ಚೀನಾ ಅಧ್ಯಕ್ಷರ ಜತೆ ಜೈಶಂಕರ್‌ ಭೇಟಿ : ಗಡಿ ಬಗ್ಗೆ ಚರ್ಚೆ

| N/A | Published : Jul 16 2025, 12:45 AM IST / Updated: Jul 16 2025, 03:33 AM IST

ಸಾರಾಂಶ

ಶಾಂಘೈ ಕಾರ್ಪೊರೇಷನ್ ಆರ್ಗನೈಸೇಷನ್‌ ಸಭೆ ಹಿನ್ನೆಲೆಯಲ್ಲಿ ಬೀಜಿಂಗ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿದ್ದಾರೆ.  

 ಬೀಜಿಂಗ್‌/ನವದೆಹಲಿ: ಶಾಂಘೈ ಕಾರ್ಪೊರೇಷನ್ ಆರ್ಗನೈಸೇಷನ್‌ ಸಭೆ ಹಿನ್ನೆಲೆಯಲ್ಲಿ ಬೀಜಿಂಗ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಂಗಳವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಗಡಿ ವಿವಾದ ಸೇರಿ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದಲ್ಲಾಗುತ್ತಿರುವ ಸುಧಾರಣೆಗಳ ಕುರಿತು ವಿವರಣೆ ನೀಡಿದ್ದಾರೆ.

2020ರ ಅರುಣಾಚಲ ಪ್ರದೇಶದ ಗಾಲ್ವಾನ್‌ ವ್ಯಾಲಿ ಸಂಘರ್ಷದ ಬಳಿಕ ಭಾರತೀಯ ವಿದೇಶಾಂಗ ಸಚಿವರ ಮೊದಲ ಚೀನಾ ಭೇಟಿ ಇದಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಜೈಶಂಕರ್‌, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರ ಶುಭ ಕಾಮನೆಯ ಸಂದೇಶವನ್ನು ಜಿನ್‌ಪಿಂಗ್‌ ಅವರಿಗೆ ತಲುಪಿಸಿದ್ದೇನೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಕುರಿತ ಬೆಳವಣಿಗೆಗಳ ಕುರಿತು ಅವರಿಗೆ ವಿವರಿಸಿದ್ದೇನೆ. ಈ ವಿಚಾರದಲ್ಲಿ ನಾಯಕರ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸೋಮವಾರವಷ್ಟೇ ಜೈಶಂಕರ್‌ ಅವರು, ಕಳೆದ ಒಂಬತ್ತು ತಿಂಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಸಾಕಷ್ಟು ಪ್ರಗತಿ ಆಗುತ್ತಿದೆ. ಇನ್ನು ಮುಂದೆ ಗಡಿಗೆ ಸಂಬಂಧಿಸಿದ ಇತರೆ ಸಮಸ್ಯೆಗಳು, ಮುಖ್ಯವಾಗಿ ಸಂಘರ್ಷ ಕಡಿತಗೊಳಿಸುವ ಕುರಿತು ಹೆಚ್ಚಿನ ಆದ್ಯತೆ ನೀಡಬೇಕಿದೆ. ಜತೆಗೆ, ಚೀನಾವು ವ್ಯಾಪಾರದ ವಿಚಾರದಲ್ಲಿ ಅಡೆ-ತಡೆ ಸೃಷ್ಟಿಸಬಾರದು, ರೇರ್‌ ಅರ್ಥ್‌ ಖನಿಜಗಳ ರಫ್ತಿನ ಮೇಲೆ ಯಾವುದೇ ನಿರ್ಬಂಧ ವಿಧಿಸಬಾರದು ಎಂದು ಹೇಳಿಕೊಂಡಿದ್ದರು.

ಜೈಶಂಕರ್‌-ಜಿನ್‌ಪಿಂಗ್‌ ಭೇಟಿಗೆ ಕಿಡಿ:

ಚೀನಾ ಅಧ್ಯಕ್ಷ-ವಿದೇಶಾಂಗ ಸಚಿವ ಜೈಶಂಕರ್‌ ಭೇಟಿಗೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಭಾರತದ ವಿದೇಶಾಂಗ ನೀತಿ ಹಾಳುಗೆಡವಲು ಜೈಶಂಕರ್‌ ಅವರು ತೀವ್ರತರದ ಸರ್ಕಸ್‌ ನಡೆಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದೇ ವೇಳೆ ಜೈರಾಂ ರಮೇಶ್‌ ಸೇರಿ ಇತರೆ ಕಾಂಗ್ರೆಸ್‌ ನಾಯಕರು, ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ ಪ್ರಸ್ತಾಪಿಸಿ ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

Read more Articles on