ತಂದೆಯನ್ನು ಕಳೆದುಕೊಂಡ ಮಗಳಿಗೆ ಅವರ ನೆನಪುಗಳೇ ಈಗ ಉಳಿದಿರುವ ಆಸ್ತಿ. ಕನ್ನಡದ ಹಿರಿಯ ಕವಿ, ವಿಮರ್ಶಕ, ಭಾವಗೀತೆಯ ಮಾಂತ್ರಿಕ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಮಗಳು ಕ್ಷಮಾ, ಈ ಬರಹದಲ್ಲಿ ತಮ್ಮ ಅಪ್ಪನನ್ನು ಕವಿಯಾಗಿ, ಸಾಹಿತಿಯಾಗಿ ನೋಡುವುದಕ್ಕಿಂತ ಹೆಚ್ಚಾಗಿ, ತಮ್ಮ ಬದುಕಿನುದ್ದಕ್ಕೂ ಪ್ರೀತಿಯ ನೆರಳಾಗಿ ನಿಂತ ತಂದೆಯಾಗಿ ನೆನಪಿಸಿಕೊಳ್ಳುತ್ತಾರೆ
ಅಪ್ಪಾ ಎಂಬ ಮಾತಿಗಿಂತ...
ತಂದೆಯನ್ನು ಕಳೆದುಕೊಂಡ ಮಗಳಿಗೆ ಅವರ ನೆನಪುಗಳೇ ಈಗ ಉಳಿದಿರುವ ಆಸ್ತಿ. ಕನ್ನಡದ ಹಿರಿಯ ಕವಿ, ವಿಮರ್ಶಕ, ಭಾವಗೀತೆಯ ಮಾಂತ್ರಿಕ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಮಗಳು ಕ್ಷಮಾ, ಈ ಬರಹದಲ್ಲಿ ತಮ್ಮ ಅಪ್ಪನನ್ನು ಕವಿಯಾಗಿ, ಸಾಹಿತಿಯಾಗಿ ನೋಡುವುದಕ್ಕಿಂತ ಹೆಚ್ಚಾಗಿ, ತಮ್ಮ ಬದುಕಿನುದ್ದಕ್ಕೂ ಪ್ರೀತಿಯ ನೆರಳಾಗಿ ನಿಂತ ತಂದೆಯಾಗಿ ನೆನಪಿಸಿಕೊಳ್ಳುತ್ತಾರೆ. ಮಗಳ ಸಣ್ಣ ನೋವಿಗೂ ಕರಗುತ್ತಿದ್ದ, ಅವಳ ತಪ್ಪಿನಲ್ಲೂ ತನ್ನನ್ನೇ ಹೊಣೆ ಮಾಡಿಕೊಳ್ಳುತ್ತಿದ್ದ, ಮೊಮ್ಮಕ್ಕಳ ಬಾಲ್ಯವನ್ನು ಸಂಭ್ರಮಿಸುತ್ತಿದ್ದ ಅಪ್ಪನ ನೆನಪುಗಳು ಇಲ್ಲಿ ಮಗಳ ಹೃದಯದ ಭಾಷೆಯಲ್ಲಿ ಅನಾವರಣಗೊಳ್ಳುತ್ತವೆ. ಅಪ್ಪನ ಪ್ರತಿಭೆಗಿಂತ ಅವರ ಪ್ರೀತಿ, ಅವರ ಸಾಧನೆಗಿಂತ ಅವರ ಸಾಂಗತ್ಯ, ಅವರ ಸಾರ್ವಜನಿಕ ವ್ಯಕ್ತಿತ್ವಕ್ಕಿಂತ ಮಗಳ ಬದುಕಿನಲ್ಲಿ ಅವರು ಬಿಟ್ಟುಹೋದ ಆಳವಾದ ಗುರುತು ಈ ಬರಹದ ಕೇಂದ್ರ. ಅಪ್ಪನನ್ನು ಕಳೆದುಕೊಂಡ ಐದು ವರ್ಷಗಳ ನಂತರವೂ ಅವರ ಸ್ಪರ್ಶವನ್ನು ಮರೆಯಲಾಗದ ಕ್ಷಮಾ, ತಮ್ಮ ತಂದೆಯೇ ತಾಯಿಗಾಗಿ ಬರೆದ ಸಾಲಿಗೆ ತಮ್ಮ ಬದುಕಿನ ನೋವು ಮತ್ತು ಪ್ರೀತಿಯನ್ನು ಬೆಸೆದು ಹೊಸ ಅರ್ಥ ನೀಡುತ್ತಾರೆ: ಅಪ್ಪಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?
-ಕ್ಷಮಾ ಭಟ್
1936ರ ಅಕ್ಟೋಬರ್ ೨೯ನೇ ತಾರೀಖು. ತೊಂಬತ್ತು ವರ್ಷಗಳ ಹಿಂದೆ, ಶಿವಮೊಗ್ಗ ತಾಲೂಕಿನ ದೊಡ್ಡ ಬ್ರಾಹ್ಮಣರ ಬೀದಿಯಲ್ಲಿ, ತುಂಗೆ ನದಿಯ ಎದುರಿನಲ್ಲಿದ್ದ ಹಾಗೂ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯದ ಎದುರಿನ ಮನೆಯೊಂದರಲ್ಲಿ ಬೆಳಗಿದ ಕೂಸು ಲಕ್ಷ್ಮೀನಾರಾಯಣ ಭಟ್ಟರು. ಹಾಗಾಗಿಯೇ ಅವರಿಗೆ ಆ ಹೆಸರನ್ನೂ ಇಟ್ಟಿದ್ದು. ಏನು ಮಹಿಮೆಯೋ, ನಮ್ಮ ತಂದೆಯವರಿಗೆ ಕೊನೆಯವರೆಗೂ ಲಕ್ಷ್ಮೀನಾರಾಯಣ ಸ್ವಾಮಿ ಎಂದರೆ ಅಚ್ಚುಮೆಚ್ಚು.
ಎನ್.ಎಸ್.ಎಲ್. ಎಂದೇ ಪ್ರಖ್ಯಾತರಾದ ಈ ಹುಡುಗ ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯದ ಅಲೆಯನ್ನೇ ಎಬ್ಬಿಸಿದರು. ಬಾಲ್ಯದಲ್ಲೇ ಬೆಟ್ಟದಷ್ಟು ಕಷ್ಟಗಳನ್ನು ಎದುರಿಸಿ, ನಂತರ ಮೈಸೂರಿಗೆ ತೆರಳಿ ಅಲ್ಲಿ ವಿದ್ಯಾಭ್ಯಾಸ ಮಾಡಿ, ಬಳಿಕ ಬೆಂಗಳೂರಿಗೆ ಬಂದ ಎನ್.ಎಸ್.ಎಲ್. ಅವರ ಮುಂದಿನ ಪ್ರಯಾಣ ಎಲ್ಲರಿಗೂ ತಿಳಿದಿದ್ದೇ. ನೈಲಾಡಿ ಶಿವರಾಮ ಭಟ್ಟರ ಮಗನಾದ ಎನ್.ಎಸ್.ಎಲ್. ಅವರು ಭಾವಗೀತೆಯ ರಚನಕಾರರಾಗಿ, ವಿಮರ್ಶಕರಾಗಿ, ಅದಕ್ಕೂ ಹೆಚ್ಚಾಗಿ ಪ್ರಾಧ್ಯಾಪಕರಾಗಿ ನಡೆದುಬಂದ ದಾರಿ ರೋಚಕವಾದದ್ದು.
ಅವರು ಬರಹಗಾರರಾಗಿ ಅಧ್ಯಯನ ಶುರು ಮಾಡಿದ್ದು ವಿಮರ್ಶಕರಾಗಿ. ನಂತರದ ದಿನಗಳಲ್ಲಿ ಭಾವಗೀತೆಗಳನ್ನು ರಚಿಸಲು ಪ್ರಾರಂಭಿಸಿದರು. ಚೆಲುವೆಯಾದ ಮಡದಿಯು ನಿರಂತರವಾಗಿ ಜೊತೆಯಲ್ಲಿದ್ದುದೂ ಭಾವಗೀತೆಗಳನ್ನು ರಚಿಸಲು ಪ್ರೇರಣೆಯಾಯಿತು.
