ಪಾಕ್‌ ಸೇನಾ ಮುಖ್ಯಸ್ಥರು ತೀವ್ರವಾದಿ ಧಾರ್ಮಿಕ ದೃಷ್ಟಿಕೋನದಿಂದ ಮಾಡಿದ ಪ್ರಚೋದನೆ ಪಹಲ್ಗಾಂ ದಾಳಿಗೆ ಕಾರಣ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಆಮ್‌ಸ್ಟರ್‌ ಡ್ಯಾಂ: ಪಾಕ್‌ ಸೇನಾ ಮುಖ್ಯಸ್ಥರು ತೀವ್ರವಾದಿ ಧಾರ್ಮಿಕ ದೃಷ್ಟಿಕೋನದಿಂದ ಮಾಡಿದ ಪ್ರಚೋದನೆ ಪಹಲ್ಗಾಂ ದಾಳಿಗೆ ಕಾರಣ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಕಾಶ್ಮೀರವು ಪಾಕಿಸ್ತಾನದ ರಕ್ತನಾಳ ಎಂದು ಪಾಕ್‌ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ ಹೇಳಿಕೆ ನೀಡಿದ ಬೆನ್ನಲ್ಲೇ ಪಹಲ್ಗಾಂ ನರಮೇಧ ನಡೆದಿತ್ತು. ಈ ಬಗ್ಗೆ ಹಾಲೆಂಡ್‌ ಪ್ರವಾಸದಲ್ಲಿರುವ ಜೈಶಂಕರ್‌ ಡಚ್ ದಿನಪತ್ರಿಕೆ ‘ಡಿ ವೋಕ್ಸ್‌ಕ್ರಾಂಟ್‌’ಗೆ ಸಂದರ್ಶನ ನೀಡಿ, ‘ಪಾಕ್ ಸೇನಾ ಮುಖ್ಯಸ್ಥರು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ಪಹಲ್ಗಾಮ್ ಭಯೋತ್ಪಾದಕರ ನಡವಳಿಕೆಯ ನಡುವೆ ಸ್ಪಷ್ಟವಾಗಿ ಕೆಲವು ಸಂಬಂಧವಿದೆ’ ಎಂದರು.

‘ಆರ್ಥಿಕತೆಯ ಮುಖ್ಯ ಆಧಾರವಾಗಿರುವ ಪ್ರವಾಸೋದ್ಯಮಕ್ಕೆ ಹಾನಿ ಮಾಡುವ ಮತ್ತು ಧಾರ್ಮಿಕ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ಧರ್ಮದ ಅಂಶ ಪರಿಚಯಿಸಲಾಗಿದೆ. ತೀವ್ರವಾದ ಧಾರ್ಮಿಕ ದೃಷ್ಟಿಕೋನದಿಂದ ಪಾಕ್‌ ಆಡಳಿತ ನಡೆಯುತ್ತದೆ. ಅದರಲ್ಲೂ ವಿಶೇಷವಾಗಿ ಸೇನಾ ಮುಖ್ಯಸ್ಥರು ಕೂಡ ಧಾರ್ಮಿಕ ತೀವ್ರವಾದಿಯಾಗಿದ್ದಾರೆ’ ಎಂದರು.