ಗ್ರೀನ್‌ ಲ್ಯಾಂಡ್‌ ಖರೀದಿ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆ ಹಾಕಿದ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಹೊಸ ಮ್ಯಾಪ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ.  

ವಾಷಿಂಗ್ಟನ್‌: ಗ್ರೀನ್‌ ಲ್ಯಾಂಡ್‌ ಖರೀದಿ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆ ಹಾಕಿದ ಬೆನ್ನಲ್ಲೇ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಹೊಸ ಮ್ಯಾಪ್‌ವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಮ್ಯಾಪ್‌ನಲ್ಲಿ ಕೆನಡಾ, ವೆನಿಜುವೆಲಾ ಮತ್ತು ಗ್ರೀನ್‌ ಲ್ಯಾಂಡ್‌ ಅನ್ನು ಅಮೆರಿಕದ ಭಾಗವಾಗಿ ತೋರಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಎಐ ಬಳಸಿ ರಚಿಸಿದ ಈ ಮ್ಯಾಪ್‌

ಎಐ ಬಳಸಿ ರಚಿಸಿದ ಈ ಮ್ಯಾಪ್‌ ಅನ್ನು ಟ್ರಂಪ್‌ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಿಯಲ್‌ನಲ್ಲಿ ಹಂಚಿಕೊಂಡಿದ್ದಾರೆ. ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡಿಸಿಕೊಳ್ಳುವ ವಿಚಾರವಾಗಿ ಯುರೋಪಿಯನ್‌ ನಾಯಕರ ಜತೆಗಿನ ವಾಕ್ಸಮರದ ಬೆನ್ನಲ್ಲೇ ಈ ಮ್ಯಾಪ್‌ ಹಂಚಿಕೊಂಡಿದ್ದಾರೆ.

‘ಗ್ರೀನ್‌ಲ್ಯಾಂಡ್‌, 2026ರಿಂದ ಅಮೆರಿಕದ ಭಾಗ’ ಎಂಬ ಸಂದೇಶದೊಂದಿಗೆ ಅಮೆರಿಕದ ಧ್ವಜ ಹಿಡಿದು ತಾವು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಮತ್ತು ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಅವರ ಜತೆಗೆ ಗ್ರೀನ್‌ಲ್ಯಾಂಡ್‌ನಲ್ಲಿ ನಿಂತಿರುವ ಫೋಟೋವೊಂದನ್ನೂ ಅವರು ಹಂಚಿಕೊಂಡಿದ್ದಾರೆ.

51ನೇ ರಾಜ್ಯ ಕೆನಡಾ:

ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದಾಗ ಟ್ರಂಪ್‌ ಅವರು ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವುದಾಗಿ ಘೋಷಿಸಿದ್ದರು. ಅಮೆರಿಕಕ್ಕೆ ಸೇರುವ ಪ್ರಸ್ತಾಪವನ್ನೂ ಕೆನಡಾ ಮುಂದಿಟ್ಟಿದ್ದರು. ಇದನ್ನು ಕೆನಡಾ ತಿರಸ್ಕರಿಸಿದಾಗ ಎರಡೂ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಕಿತ್ತಾಟ ಶುರುವಾಗಿತ್ತು.

ಇನ್ನು ಈ ತಿಂಗಳ ಆರಂಭದಲ್ಲಿ ಅಮೆರಿಕದ ಸೇನಾಪಡೆಗಳು ವೆನುಜುವೆಲಾದಲ್ಲಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಅವರ ಪತ್ನಿಯನ್ನು ಬಂಧಿಸಿತ್ತು. ಆ ಬಳಿಕ ವೆನುಜುವೆಲಾ ಮೇಲೆ ಅಮೆರಿಕ ಪರೋಕ್ಷ ಆಡಳಿತ ನಡೆಸಲಿದೆ ಎಂದು ಹೇಳಲಾಗಿತ್ತಾದರೂ ಇದೇ ಮೊದಲ ಬಾರಿಗೆ ವೆನುಜುವೆಲಾವನ್ನೂ ಅಮೆರಿಕದ ಮ್ಯಾಪ್‌ಗೆ ಸೇರ್ಪಡೆ ಮಾಡಿರುವುದು ಅಚ್ಚರಿ ಮೂಡಿಸಿದೆ.