ಇವರ ವಿವಾಹ1963ರಲ್ಲಿ ನಡೆಯಿತು. ಚಿಕ್ಕ ಬ್ರಾಹ್ಮಣರ ಬೀದಿಯಲ್ಲಿದ್ದ ನಮ್ಮ ತಾಯಿ ಜ್ಯೋತ್ಸ್ನಾ ಅವರ ನಾಮಕರಣಕ್ಕೂ ತಮ್ಮ ಅಕ್ಕ ವಿಶಾಲಮ್ಮನ ಜೊತೆ ಹೋಗಿದ್ದರೆಂದು ನಮ್ಮ ತಂದೆಯವರು ನೆನಪಿಸಿಕೊಳ್ಳುತ್ತಿದ್ದರು. ಹಿರಿಯ ಕವಿ ಪ್ರೊ. ಗೋಪಾಲಕೃಷ್ಣ ಅಡಿಗರು (ನಮ್ಮ ದೊಡ್ಡಪ್ಪ) ಇದೇ ಹುಡುಗಿಯ ಮದುವೆಯ ಪ್ರಸ್ತಾಪ ತಂದಾಗ, ನಮ್ಮ ತಂದೆಯವರು ಅವರ ಮನೆಗೆ ಮತ್ತೆ ತೆರಳಿದರು. ಚೆಲುವೆಯಾದ ನನ್ನ ತಾಯಿಯನ್ನು ನೋಡಿದ ಕೂಡಲೇ ''ಹೂಂ'' ಎಂದ ನಮ್ಮ ತಂದೆ, ಅವರಿಗೆ ಒಂದು ಹಾಡು ಹೇಳಲು ಹೇಳಿದರು. ನಮ್ಮ ತಾಯಿಯವರು ದೇವರ ಕೋಣೆಯಲ್ಲಿ ಬಚ್ಚಿಟ್ಟುಕೊಂಡು ''ಓ ಬಸಂತಿ'' ಹಾಡನ್ನು ಹೇಳಿದ್ದರಂತೆ.
೧೯೬೭ರಲ್ಲಿ ಜನಿಸಿದ ನಮ್ಮ ಅಣ್ಣ ಅವರಿಬ್ಬರ ಪಾಲಿಗೆ ಋತುಗಳ ರಾಜನಾಗಿ ಬಂದನೆಂದು ''ಚೈತ್ರ'' ಎಂದು ನಾಮಕರಣ ಮಾಡಿದರು. ಯಾರಾದರೂ ಹುಡುಗಿಯ ಹೆಸರು ಚೈತ್ರ ಎಂದರೆ, ನಮ್ಮ ತಂದೆಯವರು, "ಹುಡುಗನ ಹೆಸರನ್ನು ಹುಡುಗಿಯರಿಗೆ ಯಾಕೆ ಇಡುತ್ತಾರೋ!" ಎಂದು ಹೇಳುತ್ತಿದ್ದರು.
೧೯೭೦ರಲ್ಲಿ ನನ್ನ ಜನನವಾಯಿತು. ಬೆಂಗಳೂರು ಜ್ಞಾನಭಾರತಿಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ನಮ್ಮ ತಂದೆಯವರಿಗೆ ಶಿಷ್ಯಸಮೂಹವೇ ಪ್ರಪಂಚವಾಗಿತ್ತು. ಒಂದಿಷ್ಟು ಹೆಸರುಗಳನ್ನು ಸೂಚಿಸಿ, ಶಿಷ್ಯವೃಂದಕ್ಕೆ ನನ್ನ ಹೆಸರನ್ನು ಆಯ್ಕೆ ಮಾಡಲು ಬಿಟ್ಟರು. ಅವರೆಲ್ಲ ಸೇರಿ ನನಗೆ ''ಕ್ಷಮಾ'' ಎಂದು ನಾಮಕರಣ ಮಾಡಿದರು. ಜೊತೆಗೆ, ಕ್ಷಮಾ ಎಂದರೆ ಭೂಮಿ, ಲಕ್ಷ್ಮೀ ಎಂಬ ಅರ್ಥಗಳೂ ಇವೆ. ನಾನು ಹುಟ್ಟಿದ ಮೇಲೆ ಮನೆಯ ಸೈಟು ಸಿಕ್ಕ ಕಾರಣ, ಈ ಹೆಸರು ಬಂತು.
