ಶೇ. ೬೦ಕ್ಕಿಂತ ಹೆಚ್ಚು ಅರಣ್ಯ ಇರುವ ಪ್ರದೇಶವನ್ನು ಗುಡ್ಡಗಾಡು ಜಿಲ್ಲೆಯೆಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದಲ್ಲಿ ಅವಕಾಶವಿದೆ.
ಶಿರಸಿ: ಜಿಲ್ಲೆಯನ್ನು ಭೌಗೋಳಿಕ ಹಿನ್ನೆಲೆ ಮತ್ತು ಕಾನೂನಾತ್ಮಕ ಅವಕಾಶಗಳ ಅನ್ವಯ ಗುಡ್ಡಗಾಡು ಜಿಲ್ಲೆಯೆಂದು ಘೋಷಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.
ಶನಿವಾರ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮಟ್ಟದ ಗ್ರೀನ್ ಕಾರ್ಡ್ ಪ್ರಮುಖರ ಸಭೆಯಲ್ಲಿ ಅರಣ್ಯ ಭೂಮಿ ಹೋರಾಟದ ೩ನೇ ಹಂತದ ಕ್ರಿಯಾ ಯೋಜನೆ ಪ್ರಕಟಿಸಿ ಅವರು ಮಾತನಾಡಿದರು.ಅರಣ್ಯ ಜಿಲ್ಲೆಯಲ್ಲಿ ಪರಿಸರ ವಿರೋಧ ಯೋಜನೆ ಸಂಪೂರ್ಣವಾಗಿ ನಿರ್ಬಂಧಿಸಬೇಕು. ಗುಡ್ಡಗಾಡು ತ್ಯಾಗದ ಜಿಲ್ಲೆಗೆ ಸರ್ಕಾರಿ ಸಿ, ಡಿ ವೃಂದದ ನೌಕರಿಯನ್ನು ಜಿಲ್ಲೆಯವರೆಗೆ ಆದ್ಯತೆ ನೀಡಲು ಅರಣ್ಯವಾಸಿಗಳ ಮುಂದಿನ ಹೋರಾಟದಲ್ಲಿ ಹಮ್ಮಿಕೋಳ್ಳಲು ಹೋರಾಟಗಾರರ ವೇದಿಕೆ ನಿರ್ಧರಿಸಿದೆ ಎಂದರು.
ಶೇ. ೬೦ಕ್ಕಿಂತ ಹೆಚ್ಚು ಅರಣ್ಯ ಇರುವ ಪ್ರದೇಶವನ್ನು ಗುಡ್ಡಗಾಡು ಜಿಲ್ಲೆಯೆಂದು ಗುರುತಿಸಿ ವಿಶೇಷ ಸ್ಥಾನಮಾನ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಇಂತಹ ಪ್ರದೇಶಗಳಿಗೆ ಯೋಜನಾ ಆಯೋಗದ ಪ್ರಸ್ತುತ ನೀತಿ ಆಯೋಗದಿಂದ ವಿಶೇಷ ಅನುದಾನ ಮತ್ತು ಮನ್ನಣೆ ಪಡೆಯಲು ಅವಕಾಶ ಇದೆ. ಜಿಲ್ಲೆಯ ವಾಸ್ತವ್ಯದ ಜನಸಾಂದ್ರತೆ ಪ್ರಮಾಣ ಪ್ರತಿ ಚದರ್ ಕಿಮೀಗೆ ೧೪೦ ಜನ ಮಾತ್ರ ಇರುವುದು ಗುಡ್ಡಗಾಡು ಜಿಲ್ಲೆ ಘೋಷಣೆಗೆ ವಿಶೇಷ ಅಂಶದ ಜತೆ ಅರಣ್ಯವಾಸಿಗಳ ಭೂಮಿ ಹಕ್ಕಿನ ಸಾಮಾಜಿಕ ಭದ್ರತೆಗೆ ಪ್ರಮುಖ ಅಂಶವಾಗಿದೆ ಎಂದರು.ಕಸ್ತೂರಿ ರಂಗನ್ ವರದಿಯಲ್ಲಿ ಜಿಲ್ಲೆಯ ೧೧ ತಾಲೂಕುಗಳಲ್ಲಿ ೫೬೭ ಸೂಕ್ಷ್ಮ ಪ್ರದೇಶ ಹಳ್ಳಿ, ಜಿಲ್ಲೆಯಲ್ಲಿ ೮೦ ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಅಂದರೆ, ಜಿಲ್ಲೆಯ ಜನಸಂಖ್ಯೆಯಲ್ಲಿ ಒಂದು ಮೂರಾಂಶ ಜನರು ವಾಸ್ತವ್ಯ ಮತ್ತು ಸಾಗುವಳಿ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿರುವುದರಿಂದ ಜಿಲ್ಲೆಯನ್ನು ಗುಡ್ಡ ಗಾಡು ಜಿಲ್ಲೆಯೆಂದು ಘೋಷಿಸಲು ಪ್ರಸಕ್ತವಾದ ಅಂಶವೆಂದು ಅವರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ರಾಜೇಶ್ ಮಿತ್ರ ನಾಯ್ಕ, ಮಂಜುನಾಥ ಮರಾಠಿ, ಸಂಚಾಲಕ ಇಬ್ರಾಹೀಂ ಸಾಬ ಗೌಡಳ್ಳಿ, ಮಹಭಲೇಶ್ವರ ನಾಯ್ಕ ಬೇಡ್ಕಣಿ, ರಮಾನಂದ ನಾಯಕ ಅಚವೆ, ದೇವೇಂದ್ರ ಎಸ್. ನಾಯ್ಕ ಬೆಡಸಗಾಂವ್, ಕಿರಣ ಮರಾಠಿ, ಪ್ರಕಾಶ ವಿ. ನಾಯ್ಕ ಕತಗಾಲ, ಹರಿಹರ ನಾಯ್ಕ ಓಂಕಾರ, ಮಹೇಂದ್ರ ಕತಗಾಲ, ಸ್ವಾತಿ ಜೈನ್, ಪ್ರಶಾಂತ್ ಜೈನ ಸೇರಿದಂತೆ ಅನೇಕರು ಇದ್ದರು.