ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲೆ ಹುಣಸೂರು ತಾಲೂಕು ದಾಸನಪುರ ಗ್ರಾಮದ ತೋಟದ ಶೆಡ್‌ನಲ್ಲಿ ಶುಕ್ರವಾರ ರಾತ್ರಿ ಪತ್ತೆಯಾದ ಸಿಂಥೆಟಿಕ್‌ ಡ್ರಗ್ಸ್‌ಗೆ ಮುಂಬೈ ನಂಟು ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವಶಪಡಿಸಿಕೊಳ್ಳಲಾದ ಮಾದಕ ವಸ್ತುವಿನ ಮೌಲ್ಯ 12 ಕೋಟಿ ರು. ಎಂದು ಮಾಹಿತಿ ನೀಡಿದ್ದಾರೆ.

ಮುಂಬೈನ ನಾಲ್ಕು ಮಂದಿಯೊಂದಿಗೆ ಮೈಸೂರಿನ ಇಬ್ಬರು ಆರೋಪಿಗಳು ಈ ಡ್ರಗ್ಸ್‌ ಜಾಲದಲ್ಲಿದ್ದರು. ಮಾದಕ ವಸ್ತು ಪ್ಯಾಕಿಂಗ್ ಮತ್ತು ವಿತರಣೆಗೆ ಅವರು ಮೈಸೂರನ್ನು ಆಯ್ಕೆ ಮಾಡಿಕೊಂಡಿದ್ದರು. ಮುಂಬೈನಿಂದ ಕೆಲ ವಸ್ತುಗಳನ್ನು ತರಿಸಿದ್ದು, ಆನ್‌ಲೈನ್‌ ಮೂಲಕವೂ ಡ್ರಗ್ಸ್ ತಯಾರಿಕೆಗೆ ಬೇಕಾದ ಕೆಲ ವಸ್ತುಗಳನ್ನು ಖರೀದಿಸಿ ಶೆಡ್‌ನಲ್ಲಿ ಸಂಗ್ರಹಿಸಿದ್ದರು. ಇಲ್ಲಿ ಸಂಗ್ರಹಿಸಿದ್ದ ವಸ್ತುಗಳನ್ನು ಕೊನೆಯ ಹಂತದಲ್ಲಿ ಮಿಶ್ರಣ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ವಿತರಣೆಗೆ ಸಿದ್ಧತೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಡ್ರಗ್ಸ್‌ ಸಂಗ್ರಹಿಸಿದ್ದವ ಹಾಗೂ ಆತನಿಗೆ ಶೆಡ್‌ ನೀಡಿದ್ದ ತೋಟದ ಮಾಲೀಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಈ ಬಗ್ಗೆ ಮಾಹಿತಿ ನೀಡಿದರು. ಬಂಧಿತ ಮಾದಕ ವ್ಯಸನಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ದಾಸನಪುರ ಗ್ರಾಮದ ತೋಟದ ಶೆಡ್‌ನ ಮೇಲೆ ದಾಳಿ ನಡೆಸಿದ ಮೈಸೂರು ಗ್ರಾಮಾಂತರ ಪೊಲೀಸರು, ಶೆಡ್‌ನಲ್ಲಿ ದಾಸ್ತಾನು ಮಾಡಿಟ್ಟಿದ್ದ 48 ಕೆ.ಜಿ. ಡ್ರಗ್ಸ್ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಸಿದ್ದಿಖಿನಗರದ ಮೊಹಮ್ಮದ್ ಇರ್ಫಾನ್ (30) ಮತ್ತು ಶೆಡ್‌ ಅನ್ನು ಬಾಡಿಗೆ ನೀಡಿದ್ದ ಹುಣಸೂರಿನ ರೆಹಮತ್ ಮೊಹಲ್ಲಾ ನಿವಾಸಿ ಮೊಹಮ್ಮದ್ ಇರ್ಫಾನ್ (42) ನನ್ನು ಬಂಧಿಸಲಾಗಿದೆ. ಇನ್ನೂ ಐವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಶುಂಠಿಗಾಗಿ ಶೆಡ್‌ ಬಾಡಿಗೆಗೆ:


ಬಂಧಿತ ಆರೋಪಿಗಳು ಮುಂಬೈನ ನಾಲ್ವರು ಡ್ರಗ್ಸ್ ರೂವಾರಿಗಳೊಂದಿಗೆ ಕಳೆದ 6 ತಿಂಗಳಿನಿಂದ ಸಂಪರ್ಕದಲ್ಲಿದ್ದರು. ಮುಂಬೈನಿಂದ ಮಾದಕ ವಸ್ತುವನ್ನು ತಂದು ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ವಿತರಿಸುವ ಯೋಜನೆ ರೂಪಿಸಿ, ಇದಕ್ಕಾಗಿ ಶುಂಠಿ ದಾಸ್ತಾನು ಮಾಡಲು ಜಾಗ ಬೇಕು ಎಂದು ಹೇಳಿ ದಾಸನಪುರ ತೋಟದ ಶೆಡ್ ಅನ್ನು ತಿಂಗಳ ಹಿಂದಷ್ಟೇ ಬಾಡಿಗೆ ಪಡೆದಿದ್ದರು. ಮಾದಕ ವಸ್ತು, ಮಾದಕ ವಸ್ತು ತಯಾರಿಕೆಗೆ ಬೇಕಾದ ಕಚ್ಚಾ ಪದಾರ್ಥ, ತಯಾರಿಕೆಗೆ ಬಳಸುವ ಯಂತ್ರೋಪಕರಣಗಳನ್ನು ಗೂಡ್ಸ್ ವಾಹನ ಮತ್ತು ಟ್ರಾಕ್ಟರ್ ಮೂಲಕ ಸಾಗಿಸಿ ಇಲ್ಲಿ ತಂದಿಟ್ಟಿದ್ದರು. ಮಾದಕ ವಸ್ತು ತಯಾರಿಗೆ ಬೇಕಿರುವ ಕೆಲ ರಾಸಾಯನಿಕಗಳನ್ನು ಆನ್‌ಲೈನ್ ಮೂಲಕ ತರಿಸಿಕೊಂಡಿದ್ದರು.