ಪ್ರತಿದಿನ ಕನ್ನಡದಲ್ಲಿ ಉಕ್ತಲೇಖನ ನೀಡುತ್ತಿದ್ದರು
ನಾನು ಮತ್ತು ನಮ್ಮ ಅಣ್ಣ ಚಿಕ್ಕವರಾಗಿದ್ದಾಗ, ನಮ್ಮ ತಂದೆ ಪ್ರತಿದಿನ ಕನ್ನಡದಲ್ಲಿ ಉಕ್ತಲೇಖನ ನೀಡುತ್ತಿದ್ದರು. ಪ್ರತಿ ಸರಿಯಾದ ಪದಕ್ಕೂ ಇಷ್ಟು ದುಡ್ಡು ಎಂದು ಕೊಡುತ್ತಿದ್ದರು. ಕನ್ನಡ ಭಾಷೆಯನ್ನು ಚೂರೂ ತಪ್ಪಿಲ್ಲದೆ ಬರೆಯಲು ಇದೊಂದು ಒಳ್ಳೆಯ ಉಪಾಯವನ್ನು ಹುಡುಕಿಕೊಂಡಿದ್ದರು.
ಎಲ್ಲ ತಂದೆಯರಿಗೆ ಹೆಣ್ಣುಮಕ್ಕಳೆಂದರೆ ಪ್ರೀತಿ ಕೊಂಚ ಜಾಸ್ತಿಯೇ. ಅಪ್ಪನಿಗೂ ಹಾಗೆಯೇ. ನಾನೆಂದರೆ ಅವರಿಗೆ ಪ್ರಾಣ. ನಾನೇನೇ ಕೇಳಿದರೂ ಇಲ್ಲ ಎಂದು ಹೇಳುತ್ತಿರಲಿಲ್ಲ.
ಸುಮಾರು ಮೂವತ್ತನಾಲ್ಕು ವರ್ಷಗಳ ಹಿಂದಿನ ಮಾತು. ಅಪ್ಪ, ನಾನು, ನಮ್ಮ ತಾಯಿ, ನಮ್ಮ ಸೋದರತ್ತೆ ಹಾಗೂ ಸೋದರಮಾವ ಅತ್ತಿಗೆಯ ಮನೆಯಿಂದ ಏರ್ಪೋರ್ಟ್ ರಸ್ತೆಯ ಮೂಲಕ ವಾಪಸ್ ಬರುತ್ತಿದ್ದೆವು. ನಾನು ಕಾರು ಚಲಾಯಿಸುತ್ತಿದ್ದೆ. ರಾತ್ರಿ ೧೧.೩೦ ಆಗಿದ್ದರಿಂದ ಅಪ್ಪ ಮೂರು ಬಾರಿ ತಾವೇ ಕಾರು ಚಲಾಯಿಸುತ್ತೇನೆ ಎಂದರು. ನಾನು, "ಬೇಡ ಅಪ್ಪ, ನಾನೇ ಚಲಾಯಿಸುತ್ತೇನೆ" ಎಂದು ಹೇಳಿದೆ.
