ಸಾರಾಂಶ
ನವದೆಹಲಿ: ‘ಬೂತ್‌ವಾರು ಮತಪ್ರಮಾಣ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್ ತಿಳಿಸಿದ ಮರುದಿನವೇ ಚುನಾವಣಾ ಆಯೋಗವು ಇದುವರೆಗೆ ನಡೆದಿರುವ ಎಲ್ಲ 5 ಹಂತಗಳ ಲೋಕಸಭಾ ಕ್ಷೇತ್ರಗಳ ಕ್ಷೇತ್ರವಾರು ಮತಪ್ರಮಾಣದ ನಿಖರ ಅಂಕಿ ಅಂಶಗಳನ್ನು ತನ್ನ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಈ ಅಂಕಿ-ಅಂಶದಲ್ಲಿ ಶೇಕಡಾವಾರು ಮತದಾನದ ಜತೆಗೆ ಎಷ್ಟು ಒಟ್ಟು ಚಲಾವಣೆಯಾದ ಮತಗಳ ನಿಖರ ಸಂಖ್ಯೆಯನ್ನು ಕೂಡ ಇದೆ.
ಇದೇ ವೇಳೆ, ‘ಮತದಾನ ಪ್ರಮಾಣದ ಬಗ್ಗೆ ನಮ್ಮ ಬಗ್ಗೆ ಸಂದೇಹ ಪಡಲಾಗುತ್ತಿತ್ತು. ಸುಳ್ಳು ಸುದ್ದಿ ಹರಡಿಸಲಾಗುತ್ತಿತ್ತು. ಆದರೆ ಮತದಾನ ಅಂಕಿ-ಅಂಶ ತಿರುಚಲು ಸಾಧ್ಯವೇ ಇಲ್ಲ’ ಎಂದು ಅದು ಸ್ಪಷ್ಟಪಡಿಸಿದೆ ಹಾಗೂ ತನ್ನ ಬಗ್ಗೆ ಸಂದೇಹಿಸಿದ್ದ ಪ್ರತಿಪಕ್ಷಗಳಿಗೆ ಹಾಗೂ ಕೆಲವು ಸ್ವಯಂಸೇವಾ ಸಂಸ್ಥೆಗಳಿಗೆ ತಿರುಗೇಟು ನೀಡಿದೆ.
ಈ ಮೂಲಕ ಇನ್ನು ಮುಂದೆ ಒಟ್ಟು ಚಲಾವಣೆಯಾದ ನಿಖರ ಅಂಕಿ ಅಂಶಗಳು ಸಾರ್ವಜನಿಕವಾಗಿ ದಿನದ 24 ಗಂಟೆಯೂ ಚುನಾವಣಾ ಆಯೋಗದ ಅಂತರ್ಜಾಲ ಹಾಗೂ ಆ್ಯಪ್‌ನಲ್ಲಿ ಲಭ್ಯವಿರಲಿದೆ.
ಆಯೋಗದ ಸ್ಪಷ್ಟನೆ:
ಚುನಾವಣಾ ಆಯೋಗವು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ‘ಕಳೆದ ಕೆಲವು ದಿನಗಳಿಂದ ಮತದಾನದ ದಿಕ್ಕು ತಪ್ಪಿಸುವಂತಹ ಸುಳ್ಳುಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಮತಪ್ರಮಾಣ ಪ್ರಕಟ ಮಾಡುವ ಕುರಿತು ನೀಡಿರುವ ತೀರ್ಪು ಚುನಾವಣಾ ಆಯೋಗಕ್ಕೆ ಬಲ ತುಂಬಿದ್ದು, ಪ್ರಜಾಪ್ರಭುತ್ವದಲ್ಲಿ ಮತದಾನದ ಗೌಪ್ಯತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತದೆ’ ಎಂದು ತಿಳಿಸಿದೆ.
ಚುನಾವಣಾ ಆಯೋಗವು ಬಿಡುಗಡೆ ಮಾಡುವ ಮತಪ್ರಮಾಣದಲ್ಲಿ ಶೇ.5-6ರಷ್ಟು ವ್ಯತ್ಯಾಸ ಇರುವುದು ಗೊಂದಲಕ್ಕೆ ಕಾರಣವಾಗಲಿದೆ ಎಂದು ಎಡಿಆರ್ ಎಂಬ ಸಂಸ್ಥೆ ಇತ್ತೀಚೆಗೆ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಇದರ ಜೊತೆಗೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ ಸೇರಿದಂತೆ ಪ್ರತಿಪಕ್ಷ ನಾಯಕರೂ ಸಹ ಭಾರೀ ಪ್ರಮಾಣದಲ್ಲಿ ಮತಪ್ರಮಾಣವನ್ನು ಅದಲು-ಬದಲಾಗುತ್ತಿದೆ ಎಂದು ಸಂದೇಹಿಸಿದ್ದರು. ಹೀಗಾಗಿ ಈಗ ಒಟ್ಟು ಚಲಾವಣೆಯಾದ ಮತಗಳ ನಿಖರ ಅಂಕಿಗಳನ್ನು ಬಿಡುಗಡೆ ಮಾಡಿ ಎಲ್ಲ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದೆ.
