ಕಾವೇರಿ ಆರತಿಗೆ ಗೀತೆ ರಚಿಸಿ ಕೊಡುವಂತೆ ಸಾಧು, ಜನ್ಯಗೆ ಡಿ.ಕೆ.ಶಿವಕುಮಾರ್‌ ಮನವಿ

| Published : May 23 2025, 11:55 PM IST

ಕಾವೇರಿ ಆರತಿಗೆ ಗೀತೆ ರಚಿಸಿ ಕೊಡುವಂತೆ ಸಾಧು, ಜನ್ಯಗೆ ಡಿ.ಕೆ.ಶಿವಕುಮಾರ್‌ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ಆರತಿಗಾಗಿ ನದಿಯ ಪರಂಪರೆ, ಜಲ ಶ್ರೀಮಂತಿಕೆಯನ್ನು ಒಳಗೊಂಡ ಗೀತ ರಚನೆ ಮಾಡಿ ಸಂಗೀತ ಸಂಯೋಜನೆ ಮಾಡುವಂತೆ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಹಾಗೂ ಅರ್ಜುನ್‌ ಜನ್ಯ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾವೇರಿ ಆರತಿಗಾಗಿ ನದಿಯ ಪರಂಪರೆ, ಜಲ ಶ್ರೀಮಂತಿಕೆಯನ್ನು ಒಳಗೊಂಡ ಗೀತ ರಚನೆ ಮಾಡಿ ಸಂಗೀತ ಸಂಯೋಜನೆ ಮಾಡುವಂತೆ ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಸಾಧುಕೋಕಿಲ ಹಾಗೂ ಅರ್ಜುನ್‌ ಜನ್ಯ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪತ್ರ ಬರೆದಿದ್ದಾರೆ.

ಮೂವರು ಸಂಗೀತ ನಿರ್ದೇಶಕರಿಗೆ ಪ್ರತ್ಯೇಕವಾಗಿ ಪತ್ರ ಬರೆದಿರುವ ಶಿವಕುಮಾರ್‌ ಅವರು, ರಾಜ್ಯ ಸರ್ಕಾರ ಕಾವೇರಿ ಆರತಿಯನ್ನು ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ಶ್ರೀಮಂತಗೊಳಿಸುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ಜಾನಪದ ಸೊಬಗು, ಧಾರ್ಮಿಕತೆಯ ಮೆರಗು ಹಾಗೂ ಭಕ್ತಿಭಾವದಿಂದ ಕೂಡಿರುವ ಗೀತೆ ರಚಿಸುವ ಅಗತ್ಯವಿದೆ. ಆರತಿಯ ಮಹಿಮೆಯನ್ನು ಮೇಳೈಸುವ ಅದ್ಭುತವಾದ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಮಾಡಬೇಕು ಎಂದು ಕೋರಿದ್ದಾರೆ.

ಗೀತೆಯು ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳುವಂತೆ, ವರ್ಣರಂಜಿತವಾಗಿ ಮೂಡಿಬರಬೇಕು. ಕಾವೇರಿ ಮಾತೆಯ ಸಂಪೂರ್ಣ ಚಿತ್ರಣ ಕಣ್ಣಿಗೆ ಕಟ್ಟುವಂತಿರಬೇಕು. ಕಾವೇರಿ ಮಾತೆಯ ಪರಂಪರೆ ಉಳಿಸುವ ಜೊತೆಗೆ, ಜಲ ಶ್ರೀಮಂತಿಕೆ ಸಹಿತ ಕಾವೇರಿ ವೈಭವವನ್ನು ದೇಶ-ವಿದೇಶಗಳಿಗೆ ಹಾಡು ಮತ್ತು ಸಂಗೀತದ ಮೂಲಕ ಸಾರುವಂತಿರಬೇಕು ಎಂದು ಗೀತೆಯಲ್ಲಿ ಇರಬೇಕಾದ ಅಂಶಗಳ ಬಗ್ಗೆ ವಿವರಿಸಿದ್ದಾರೆ.

ಕಾವೇರಿ ಆರತಿ ವೇಳೆ ಪ್ರಸಾರ:

ರಚನೆಯಾದ ಗೀತೆಯನ್ನು ಧ್ವನಿ ಸುರಳಿ ರೂಪದಲ್ಲಿ ತಂದು, ಆಯ್ದ ಗೀತೆಯನ್ನು ಕಾವೇರಿ ಆರತಿ ಸಂದರ್ಭದಲ್ಲಿ ಪ್ರಸಾರ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.