ನನ್ನ ಗಮನ ಸ್ವಲ್ಪ ಚಲಿಸಿತು. ರಿಚ್ಮಂಡ್ ರಸ್ತೆಯ ಡಿವೈಡರ್ ಮೇಲೆ ಗೊತ್ತಿಲ್ಲದೆ ಕಾರನ್ನು ಹತ್ತಿಸಿಬಿಟ್ಟೆ. ರಸ್ತೆಯಲ್ಲಿ ಜನರೇ ಇಲ್ಲದ ಕಾರಣ ಯಾವ ಅಪಘಾತವೂ ಆಗಲಿಲ್ಲ. ಅಪ್ಪ ಗಾಬರಿಯಾಗಿದ್ದ ನನ್ನನ್ನು ನೋಡಿ ಸಮಾಧಾನಪಡಿಸಿದ್ದಲ್ಲದೆ, ಅಮ್ಮನ ಕಡೆ ತಿರುಗಿ, "ಜ್ಯೋತಿ, ತಪ್ಪು ನನ್ನದೇ. ಚೆನ್ನಾಗಿ ಕಾರು ಓಡಿಸುತ್ತಿದ್ದ ಅವಳಿಗೆ ಡಿಸ್ಟರ್ಬ್ ಮಾಡಬಾರದಿತ್ತು" ಎಂದು ಹೇಳಿದರು. ಅದನ್ನು ಮಾರನೆಯ ದಿನವೇ ಸರಿಪಡಿಸಿ, ಕಾರಿನ ಕೀಯನ್ನು ಮತ್ತೆ ನನಗೆ ಕೊಟ್ಟರು!
ನಾನು ತಾಯಿಯಾಗುತ್ತೇನೆಂದು ತಿಳಿದಾಗ ನನ್ನ ವೈದ್ಯರ ಬಳಿ ಹೋಗಿ, "ನನ್ನ ಮಗಳಿಗೆ ಸಿಸೇರಿಯನ್ ಮಾಡಿಯೇ ಮಾಡಿ. ಅವಳಿಗೆ ನೋವಾಗುವುದನ್ನು ನನ್ನಿಂದ ನೋಡಲು ಆಗುವುದಿಲ್ಲ" ಎಂದು ಹೇಳಿದ್ದರಂತೆ. ಹೀಗೆ ಅಪಾರವಾದ ಪ್ರೀತಿ ಕೊನೆಯವರೆಗೂ ನನ್ನ ಮೇಲಿತ್ತು.
ನನ್ನ ಮೊದಲ ಮಗ ಸೂರ್ಯ ಹುಟ್ಟಿದ ಮೇಲೆ ಅವನನ್ನು ನೋಡಿ ಆನಂದಬಾಷ್ಪ ಸುರಿಸುತ್ತಾ, "ಕ್ಷಮಾ, ನೀನು ಕವಿತೆ ಬರೆಯುತ್ತಿದ್ದೀಯ. ಆದರೆ ನೀನು ಮಹಾಕಾವ್ಯವನ್ನೇ ರಚಿಸಿದ್ದೀಯ!" ಎಂದು ಹೇಳಿದ್ದರು. ಅವನು ಹುಟ್ಟಿದ ಮೇಲೆ ಅವನಿಗೆ ಹಾಡಲೆಂದು ಸುಮಾರು ಜೋಗುಳಗಳನ್ನು ಬರೆದರು.
ಅವನು ಹುಟ್ಟಿದ ಮೇಲೆ ನನಗೆ ನಿದ್ದೆಯೇ ಮರೀಚಿಕೆಯಾಯಿತು. ಇದನ್ನು ಗಮನಿಸಿದ ನನ್ನ ತಂದೆ ಪ್ರತಿದಿನ ನಮ್ಮ ಮನೆಗೆ ಬಂದು ಒಂದೂವರೆ ಗಂಟೆ ಇದ್ದು, "ನಿನ್ನ ಕೆಲಸ ಏನೇ ಇದ್ದರೂ ಮುಗಿಸಿಕೊ. ಹಾಗೆಯೇ ಕೊಂಚ ನಿದ್ದೆ ಮಾಡು, ಕ್ಷಮಕ್ಕ" ಎಂದು ಹೇಳಿ ನನಗೆ ಬೆನ್ನೆಲುಬಾಗಿ ನಿಂತರು. ನನ್ನನ್ನು ''ಕ್ಷಮಕ್ಕ'' ಎಂದು ಕರೆಯುತ್ತಿದ್ದರು. ನಾನು ಅವರ ಅಮ್ಮನಾಗಿ ಮರುಜನ್ಮ ತಾಳಿದ್ದೆ ಎಂದು ಹೇಳುತ್ತಿದ್ದರು. ಹಾಗೆಯೇ ನನ್ನ ಅಣ್ಣನನ್ನು ''ಚೈತ್ರ ಅಣ್ಣ'' ಎಂದು ಕರೆಯುತ್ತಿದ್ದರು.