ಯಾವ ಮಾಹಿತಿ ಬಹಿರಂಗ?:
ಚುನಾವಣಾ ಆಯೋಗವು ಕ್ಷೇತ್ರವಾರು ಮತಪ್ರಮಾಣದ ನಿಖರ ಅಂಕಿಅಂಶಗಳನ್ನು ಬಹಿರಂಗವಾಗಿ ಬಿಡುಗಡೆ ಮಾಡಿದೆ. ಇದರಲ್ಲಿ ಒಟ್ಟು ಮತ ಸಂಖ್ಯೆ, ಶೇಕಡಾವಾರು ಮತದಾನ ಪ್ರಮಾಣ, ಮತದಾನ ಪ್ರಮಾಣ ನಿಖರ ಸಂಖ್ಯೆ ನೀಡಲಾಗಿದೆ. ಇದಕ್ಕೂ ಮೊದಲು ಈ ಮಾಹಿತಿಯನ್ನು ಕೇವಲ ಅಭ್ಯರ್ಥಿಗಳಿಗೆ ಮಾತ್ರ ನೀಡಲಾಗುತ್ತಿತ್ತು ಮತ್ತು ಬಹಿರಂಗವಾಗಿ ಕೇವಲ ಮತಪ್ರಮಾಣವನ್ನು ಮಾತ್ರ ಹಂಚಿಕೊಳ್ಳಲಾಗುತ್ತಿತ್ತು.
ಅಂಚೆ ಮತವಿಲ್ಲ:ಚುನಾವಣಾ ಆಯೋಗ ಮತಗಳ ಸಂಖ್ಯೆಯನ್ನು ಪ್ರಕಟಿಸಿದ್ದರೂ, ಇದರಲ್ಲಿ ಕೇವಲ ಇವಿಎಂಗಳ ದತ್ತಾಂಶವನ್ನು ಮಾತ್ರ ಕ್ರೋಡೀಕರಿಸಲಾಗಿದೆ. ಇದರಲ್ಲಿ ಅಂಚೆ ಮತಗಳನ್ನು ಸೇರಿಸಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಬೆಂಗಳೂರು ಕೇಂದ್ರದಲ್ಲಿ 13,15,612 ಮಂದಿ ಮತ
ಉದಾಹರಣೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 24,33,751 ಅರ್ಹ ಮತದಾರರಿದ್ದು, 13,15,612 ಮಂದಿ ಮತದಾನ ಮಾಡಿರುವ ಕುರಿತು ಮಾಹಿತಿ ನೀಡಿದೆ. ಇದಕ್ಕೂ ಮೊದಲು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಶೇ.54.06ರಷ್ಟು ಮತದಾನವಾಗಿದೆ ಎಂಬುದಾಗಿ ಮಾತ್ರ ಪ್ರಕಟಿಸಲಾಗಿತ್ತು.5 ಹಂತ 50 ಕೋಟಿ ಮಂದಿಯಿಂದ ಮತ
ಮೊದಲ ಐದು ಹಂತಗಳಲ್ಲಿ ಒಟ್ಟು 76.41 ಕೋಟಿ ಮಂದಿ ಅರ್ಹ ಮತದಾರರಿದ್ದು, ಈ ಪೈಕಿ 50.72 ಕೋಟಿ ಮತ ಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮೊದಲ ಹಂತದಲ್ಲಿ 11 ಕೋಟಿ, ಎರಡನೇ ಹಂತದಲ್ಲಿ 10.58 ಕೋಟಿ, ಮೂರನೇ ಹಂತದಲ್ಲಿ 11.32 ಕೋಟಿ, ನಾಲ್ಕನೇ ಹಂತದಲ್ಲಿ 12.25 ಕೋಟಿ ಮತ್ತು ಐದನೇ ಹಂತದಲ್ಲಿ 5.57 ಕೋಟಿ ಮಂದಿ ಇವಿಎಂ ಮೂಲಕ ಮತ ಚಲಾಯಿಸಿದ್ದಾರೆ.