ದೇಶದ 9 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ (ಎಸ್ಐಆರ್) ವೇಳಾಪಟ್ಟಿಯನ್ನು 1 ವಾರ ಕಾಲ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ.
ನವದೆಹಲಿ: ದೇಶದ 9 ರಾಜ್ಯ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸದ್ಯ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಯ (ಎಸ್ಐಆರ್) ವೇಳಾಪಟ್ಟಿಯನ್ನು 1 ವಾರ ಕಾಲ ವಿಸ್ತರಿಸಿ ಚುನಾವಣಾ ಆಯೋಗ ಆದೇಶಿಸಿದೆ.
ಇದೀಗ ಡಿ.11ರ ತನಕ ಮುಂದೂಡಿಕೆ
ಆಯೋಗ ಈ ಹಿಂದೆ ನೀಡಿದ ಆದೇಶದ ಪ್ರಕಾರ ಡಿ.4ಕ್ಕೆ ಈ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಗಿಯಬೇಕಿತ್ತು. ಆದರೆ ಅದನ್ನು ಇದೀಗ ಡಿ.11ರ ತನಕ ಮುಂದೂಡಿಕೆ ಮಾಡಿದೆ. ಈ ಪ್ರಕಾರ ವಿಶೇಷ ಮತಪಟ್ಟಿಯ ಕರಡುಪಟ್ಟಿಯು ಡಿ.9ರ ಬದಲು 16ಕ್ಕೆ ಪ್ರಕಟವಾಗಲಿದೆ. ಅಂತಿಮ ಮತದಾರ ಪಟ್ಟಿಯು ಮುಂದಿನ ವರ್ಷದ ಫೆಬ್ರವರಿ 14ಕ್ಕೆ ಪ್ರಕಟವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ‘ಪರಿಷ್ಕರಣೆಯನ್ನು ಗಡಿಬಿಡಿ ಮಾಡಿ ಮುಗಿಸಲಾಗದು ಎಂದು ಚುನಾವಣಾ ಆಯೋಗಕ್ಕೆ ಈಗ ಅರಿವಾದಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಮತಪಟ್ಟಿ ಪರಿಷ್ಕರಣೆ ಒತ್ತಡ?: ಮತ್ತಿಬ್ಬರು ಬಿಎಲ್‌ಒಗಳು ಸಾವು
ಜೈಪುರ: ದೇಶದಲ್ಲಿ ಬಿಎಲ್‌ಒಗಳ (ಬೂತ್ ಮಟ್ಟದ ಅಧಿಕಾರಿ) ಸಾವಿನ ಸರಣಿ ಮುಂದುವರಿದಿದೆ. ರಾಜಸ್ಥಾನದಲ್ಲಿ ಓರ್ವ ಬಿಎಲ್‌ಒ ಕುಸಿದು ಬಿದ್ದು ಸಾವನ್ನಪ್ಪಿದರೆ, ಉತ್ತರ ಪ್ರದೇಶದಲ್ಲಿ ಒಬ್ಬ ಬಿಎಲ್‌ಒ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಎಸ್‌ಐಆರ್ ವೇಳೆ ಮೃತಪಟ್ಟ ಸಿಬ್ಬಂದಿ ಸಂಖ್ಯೆ 14ಕ್ಕೇರಿಕೆಯಾಗಿದೆ.
ರಾಜಸ್ಥಾನದ ಧೋಲ್ಪುರದಲ್ಲಿ ಬಿಎಲ್ಒ ಆಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ಅನುಜ್ ಗರ್ಗ್ ಶನಿವಾರ ತಡರಾತ್ರಿ ತಮ್ಮ ಮನೆಯಲ್ಲಿಯೇ ಮತಪಟ್ಟಿ ಪರಿಷ್ಕರಣೆ ಡೇಟಾ ಅಪ್ಲೋಡ್ ಮಾಡುತ್ತಿದ್ದರು. ಈ ವೇಳೆ ಇದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ‘ಅನುಜ್ ಕೆಲಸದೊತ್ತಡದಿಂದ ಬಳಲುತ್ತಿದ್ದರು. ತಡರಾತ್ರಿಯವರೆಗೂ ಎಸ್‌ಐಆರ್ ಕೆಲಸ ಮಾಡುತ್ತಿದ್ದರು’ ಎಂದು ಕುಟುಂಬಸ್ಥರು ದೂಷಿಸಿದ್ದಾರೆ.ಇನ್ನು ‘ಮತಪಟ್ಟಿ ಪರಿಷ್ಕರಣೆ ಕೆಲಸದ ಒತ್ತಡ ತಾಳಲಾಗುತ್ತಿಲ್ಲ’ ಎಂದು ಪತ್ರ ಬರೆದಿಟ್ಟು ಸಹಾಯಕ ಶಿಕ್ಷಕ ಸರ್ವೇಶ್ ಸಿಂಗ್ (46) ಮೊರಾದಾಬಾದ್‌ನಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ.