ಸಾರಾಂಶ
ನವದೆಹಲಿ/ಬೀಜಿಂಗ್ : ಇತ್ತೀಚೆಗೆ ಶಾಂಘೈ ಶೃಂಗದಲ್ಲಿ ಭಾರತ, ಚೀನಾ ಹಾಗೂ ರಷ್ಯಾ ಅಮೆರಿಕ ಅಧ್ಯಕ್ಷ ಟ್ರಂಪ್ ತೆರಿಗೆಗೆ ಸಡ್ಡು ಹೊಡೆದಿದ್ದವು. ಈಗ ಸೋಮವಾರ ನಡೆದ ಬ್ರಿಕ್ಸ್ ಶೃಂಗದಲ್ಲಿ ಅಮೆರಿಕ ತೆರಿಗೆ ನೀತಿಗೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಟ್ಟಾಗಿ ದನಿ ಎತ್ತಿದ್ದಾರೆ.
ಬ್ರೆಜಿಲ್ ನೇತೃತ್ವದಲ್ಲಿ ಬ್ರಿಕ್ಸ್ ವರ್ಚುವಲ್ ವಿಧಾನದಲ್ಲಿ ಮಾತನಾಡಿದ ಜೈಶಂಕರ್, ‘ವ್ಯಾಪಾರ ಮತ್ತು ಹೂಡಿಕೆಗಾಗಿ ಜಗತ್ತು ಸ್ಥಿರ ವಾತಾವರಣವನ್ನು ಹುಡುಕುತ್ತಿದೆ. ಆರ್ಥಿಕ ನೀತಿಗಳು ಎಂದಿಗೂ ನ್ಯಾಯಯುತ, ಪಾರದರ್ಶಕ ಮತ್ತು ಎಲ್ಲರಿಗೂ ಪ್ರಯೋಜನವಾಗುವಂತೆ ಇರಬೇಕು. ಇದಕ್ಕೆ ಅಡ್ಡಿ ಎದುರದಾಗ ಅದನ್ನು ತಡೆದುಕೊಳ್ಳುವ ಶಕ್ತಿ ಇರಬೇಕು. ಹೀಗಾಗಿ ಅಡೆತಡೆ ಮೆಟ್ಟಿ ನಿಲ್ಲುವ ವ್ಯಾಪಾರ ಸರಪಳಿ ಸೃಷ್ಟಿಸಬೇಕು’ ಎಂದರು. ಈ ಮೂಲಕ ತೆರಿಗೆ ಮತ್ತು ವ್ಯಾಪಾರ ವಿಚಾರವಾಗಿ ಭಾರತದ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪರೋಕ್ಷ ಟಾಂಗ್ ನೀಡಿದರು.
ಕ್ಸಿ ಕಿಡಿ : ಇದೇ ವೇಳೆ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಅಮರಿಕದ ಹೆಸರನ್ನು ಎತ್ತದೆ ಕಿಡಿ ಕಾರಿದ್ದು, ‘ಕೆಲ ದೇಶಗಳು ನಡೆಸುವ ವ್ಯಾಪಾರ ಮತ್ತು ಸುಂಕ ಯುದ್ಧಗಳು ವಿಶ್ವ ಆರ್ಥಿಕತೆಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸುತ್ತಿವೆ. ಈ ನಿರ್ಣಾಯಕ ಹಂತದಲ್ಲಿ, ಬ್ರಿಕ್ಸ್ ದೇಶಗಳು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಜಂಟಿಯಾಗಿ ರಕ್ಷಿಸಬೇಕು’ ಎಂದು ಕರೆ ನೀಡಿದರು.
