ರಾಜ್ಯಕ್ಕೆ 100 ತುಂಬಿದಾಗ ಕನ್ನಡ ಹೇಗಿರಬೇಕು ? . 2056ಕ್ಕೆ ಕರ್ನಾಟಕ ಏಕೀಕರಣಗೊಂಡು 100 ವರ್ಷಗಳು ತುಂಬಲಿವೆ. ಇನ್ನು 30 ವರ್ಷಗಳ ಮುಂದೆ ಕನ್ನಡ ಭಾಷೆ ಹೇಗಿರಬೇಕು ಎಂಬ ಆಶಯಗಳು ಇಲ್ಲಿವೆ.

1. ಕನ್ನಡ ಭಾಷೆ ಇನ್ನಷ್ಟು ಸಮೃದ್ಧವಾಗಿರುತ್ತದೆ

ಇಂದಿನಿಂದ ಮೂವತ್ತು ವರುಷಗಳಲ್ಲಿ ಜಗತ್ತು ಬಹಳಷ್ಟು ಬದಲಾಗಿರುವುದರಿಂದ ಪದಭಂಡಾರ ಬೇರೆಯದೇ ಆಗಿರುತ್ತೆ. ಅದೇನೆಂದು ಯಾರೂ ಊಹಿಸಲಾಗಲ್ಲ. ಸಂವಹನ ಬಹುಶಃ ಪೂರ್ಣಮಟ್ಟದಲ್ಲಿ ಮೌಖಿಕವಾಗಿರುತ್ತದೆ; ಲಿಖಿತ ಭಾಷೆ ಅಲಂಕಾರಿಕವಾಗಿ ಮಾತ್ರ ಉಳಿದಿರುತ್ತದೆ. ವಿವಿಧ ಮೂಲೆಗಳ ಆಡುನುಡಿಗಳು ಸಂಪೂರ್ಣ ಖಿಚಡಿಯಾಗಿರುತ್ತವೆ. ಬಹುಶಃ ಯಂತ್ರಗಳಷ್ಟೇ ಬರೆಯುವ ಕೌಶಲ್ಯ ಉಳಿಸಿಕೊಂಡಿರುತ್ತವೆ. ಆದರೆ ಕನ್ನಡ ಉಳಿದಿರುತ್ತೆ. ನನಗೆ ಅನಿಸುತ್ತದೆ ಇನ್ನಷ್ಟು ಸಮೃದ್ಧವಾಗಿಯೇ ಉಳಿದಿರುತ್ತೆ. ಕಾರಣ ಭಾಷಾಂತರ ಮತ್ತು ಲಿಪ್ಯಂತರ ಅತ್ಯಂತ ಸುಲಭವಾಗಿರುತ್ತದೆ. ಹ್ಯೂಮನಾಯ್ಡ್‌ಗಳು ಮನುಷ್ಯರಷ್ಟೇ ಸಾಮಾನ್ಯವಾಗಿರುವುದರಿಂದ ಅವುಗಳದ್ದೇ ಒಂದು ವಿಭಿನ್ನ ಕನ್ನಡ ಹುಟ್ಟಿಕೊಂಡಿರುತ್ತದೆ.

- ಮಧು ವೈ.ಎನ್‌.

ಪರಿಸ್ಥಿತಿಗೆ ತಕ್ಕಂತೆ ಭಾಷೆಯ ಕಲಿಕೆ, ಬಳಕೆ ಇರಬೇಕು

ಇಂದಿನಿಂದ ಮೂವತ್ತು ವರ್ಷಗಳ ನಂತರ ನಮ್ಮ ಭಾಷೆ ಹೇಗಿರಬಹುದು ಅಥವಾ ಹೇಗಿರಬೇಕು ಎಂದು ಯೋಚನೆ ಮಾಡಿದರೆ ಕನ್ನಡವನ್ನು ಬಳಸುವ, ಓದುವ ಮತ್ತು ಕೇಳುವ ವಿಧಾನದಲ್ಲಿ ಸಾಕಷ್ಟು ಬದಲಾವಣೆ, ಹೊಸತನಗಳನ್ನು ಕಾಣಬಹುದು. ಎಷ್ಟೇ ವರ್ಷಗಳಾಗಲಿ ನಮ್ಮ ಕನ್ನಡಕ್ಕೆ ಯಾವುದೇ ರೀತಿಯ ಧಕ್ಕೆ ಬರಲ್ಲ. ಎಐ ರೀತಿಯ ಏನೇ ತಂತ್ರಜ್ಞಾನ ಬಂದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ಭಾಷೆಯನ್ನು ನಾವು ಯಾವ ರೀತಿ ಬೇಕೋ ಆ ರೀತಿ ಬಳಸುತ್ತಿದ್ದೇವೆ. ಜಗತ್ತಿನಲ್ಲಿ ಬೆಳೆಯುತ್ತಿರುವ ಐದಾರು ಭಾಷೆಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ಕನ್ನಡವೂ ಒಂದು ಆಗಿರುತ್ತದೆ.