ನಮ್ಮ ತಂದೆಯವರ ಇನ್ನೊಂದು ಗುಣವೆಂದರೆ, ತಮ್ಮ ಸ್ನೇಹಿತರಿಗೆ, ಶಿಷ್ಯರಿಗೆ ಮನೆ ಕಟ್ಟಿಕೊಳ್ಳಿ, ತಲೆಯ ಮೇಲೊಂದು ಸೂರು ಇರಬೇಕು, ಹೆಂಡತಿ ಮಕ್ಕಳಿಗೆ ಒಂದು ನೆಲೆ ಇರಬೇಕೆಂದು ಪ್ರಾಣ ಹಿಂಡುತ್ತಿದ್ದರು. ಆ ಕಾರಣದಿಂದಲೇ ಅವರ ಆಪ್ತ ಸ್ನೇಹಿತರಾದ ಶಿವಮೊಗ್ಗ ಸುಬ್ಬಣ್ಣ, ಲೇಖಕ ಹಾಗೂ ಶಿಷ್ಯ ನರಹಳ್ಳಿ ಬಾಲಸುಬ್ರಹ್ಮಣ್ಯಂ, ಪತ್ರಕರ್ತ ಸದಾಶಿವ, ಪ್ರಸಿದ್ಧ ಚಿತ್ರಕಾರ ಚಂದ್ರನಾಥ್ ಅವರೆಲ್ಲ ಭಟ್ಟರ ಕಾಟ ತಪ್ಪಿಸಿಕೊಳ್ಳಲೆಂದೇ ಮನೆ ಕಟ್ಟಿಕೊಂಡರು!
ಅಪ್ಪನಿಗೆ ಬೇಸಿಗೆ ರಜೆ ಬಂತೆಂದರೆ ಮನೆಯಲ್ಲಿ ಮಕ್ಕಳೆಲ್ಲ ಸೇರಬೇಕು. ನನ್ನ ಕಸಿನ್ಸ್ ಬಂದಾಗ ಧಾರಾಳವಾಗಿ ಕಡಲೆಕಾಯಿ ಬೀಜ, ಸಬ್ಬಕ್ಕಿ, ಕೊಬ್ಬರಿ ಬಿಸ್ಕತ್ತು ಇತ್ಯಾದಿ ತಿನಿಸುಗಳನ್ನು ತರುತ್ತಿದ್ದರು. ಜೊತೆಗೆ, ಮನೆಯಲ್ಲಿ ಅಡುಗೆಯವರನ್ನು ಕರೆಸಿ ಚಕ್ಕುಲಿ, ಕೋಡುಬಳೆ, ಪುರಿಂಡೆ ಎಲ್ಲವನ್ನೂ ಮಾಡಿಸಲು ಅಮ್ಮನಿಗೆ ಹೇಳುತ್ತಿದ್ದರು. ಆ ಕಾರಣದಿಂದ ನನಗೆ ಮತ್ತು ನನ್ನ ಕಸಿನ್ಸ್ಗೆ ಇಂದಿಗೂ ಇವೆಲ್ಲ ಹಸನಾದ ನೆನಪುಗಳು.
