ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ

| N/A | Published : Jun 17 2025, 11:03 AM IST

Dog
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಯಿ ಸಾಕುವುದು ಈಗ ಎಲ್ಲರಿಗೂ ಇಷ್ಟ. ತಳಿ ನಾಯಿ ಸಾಕುವುದು ಈಗ ಟ್ರೆಂಡ್. ಆದರೆ ತಳಿ ನಾಯಿ ತರುವುದು ದೊಡ್ಡದಲ್ಲ, ಆದರೆ ಅದನ್ನು ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚಾಗುತ್ತದೆ ಎಂಬ ಮಾಹಿತಿ ಇದ್ದರೆ ಒಳ್ಳೆಯದು. ತಳಿ ನಾಯಿ ತರುವ ಮೊದಲು ಒಮ್ಮೆ ಈ ಅಂದಾಜು ಖರ್ಚು ವೆಚ್ಚ ನೋಡಿಕೊಳ್ಳಿ.

1. ಆರಂಭಿಕ ವೆಚ್ಚಗಳು ಆಶ್ರಯ ಕೇಂದ್ರದಿಂದ ಸಾಕುಪ್ರಾಣಿಯನ್ನು ದತ್ತು ತೆಗೆದುಕೊಂಡರೆ ಖರ್ಚು ಇರುವುದಿಲ್ಲ. ಆದರೆ ಖರೀದಿ ಮಾಡುವುದಾದರೆ ತಳಿ ಪ್ರಕಾರವನ್ನು ಅವಲಂಬಿಸಿ ₹5,000 ರಿಂದ ₹1,50,000 ಅಥವಾ ಅದಕ್ಕಿಂತಲೂ ಹೆಚ್ಚು ದುಡ್ಡು ಕೊಡಬೇಕಾಗಬಹುದು. ಅದಕ್ಕೆ ಆಹಾರ ಮತ್ತು ನೀರಿನ ಬಟ್ಟಲುಗಳು, ಕಾಲರ್ ಮತ್ತು ಲೀಶ್, ಕ್ರೇಟ್ ಅಥವಾ ಬೆಡ್, ಲಿಟರ್ ಬಾಕ್ಸ್, ಆಟಿಕೆಗಳು ಇತ್ಯಾದಿಗಳಿಗೆ ₹3,000 ರಿಂದ ₹10,000ವರೆಗೆ ಖರ್ಚಾಗಬಹುದು. ಆರಂಭಿಕ ಹಂತದ ವೈದ್ಯಕೀಯ ತಪಾಸಣೆಗೆ ಮೊದಲ ತಿಂಗಳಲ್ಲಿ ಅಂದಾಜು ₹3,000 ರಿಂದ ₹5,000 ವರೆಗೆ ಖರ್ಚಾಗಬಹುದು.

2. ವೈದ್ಯಕೀಯ ಖರ್ಚು ವೆಚ್ಚ ಲಸಿಕೆಗಳು, ಆಗಾಗ್ಗೆ ಬೂಸ್ಟರ್‌ಗಳನ್ನು ಕೊಡಲು ವರ್ಷಕ್ಕೆ ₹2,000 ರಿಂದ ₹4,000 ಖರ್ಚಾಗಬಹುದು. ಹುಳು ಹುಪ್ಪಟೆ ಕೀಟಗಳಿಂದ ರಕ್ಷಣೆ ಒದಗಿಸುವ ಔಷಧಕ್ಕೆ ತಿಂಗಳಿಗೆ ₹200 ರಿಂದ ₹600 ವರೆಗೆ ಖರ್ಚಾಗಬಹುದು. ಕೆಲವು ಕಡ್ಡಾಯ ಚಿಕಿತ್ಸೆಗಳನ್ನು ಪಡೆಯಬೇಕಿರುತ್ತದೆ. ಇದಕ್ಕೆ ₹2,000 ರಿಂದ ₹10,000 ವರೆಗೆ ಖರ್ಚಾಗಬಹುದು. ಜೊತೆಗೆ ತುರ್ತು ಸಂದರ್ಭಗಳು, ಗಾಯಗಳು, ಅಥವಾ ಕರುಳಿನ ಸಮಸ್ಯೆ, ಕಿಡ್ನಿ ಕಾಯಿಲೆ ಇತ್ಯಾದಿ ಸಮಸ್ಯೆಗಳ ಚಿಕಿತ್ಸೆಗೆ ₹10,000 ದಾಟಬಹುದು.

3. ಆಹಾರ ಖರ್ಚುಗಳು ಆಹಾರ ವೆಚ್ಚವು ತಿಂಗಳಿಗೆ ₹1,500 ರಿಂದ ₹5,000 ದವರೆಗೆ ಇರಬಹುದು. ತಳಿ, ಅಲರ್ಜಿಗಳು, ಅಥವಾ ವೈದ್ಯಕೀಯ ಸ್ಥಿತಿಗೆ ಅನುಗುಣವಾಗಿ ವಿಶೇಷ ಆಹಾರದ ಅಗತ್ಯವಿದ್ದರೆ ₹3,000 ರಿಂದ ₹7,000 ವರೆಗೆ ಖರ್ಚಾಗಬಹುದು. ಕೆಲವೊಮ್ಮೆ ವಿಟಮಿನ್‌/ ಸಪ್ಲಿಮೆಂಟ್‌ಗಳನ್ನು ಕೊಡಬೇಕಾಗಿ ಬರಬಹುದು. ಅದಕ್ಕಾಗಿ ತಿಂಗಳ ಖರ್ಚಿನ ಮೇಲೆ ₹300 ರಿಂದ ₹1,000 ಎತ್ತಿಡಬೇಕು.

4. ತರಬೇತಿ ಖರ್ಚು ತರಬೇತಿ ನೀಡಲು ₹5,000 ರಿಂದ ₹15,000 ವರೆಗೆ ಖರ್ಚಾಗಬಹುದು. ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸಲು ಉದಾಹರಣೆಗೆ ಜಾಸ್ತಿ ಆಕ್ರಮಣ ಮನೋಭಾವ ಇದ್ದರೆ ಅದನ್ನು ಪರಿಹರಿಸಲು ತಜ್ಞರಿಗೆ ಪ್ರತೀ ಸೆಷನ್‌ಗೆ ₹1,000 ರಿಂದ ₹2,500 ವರೆಗೆ ಕೊಡಬೇಕು. ಆಟಿಕೆಗಳು, ಪಜಲ್‌ಗಳು, ಅಗಿಯುವ ಐಟಂಗಳು ಇತ್ಯಾದಿಗಳಿಗೆ ತಿಂಗಳಿಗೆ ₹500 ರಿಂದ ₹1,000 ವರೆಗೆ ಖರ್ಚಾಗಬಹುದು.

5. ಪ್ರಯಾಣ ಕಾಲದ ವೆಚ್ಚ ನಾಯಿಗೆ ವಾಕಿಂಗ್ ಮಾಡಿಸುವ ಸೇವೆಗಳೂ ಈಗ ಲಭ್ಯವಾಗುತ್ತದೆ. ನೀವು ಬ್ಯುಸಿ ಇದ್ದ ಸಂದರ್ಭದಲ್ಲಿ ಈ ಸೇವೆ ಪಡೆಯಬಹುದು. ಅದಕ್ಕೆ ತಿಂಗಳಿಗೆ ₹2,000 ರಿಂದ ₹6,000 ವರೆಗೆ ಖರ್ಚಾಗಬಹುದು. ಪ್ರವಾಸ ಹೋಗುವಾಗ ನಾಯಿಗೆ ಪೆಟ್ ಬೋರ್ಡಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದರೆ ಪ್ರತೀ ರಾತ್ರಿಗೆ ₹500 ರಿಂದ ₹2,000 ವರೆಗೆ ಬೇಕಾಗಬಹುದು. ಪ್ರವಾಸಕ್ಕೆ ನಾಯಿಯನ್ನು ಕರೆದೊಯ್ಯುತ್ತೀರಿ ಎಂದಾದರೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು. ಆ ಶುಲ್ಕ, ಈ ಶುಲ್ಕ ಅಂತ ಸೇರಿ ₹2,000 ರಿಂದ ₹10,000 ವೆಚ್ಚ ಉಂಟಾಗಬಹುದು.

ಇವೆಲ್ಲಾ ಅಂದಾಜು ವೆಚ್ಚಗ‍ಳಷ್ಟೇ. ಇದರ ಜೊತೆ ಸೋಫಾ ಹರಿದರೆ, ಸ್ವಚ್ಛತೆಗೆ ಇತ್ಯಾದಿಗೆ ಒಂದಷ್ಟು ದುಡ್ಡು ಎತ್ತಿಡಬೇಕು. ನಾಯಿ ಸಾಕುವ ಸಂತೋಷ ಸುಮ್ಮನೆ ಸಿಗುವುದಿಲ್ಲ.

Read more Articles on