ನಾನು ನನ್ನ ವಿದ್ಯಾರ್ಥಿಗಳಿಗೆ ಈಗ ಬನ್ನಿ ಪಾಠ ಮಾಡುತ್ತೇನೆ ಎಂದು ತರಗತಿಗಳಿಗೆ ಕರೆಯುತ್ತೇನೆ. ಮುಂದೆ ವಾಟ್ಸ್‌ಅಪ್‌, ವಿಡಿಯೋ ಕಾಲ್‌ ಎನ್ನಬಹುದು. ಅಂದರೆ ನಾನು ಪಾಠ ಮಾಡುವುದಕ್ಕೆ ವಿಡಿಯೋ ಕಾಲ್‌ ತಂತ್ರಜ್ಞಾನವನ್ನು ಬ‍ಳಕೆ ಮಾಡಿಕೊಳ್ಳುತ್ತಿದ್ದೇನೆ. ಹೀಗೆ ಆಯಾ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ನಮ್ಮ ಭಾಷೆಯ ಕಲಿಕೆ, ಬಳಕೆ ಮಾಡುತ್ತಾ ಹೋದರೆ ಎಷ್ಟೇ ವರ್ಷಗಳು ಕಳೆದರೂ ಕನ್ನಡಕ್ಕೆ ಯಾವುದೇ ಆತಂಕ ಎದುರಾಗದು. ಈಗ ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಆದರೂ ಬೆಂಗಳೂರಿನ ಕನ್ನಡ ಮಾತ್ರ ಎಲ್ಲೂ ಮರೆಯಾಗಿಲ್ಲ. ಈಗಲೂ ಬಸವನಗುಡಿಗೆ ಬಂದರೆ ಕಡ್ಲೆಕಾಯಿ ಪರಿಷೆ, ಜಾತ್ರೆ, ಉತ್ಸವಗಳನ್ನು ನಾವು ಮರೆತಿಲ್ಲ.

ಈ ಎಲ್ಲದರ ನಡುವೆ ನಾವು ಅತಿಯಾದ ಆತ್ಮವಿಶ್ವಾಸವನ್ನೇ ನಂಬಿಕೊಳ್ಳದೆ ಬೆಳೆಯುತ್ತಿರುವ ಲಾಭವನ್ನೇ ಉದ್ದೇಶವಾಗಿಟ್ಟುಕೊಂಡು ಬರುತ್ತಿರುವ ತಂತ್ರಜ್ಞಾನದ ಜೊತೆಗೆ ಭಾಷೆಯನ್ನು ನಿರಂತರ ಕಲಿಕೆಯ ಸಾಧನವಾಗಿಸಿಕೊಳ್ಳಬೇಕು. 2056ರ ಹೊತ್ತಿಗೆ ಎಐನಂತಹ ಅಧುನಿಕತೆಗೆ ನಾವು ನಮ್ಮ ಭಾಷೆಯನ್ನು ಕಲಿಸಿಕೊಡಬೇಕಿದೆ. ಇದು ಈಗಾಗಲೇ ಶುರುವಾಗಿದೆ ಕೂಡ. ಅಂದರೆ ‘ಪರಿಸ್ಥಿತಿಗೆ ತಕ್ಕಂತೆ ಜನ ಹೇಗೆ ಮಾತನಾಡುತ್ತಾರೋ ಅದೇ ಸರಿಯಾದ ಭಾಷೆ’ ಎಂದು ಭಾಷಾತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಮಾತಿನಂತೆ ಈಗ ನಾವು ‘ನಿಮಗೆ ಹೇಗೆ ಬೇಕೋ ಹಾಗೆ ನಾವು ನಮ್ಮ ಭಾಷೆಯನ್ನು ಹೇಳಿಕೊಡುತ್ತೇವೆ’ ಎಂದು ನಿರ್ಧರಿಸಿಕೊಳ್ಳಬೇಕಿರುತ್ತದೆ.

- ಡಾ. ವತ್ಸಲಾ ಮೋಹನ್, ನಟಿ- ಶಿಕ್ಷಕಿ

2056ರ ಕನ್ನಡಕ್ಕೆ ನನ್ನ ಐದು ಆಶಯಗಳು

1. ಕನ್ನಡವು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಉದ್ಯಮಶೀಲತೆಯ ಭಾಷೆಯಾಗಬೇಕು.

2. ಕನ್ನಡವು ಸ್ಥಳೀಯ ಬೇರುಗಳನ್ನು ಹೊಂದಿರುವ, ಜಾಗತಿಕ ಕನಸುಗಳನ್ನು ನನಸಾಗಿಸುವ ಲಕ್ಷಾಂತರ ಉದ್ಯಮಿಗಳನ್ನು ಸೃಷ್ಟಿಸಬೇಕು.

3. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕನ್ನಡಕ್ಕೆ ತನ್ನದೇ ಆದ ಡಿಜಿಟಲ್‌ ಜ್ಞಾನಸಂಪತ್ತು ಮತ್ತು ತಂತ್ರಜ್ಞಾನವಿರಬೇಕು.

4. ಕನ್ನಡದಲ್ಲಿ ಕಲಿಯುವುದು ಜಾಗತಿಕ ಜ್ಞಾನ ಮತ್ತು ಅವಕಾಶಗಳನ್ನು ಪಡೆಯಲು ಎಂದಿಗೂ ಅಡ್ಡಿಯಾಗಬಾರದು.

5. ಕನ್ನಡ ತನ್ನ ಸಂಸ್ಕೃತಿಯ ಬೇರುಗಳನ್ನು ಉಳಿಸಿಕೊಂಡೇ ಹೊಸ ಆಲೋಚನೆ, ಪದ ಮತ್ತು ಜ್ಞಾನವನ್ನು ಸ್ವೀಕರಿಸುವ ಮುಕ್ತ ಭಾಷೆಯಾಗಬೇಕು.

- ವಸಂತ್‌ ಶೆಟ್ಟಿ, ಸಂಸ್ಥಾಪಕ- ಮುಂದೆ ಬನ್ನಿ