ಅಪ್ಪ ಯಾವಾಗಲೂ, "ಮಕ್ಕಳಿಗೆ ಬಾಲ್ಯದ ನೆನಪು ಚೆನ್ನಾಗಿರಬೇಕು, ಜ್ಯೋತಿ" ಎಂದು ಹೇಳುತ್ತಿದ್ದರು. ಬಿಜಾಪುರಕ್ಕೆ ಹೋದರೆ ಎಷ್ಟೇ ಬಿಜಿಯಾಗಿದ್ದರೂ ನನಗೆ ಇಷ್ಟವೆಂದು ಕುಂದ ತರುತ್ತಿದ್ದರು. ಮದುವೆಯಾದ ನಂತರ ನಾವು ಅಪ್ಪನ ಮನೆಗೆ ಬರುತ್ತಿದ್ದಾಗಲೂ ನನಗೆ ಇಷ್ಟವಾದ ಕೊಬ್ಬರಿ ಬಿಸ್ಕತ್ತುಗಳನ್ನು ತಂದು ಇಡುತ್ತಿದ್ದರು.
ನಾನು ಚಿಕ್ಕವಳಿದ್ದಾಗ ಬಹಳ ತುಂಟಿಯಾಗಿದ್ದೆನಂತೆ. ಎಂದಿನಂತೆ ಅಂದು ಕೂಡ ನಾನು ಗೇಟಿನ ಮೇಲೆ ಹತ್ತಿ ಆಟವಾಡುತ್ತಿದ್ದೆ. ಬ್ಯಾಲೆನ್ಸ್ ತಪ್ಪಿ ನೆಲದ ಮೇಲೆ ಬಿದ್ದುಬಿಟ್ಟೆ. ಮೂಗಿನಿಂದ, ಬಾಯಿಯಿಂದ ರಕ್ತ ಹರಿಯಲು ಶುರುವಾಯಿತು. ಅಪ್ಪ ಹೊರಗೆ ಹೋಗಿದ್ದವರು ಮನೆಗೆ ಬಂದ ಮೇಲೆ ನನ್ನನ್ನು ಡಾಕ್ಟರ್ ಹತ್ತಿರ ಕರೆದೊಯ್ದರು. ರಾತ್ರಿಯಾಗುವ ಹೊತ್ತಿಗೆ ನನಗೆ ಜ್ವರ ಬಂದು, ಕೈ ಹಾಗೂ ಹಣೆ ಊದಿಕೊಂಡುಬಿಟ್ಟಿತ್ತು. ಅಪ್ಪ ರಾತ್ರಿಯೆಲ್ಲ ನನ್ನ ಹಣೆಗೆ ಬಟ್ಟೆ ಹಾಕುತ್ತಾ, ಕಥೆ ಹೇಳುತ್ತಾ ಮಲಗಿಸುತ್ತಿದ್ದರು.
ನನಗೆಂದೇ ಮೇಲಿನ ಮನೆಯನ್ನು ಕಟ್ಟಿಸಿದರು. ನಾವು ಇಪ್ಪತ್ತು ವರ್ಷಗಳ ಹಿಂದೆ ನನ್ನ ಎರಡನೇ ಮಗ ಶಶಾಂಕ ಹುಟ್ಟಿದಾಗ ಇಲ್ಲಿಗೆ ಬಂದೆವು. ಅವರ ಖುಷಿಗೆ ಪಾರವೇ ಇರಲಿಲ್ಲ. ನನ್ನ ಮಕ್ಕಳೊಡನೆ ಆಟವಾಡುತ್ತಾ, ಕೆಲವೊಮ್ಮೆ ಕಥೆ ಹೇಳುತ್ತಾ, ಮಧ್ಯೆ ಸ್ವಲ್ಪ ಬರವಣಿಗೆ ಮಾಡುತ್ತಾ ಕಾಲ ಕಳೆಯುತ್ತಿದ್ದರು.
