ಷ್ಯಾ ತೈಲ ಖರೀದಿ ವಿಷಯ ಉಭಯ ದೇಶಗಳ ನಡುವೆ ಬಿಕ್ಕಟ್ಟು, ತೆರಿಗೆ ದಾಳಿಗೆ ಕಾರಣವಾದ ಹೊರತಾಗಿಯೂ ಅಮೆರಿಕ ಮತ್ತು ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಎರಡೂ ಕಡೆಯವರು ಸಿದ್ಧವಾದಾಗ ಅದನ್ನು ಘೋಷಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿದೆ.

- ಭಾರತ- ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಸಂಬಂಧ ಈವರೆಗೆ 6 ಸುತ್ತು ಮಾತುಕತೆ- ಆದರೂ ಯಾವಾಗ ಒಡಂಬಡಿಕೆಗೆ ಸಹಿ ಹಾಕಲಾಗುತ್ತದೆ ಎಂಬ ಸ್ಪಷ್ಟತೆಯೇ ಇರಲಿಲ್ಲ

- ಕರೆ ಮಾಡಿ ಮೋದಿ ಮಾತನಾಡದ್ದರಿಂದಲೇ ಒಪ್ಪಂದ ವಿಳಂಬ ಎಂದಿದ್ದ ಟ್ರಂಪ್‌ ಆಪ್ತ

- ಭಾರತದ ಹೊಸ ರಾಯಭಾರಿ ಅಧಿಕಾರ ಸ್ವೀಕಾರ ಬಳಿಕ ಮತ್ತೊಂದು ಹಂತದ ಚರ್ಚೆ

- ಇದೀಗ ಒಪ್ಪಂದ ಅಂತಿಮ ಹಂತ ತಲುಪಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹೇಳಿಕೆ

- ಎರಡೂ ಕಡೆಯವರು ಸಿದ್ಧವಾದಾಗ ಒಪ್ಪಂದ ಏರ್ಪಟ್ಟಿರುವ ಕುರಿತು ಘೋಷಣೆ==

ಮುಕ್ತ ವ್ಯಾಪಾರ ಒಪ್ಪಂದಮುಕ್ತ ವ್ಯಾಪಾರ ಒಪ್ಪಂದ ಎನ್ನುವುದು ಎರಡು ದೇಶಗಳು ತಮ್ಮ ನಡುವಿನ ಸುಗಮ ವ್ಯಾಪಾರಕ್ಕೆ ಅಡ್ಡಿಯಾದ ತೆರಿಗೆ ರದ್ದು ಮಾಡುವುದು, ಇಲ್ಲವೇ ಕಡಿತ ಮಾಡುವ ಅಂಶಗಳನ್ನು ಒಳಗೊಂಡಿರುತ್ತದೆ. ಇದರಿಂದ ಪರಸ್ಪರ ದೇಶಗಳ ನಡುವೆ ಸುಗಮ ವ್ಯಾಪಾರ ಸಾಧ್ಯವಾಗುತ್ತದೆ, ವಸ್ತುಗಳ ಅಗ್ಗವಾಗಿ ಲಭ್ಯವಾಗುತ್ತದೆ, ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಲಭ್ಯವಾಗುತ್ತದೆ.

==

ನವದೆಹಲಿ: ರಷ್ಯಾ ತೈಲ ಖರೀದಿ ವಿಷಯ ಉಭಯ ದೇಶಗಳ ನಡುವೆ ಬಿಕ್ಕಟ್ಟು, ತೆರಿಗೆ ದಾಳಿಗೆ ಕಾರಣವಾದ ಹೊರತಾಗಿಯೂ ಅಮೆರಿಕ ಮತ್ತು ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಎರಡೂ ಕಡೆಯವರು ಸಿದ್ಧವಾದಾಗ ಅದನ್ನು ಘೋಷಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿದೆ.

ಇದರೊಂದಿಗೆ ಬಹಳ ವರ್ಷಗಳಿಂದ ಬಾಕಿ ಉಳಿದಿದ್ದ, ಸಾಕಷ್ಟು ಚರ್ಚೆ, ಚೌಕಾಸಿಗೆ ಕಾರಣವಾಗಿದ್ದ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳುವ ಸಮಯ ಸನ್ನಿಹಿತವಾದಂತೆ ಆಗಿದೆ. ಇನ್ನೊಂದೆಡೆ ಯುರೋಪಿಯನ್ ಒಕ್ಕೂಟದ ಜೊತೆಗೂ ಇದೇ ರೀತಿಯ ಒಪ್ಪಂದ ಬಹುತೇಕ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಒಪ್ಪಂದ ಜಾರಿಗೆ ಅಡ್ಡಿಯಾಗಿರುವ ವಿಷಯಗಳ ಕುರಿತು ನವದೆಹಲಿಯಲ್ಲಿ ಉಭಯ ದೇಶಗಳ ಅಧಿಕಾರಿಗಳ ಹಂತದ ಮಾತುಕತೆ ಮುಕ್ತಾಯಗೊಂಡ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ವಾಣಿಜ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಅಗರ್ವಾಲ್, ‘ಎರಡೂ ದೇಶಗಳ ಅಧಿಕಾರಿಗಳ ತಂಡ, ಬಾಕಿ ಉಳಿದ ವಿಷಯಗಳ ಕುರಿತು ಸಮಾಲೋಚನೆ ನಡೆಸುತ್ತಿದೆ. ಅದು ಬಹುತೇಕ ಅಂತಿಮ ಹಂತದಲ್ಲಿದೆ. ಆದರೆ ಒಪ್ಪಂದ ಅಂತಿಮ ಸಂಬಂಧ ನಾವು ಯಾವುದೇ ಗಡುವು ಹಾಕಿಕೊಂಡಿಲ್ಲ. ಏಕೆಂದರೆ ಅದು ಶೀಘ್ರ ಆಗುವ ವಿಶ್ವಾಸವಿದೆ. ಈ ವಿಷಯದಲ್ಲಿ ಎರಡೂ ದೇಶಗಳು ಅಣಿಯಾದಾಗ ನಾವು ಈ ವಿಷಯವನ್ನು ಪ್ರಕಟಿಸಲಿದ್ದೇವೆ’ ಎಂದು ತಿಳಿಸಿದರು.

ಯುರೋಪ್‌ ಜತೆ ಮುಕ್ತ ಒಪ್ಪಂದ:

ಈ ನಡುವೆ, ‘ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಅಂತಿಮಗೊಳಿಸಲು ಭಾರತ ಮತ್ತು ಯುರೋಪಿಯನ್ ಒಕ್ಕೂಟ (ಇಯು) ತುಂಬಾ ಸನಿಹದಲ್ಲಿವೆ. ಉಳಿದ ಸಮಸ್ಯೆಗಳನ್ನು ಪರಿಹರಿಸಲು ಚರ್ಚೆಗಳು ನಡೆಯುತ್ತಿವೆ, ಈ ತಿಂಗಳ ಕೊನೆಯಲ್ಲಿ ಒಪ್ಪಂದ ಘೋಷಣೆಗೆ ಸಿದ್ಧವಾಗುತ್ತದೆ’ ಎಂದು ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ.