್ಮ ಟ್ರಸ್ಟ್‌ನಿಂದಲೂ ಹಣ ನೀಡಿದ್ದೇವೆ. ನಾವು ದುಡಿದಂತಹ ಹಣದಿಂದ ನೀಡಿದ್ದೇವೆ. ಕದ್ದು ಮುಚ್ಚಿ ಕೊಟ್ಟಿಲ್ಲ.

- ಡಿ.ಕೆ. ಶಿವಕುಮಾರ್‌, ಡಿಸಿಎಂ