ಸಾರಾಂಶ
ಮಂಡಿ : ಕಳೆದ ಕೆಲ ದಿನಗಳಿಂದ ಭಾರೀ ವರ್ಷಧಾರೆಯಲ್ಲಿ ಮಿಂದೇಳುತ್ತಿರುವ ಹಿಮಾಚಲ ಪ್ರದೇಶದಲ್ಲಿ ನಾಯಿಯೊಂದರ ಬೊಗಳುವಿಕೆಯಿಂದ 20 ಕುಟುಂಬಗಳ 67 ಜನರ ಜೀವ ಉಳಿದ ಅಚ್ಚರಿಯ ಘಟನೆ ನಡೆದಿದೆ.
ಇದು ನಾಯಿಗಳ ನಿಯತ್ತು ಮತ್ತು ಆಪತ್ತನ್ನು ಗ್ರಹಿಸುವ ಪ್ರಾಣಿಗಳ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಏನಾಯ್ತು?:
ಜೂ.30ರ ನಡುರಾತ್ರಿ, ಮೇಘಸ್ಫೋಟ, ದಿಢೀರ್ ಪ್ರವಾಹ, ಭೂಕುಸಿತಗಳಿಂದ ಧರಮ್‌ಪುರದ ಸಿಯಾತಿ ದುಃಸ್ಥಿತಿಗೆ ತಲುಪಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಕಟ್ಟಡವೊಂದರ 2ನೇ ಮಹಡಿಯಲ್ಲಿ ಮಲಗಿದ್ದ ನಾಯಿ ಜೋರಾಗಿ ಬೊಗಳುತ್ತ ಊಳಿಡಲು ಶುರುವಿಟ್ಟುಕೊಂಡಿತ್ತು.
ಇದರಿಂದ ಎಚ್ಚರಗೊಂಡ ನರೇಂದ್ರ ಎಂಬುವರು ಹೊರಬಂದು ನೋಡಿದಾಗ, ಅವರಿದ್ದ ಮನೆಯ ಗೋಡೆಯಲ್ಲಿ ಬಿರುಕೊಂದು ಮೂಡಿದ್ದು, ಆಗಲೇ ಮಳೆನೀರು ನುಗ್ಗಲು ಶುರುವಾಗಿತ್ತು. ಕೂಡಲೇ ನರೇಂದ್ರ ಆ ಕಟ್ಟಡದಲ್ಲಿ ಇದ್ದವರು ಮತ್ತು ಹಳ್ಳಿಯವರನ್ನೆಲ್ಲಾ ಎಚ್ಚರಿಸಿದ್ದಾರೆ. ತಕ್ಷಣ ಜನರೆಲ್ಲ ಮನೆಯಿಂದ ಹೊರಗೋಡಿಬಂದು ಸುರಕ್ಷಿತ ಸ್ಥಳದತ್ತ ಧಾವಿಸಿದ್ದಾರೆ.ಇದಾದ ಕೆಲವೇ ಗಂಟೆಗಳಲ್ಲಿ ಸಂಭವಿಸಿದ ಭೂಕುಸಿತಕ್ಕೆ ಇಡೀ ಹಳ್ಳಿಯೇ ಕೊಚ್ಚಿಕೊಂಡು ಹೋಗಿತ್ತು.
ಇತ್ತ ಸಕಾಲಕ್ಕೆ ಮನೆಯಿಂದ ಹೊರಗೋಡಿ ಬಂದಿದ್ದ ಜನ ತ್ರಿಯಂಬಲ ಜಿಲ್ಲೆಯ ನೈನಾ ದೇವಿ ದೇಗುಲದಲ್ಲಿ ಆಶ್ರಯ ಪಡೆದು ಜೀವ ಉಳಿಸಿಕೊಂಡಿದ್ದಾರೆ. ದುರ್ಘಟನೆಯನ್ನು ಬಹುಬೇಗ ಗುರುತಿಸಿ ಎಚ್ಚರಿಸಿದ ನಾಯಿಯಿಂದಾಗಿ 60ಕ್ಕೂ ಅಧಿಕ ಮಂದಿ ಬಚಾವಾಗಿದ್ದಾರೆ.
ನಾಯಿ ಸೇರಿದಂತೆ ಹಲವು ಪ್ರಾಣಿಗಳು ಅಪಾಯ ಅಪ್ಪಳಿಸುವ ಮುನ್ನವೇ ಅದನ್ನು ಗುರುತಿಸುವಲ್ಲಿ ಶಕ್ತವಾಗಿರುತ್ತವೆ. ಈ ನಾಯಿಗೂ ಅಂತಹ ಸುಳಿವು ಸಿಕ್ಕಿದ್ದು, ಕೂಡಲೇ ಓಡಿಹೋಗಿ ಬದುಕುಳಿಯುವ ಬದಲು ತನ್ನ ಮಾಲಿಕರನ್ನೂ ಎಚ್ಚರಿಸುವ ಕೆಲಸ ಮಾಡಿದೆ. ಇದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.