ಈ ತೋಟ, ಗ್ರಾಮದಿಂದ ದೂರವಿದ್ದು, ಶೆಡ್‌ ಅನ್ನು ತೋಟದೊಳಗೆ ಸಾಕಷ್ಟು ದೂರದಲ್ಲಿ ಕಟ್ಟಲಾಗಿತ್ತು. ತೋಟದ ಪ್ರವೇಶ ದ್ವಾರದ ಗೇಟ್‌ನಿಂದ ಶೆಡ್‌ಗೆ ತೆರಳಲು ಸಾಕಷ್ಟು ದೂರವಿದ್ದು, ರಸ್ತೆಗೆ ಶೆಡ್‌ ಕಾಣುತ್ತಿರಲಿಲ್ಲ. ಕಚ್ಚಾ ರಸ್ತೆಯ ಮೂಲಕವೇ ಶೆಡ್‌ಗೆ ಸಾಗಬೇಕಿದ್ದು, ಅಲ್ಲಿನ ವ್ಯವಹಾರಗಳು ಸಾರ್ವಜನಿಕರಿಗೆ ತಿಳಿಯದಂತೆ ಖದೀಮರು ಎಚ್ಚರಿಕೆ ವಹಿಸಿದ್ದರು. ಇಲ್ಲಿ ತಯಾರಿಸಿದ ಡ್ರಗ್ಸ್‌ ಅನ್ನು ಇತರೆಡೆ ಸಾಗಿಸಲು ಯೋಜಿಸಿದ್ದರು.

ಡ್ರಗ್ಸ್‌ ತಯಾರಿಕೆಗೆ ಬಳಸುವ ಕಚ್ಚಾ ಪದಾರ್ಥ, ಮಾದಕ ವಸ್ತು, 50 ಗ್ರಾಂ.ನಿಂದ 1 ಕೆ.ಜಿ.ವರೆಗೆ ಪ್ಯಾಕ್ ಮಾಡಿದ್ದ 16 ಪ್ಯಾಕೆಟ್‌, ಶೇಖರಿಸಿಟ್ಟಿದ್ದ 7.35 ಕೆ.ಜಿ. ತೂಕದ ಮೆಪೇಡ್ರೋನ್, ಮಾದಕ ವಸ್ತು ತಯಾರಿಕೆಗೆ ಬಳಸುವ ರಾಸಾಯನಿಕ ಸೇರಿ ಒಟ್ಟು 48 ಕೆ.ಜಿ. ತೂಕದ ಡ್ರಗ್ಸ್ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೆಪೇಡ್ರೋನ್‌ನ 1 ಕೆ.ಜಿ.ಗೆ ₹30 ಲಕ್ಷ ಮೌಲ್ಯವಿದ್ದು, ಒಂದೇ ಕಡೆ 7.35 ಕೆ.ಜಿ. ಮೆಪೇಡ್ರೋನ್‌ ಸಿಕ್ಕಿದ್ದು ಗಮನಾರ್ಹ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರ 3 ತಂಡ ರಚಿಸಲಾಗಿದ್ದು, ಮುಂಬೈ, ಇತರ ರಾಜ್ಯಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ.

---

3 ತಿಂಗಳಲ್ಲಿ 77 ಕೇಸ್ ಪತ್ತೆ

ಮೈಸೂರು ಜಿಲ್ಲಾ ಪೊಲೀಸರು ಕಳೆದ ಮೂರು ತಿಂಗಳಲ್ಲಿ ಮಾದಕ ವಸ್ತು ವಿರುದ್ಧ ಕಾರ್ಯಾಚರಣೆ ನಡೆಸಿದ್ದು, 77 ಪ್ರಕರಣ ದಾಖಲಿಸಿದ್ದಾರೆ. 63 ಮಂದಿ ಡ್ರಗ್ಸ್ ಸೇವನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರನ್ನು ‘ಸನ್ಮಿತ್ರ ಯೋಜನೆ’ಯಡಿ ಅವರ ಮೇಲೆ ನಿಗಾ ವಹಿಸಲಾಗಿತ್ತು. ಈ ಮೂಲಕವೇ ಈ ಜಾಲ ಪತ್ತೆಯಾಗಿರುವುದು ವಿಶೇಷ.

-ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ, ಮೈಸೂರು.