೨೦೨೦ರಲ್ಲಿ ಅಪ್ಪನ ಆರೋಗ್ಯ ಹದಗೆಡುತ್ತಾ ಬಂದಿತು. ೨೦೨೧ರ ಮಾರ್ಚ್ ೫ರಂದು ಅವರನ್ನು ಆಸ್ಪತ್ರೆಯಲ್ಲಿ ನೋಡಲು ಮಧ್ಯಾಹ್ನ ಹೋಗಿದ್ದಾಗ, "ಕ್ಷಮಕ್ಕ, ಈಗ ಅಕ್ಕಿಯ ಬೆಲೆ ಎಷ್ಟು?" ಎಂದು ಕೇಳಿದ್ದರು. ನಾನು ಅರವತ್ತು ರೂಪಾಯಿ ಎಂದಾಗ ಆಶ್ಚರ್ಯದಿಂದ, "ಅಬ್ಬಾ! ನಮ್ಮ ಕಾಲದಲ್ಲಿ ಎಂಟಾಣೆಗೆ (ಈಗಿನ ಐವತ್ತು ಪೈಸೆ) ಒಂದು ಸೇರು ಅಕ್ಕಿ ಸಿಗುತ್ತಿತ್ತು" ಎಂದು ಉದ್ಗರಿಸಿದ್ದರು. ಐಸಿಯುನಲ್ಲಿದ್ದ ಪುರುಷ ನರ್ಸ್ ನಕ್ಕುಬಿಟ್ಟು, "ಎಲ್ಲಿ ಇದ್ದೀರಾ ಸರ್?" ಎಂದು ಕೇಳಿದ್ದ.
ಅಂದು ರಾತ್ರಿ ಮತ್ತೆ ಅಪ್ಪನನ್ನು ನೋಡುವ ಹಂಬಲವಾಯಿತು. ವೈದ್ಯರು ನನಗೆ ಪರಿಚಿತರಾಗಿದ್ದ ಕಾರಣ ಹಾಗೂ ಅಪ್ಪನ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ನಮ್ಮನ್ನು ಮತ್ತೆ ಒಳಗೆ ಬಿಟ್ಟರು. ಆಗ ಅಪ್ಪನಿಗೆ ಅಷ್ಟು ಎಚ್ಚರವಿರಲಿಲ್ಲ. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದರು. ಅಪ್ಪನ ಕಣ್ಣಂಚಿನಿಂದ ನೀರು ಬಂತು. ಅದೇ ನನ್ನ ಅಪ್ಪನ ಕೊನೆಯ ಸ್ಪರ್ಶ.
ಅವರು ನಮ್ಮನ್ನು ಅಗಲಿ ಐದು ವರ್ಷಗಳಾಗಿವೆ. ಆದರೂ ಇಂದಿಗೂ ಅವರ ನೆನಪು ಕಾಡುವುದಷ್ಟೇ ಅಲ್ಲ, ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ವ್ಯಕ್ತಿಯಾಗಿ ಬಹಳ ಕರುಣೆ, ಪ್ರೀತಿ ಹೊಂದಿದ್ದ, ಸ್ನೇಹಿತರನ್ನು ತಮ್ಮ ಆಪ್ತರಂತೆ ಕಾಣುತ್ತಿದ್ದ, ನಮ್ಮ ಮನೆಯವರ ಜೊತೆ ನಲಿನಲಿಯುತ್ತಾ ಇರುತ್ತಿದ್ದ ನಮ್ಮ ಅಪ್ಪ ಇಂದು ನಮ್ಮ ಜೊತೆ ಇಲ್ಲ ಎಂದು ನೆನಪಿಸಿಕೊಂಡಾಗ ತಾಳಲಾರದಷ್ಟು ದುಃಖವಾಗುತ್ತದೆ.
ಅವರು ಮಾಡಿರುವ ಕೆಲಸಕ್ಕಾಗಿ ಅವರಿಗೆ ಇನ್ನೂ ಬಹಳಷ್ಟು ಪ್ರಶಸ್ತಿ-ಪುರಸ್ಕಾರಗಳು ದೊರಕಬೇಕಿತ್ತು. ಆದರೆ ಅಷ್ಟು ಮನ್ನಣೆ ಸಿಗದಿರುವುದು ಒಂದು ಖೇದದ ಸಂಗತಿ.
ಅಪ್ಪನೇ ತಮ್ಮ ತಾಯಿಗೆ ಬರೆದ ಹಾಡು:
"ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?"
ಈಗ ನನ್ನ ಪಾಲಿಗೆ,
**"ಅಪ್ಪಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?"**
ಎಂಬ ಮಾತು ಬಹಳ ಸತ್ಯವಾಗಿದೆ.