ಮೋದಿ ನೋಡಿ ಕಲಿಯಿರಿ: ನೆತನ್ಯಾಹುಗೆ ತಜ್ಞ ಸಲಹೆ
ಟೆಲ್ ಅವೀವ್: ‘ಅಂತಾರಾಷ್ಟ್ರೀಯ ಒತ್ತಡ ಮೆಟ್ಟಿನಿಂತು ರಾಷ್ಟ್ರೀಯ ಗೌರವವನ್ನು ಕಾಪಾಡುವುದು ಹೇಗೆ ಎಂಬುದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಕಲಿಯಬೇಕು’ ಎಂದು ಇಸ್ರೇಲ್ ರಕ್ಷಣಾ ತಜ್ಞ ಝಾಕಿ ಶಲೋಂ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಗಾಜಾದ ಆಸ್ಪತ್ರೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 20 ಜನ ಸಾವನ್ನಪ್ಪಿದ್ದರು. ಅದರಲ್ಲಿ ನಾಲ್ವರು ಪತ್ರಕರ್ತರು ಮತ್ತು ನಾಗರಿಕರು ಸೇರಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಇಸ್ರೇಲ್ ರಕ್ಷಣಾ ಮುಖ್ಯಸ್ಥ ಕ್ಷಮೆ ಯಾಚಿಸಿದ್ದರು. ಸ್ವತಃ ಪ್ರಧಾನಿ ನೆತನ್ಯಾಹು ವಿಷಾದ ವ್ಯಕ್ತಪಡಿಸಿ, ಘಟನೆ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದರು. ಆದರೆ ಆ ಬಳಿಕ ದಾಳಿಯಲ್ಲಿ ಸಾವಿಗೀಡಾದವರಲ್ಲಿ ಬಹುತೇಕರು ಹಮಾಸ್ ಉಗ್ರರು ಎಂಬುದು ಬಹಿರಂಗವಾಗಿತ್ತು. ಇದರಿಂದ ನೆತನ್ಯಾಹು ತೀವ್ರ ಮುಜುಗರಕ್ಕೀಡಾಗಿದ್ದರು.ಈ ಕುರಿತು ಇಸ್ರೇಲ್‌ನ ಜೆರುಸಲೇಂ ಪೋಸ್ಟ್ ಪತ್ರಿಕೆಗೆ ಲೇಖನ ಬರೆದಿರುವ ಶಲೋಂ, ‘ಭಾರತವು ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಂದ ಕಠಿಣ ತೆರಿಗೆ ಮತ್ತು ಮೌಖಿಕ ದಾಳಿಗಳನ್ನು ಎದುರಿಸಿದೆ. ಆದರೂ ಮೋದಿ ವಿಚಲಿತರಾಗಲಿಲ್ಲ. ರಷ್ಯಾ ಪರವಾಗಿ ನಿಂತು ಬಲವಾಗಿ ತಿರುಗೇಟು ನೀಡಿದ್ದಾರೆ. ಆಪರೇಷನ್ ಸಿಂದೂರ ವಿಷಯದಲ್ಲೂ ಅವರು ವಿರೋಧ ಲೆಕ್ಕಿಸದೇ ಪಾಕ್ ಮೇಲೆ ದಾಳಿ ಮಾಡಿದ್ದಾರೆ. ಹೀಗಾಗಿ ಅಂತಾರಾಷ್ಟ್ರೀಯ ವಿರೋಧ ಮೆಟ್ಟಿನಿಂತು ರಾಷ್ಟ್ರೀಯ ಗೌರವ ಕಾಪಾಡುವುದನ್ನು ಮೋದಿ ಅವರಿಂದ ನೆತನ್ಯಾಹು ಕಲಿಯಬೇಕು’ ಎಂದು ಶಲೋಂ ಹೇಳಿದ್ದಾರೆ.
ಬ್ಲಡ್ ಮನಿ ಕೊಟ್ಟು ಭಾರತದಿಂದ ತೈಲ ಖರೀದಿ : ನವರೋ
ವಾಷಿಂಗ್ಟನ್: ಭಾರತ ತಮ್ಮ ಶೇ.50 ತೆರಿಗೆಗೂ ಬಗ್ಗದ ಕಾರಣ ಹತಾಶರಾಗಿರುವ ಅಮೆರಿಕದ ಅಧ್ಯಕ್ಷ ಟ್ರಂಪ್‌ರ ವ್ಯಾಪಾರ ಸಲಹೆಗಾರ ಪೀಟರ್ ನವರೋ, ‘ಭಾರತವು ಬ್ಲಡ್ ಮನಿ ನೀಡಿ ರಷ್ಯಾದಿಂದ ತೈಲ ಖರೀದಿಸುತ್ತಿದೆ’ ಎಂದಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನವರೋ, ‘ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುವುದಕ್ಕೂ ಮುನ್ನ ಭಾರತ ರಷ್ಯಾದ ತೈಲವನ್ನು ಇಷ್ಟು ಪ್ರಮಾಣದಲ್ಲಿ ತರಿಸುತ್ತಿರಲಿಲ್ಲ. ಅಲ್ಲಿ(ಉಕ್ರೇನ್‌ನಲ್ಲಿ) ಜನ ಸಾಯುತ್ತಿದ್ದರೂ ಭಾರತ ಬ್ಲಡ್ ಮನಿ(ಕೊಲೆಯಾದವರ ಕಡೆಯವರಿಗೆ ಪರಿಹಾರವಾಗಿ ನೀಡುವ ಹಣ) ನೀಡಿ ತೈಲ ಖರೀದಿ ಮುಂದುವರೆಸಿದೆ’ ಎಂದು ಹೇಳಿದ್ದಾರೆ.ಅತ್ತ ಭಾರತದ ತೈಲ ಖರೀದಿ ಬಗ್ಗೆ ನವರೋ ಹೇಳಿಕೆ ಸುಳ್ಳು ಎಂದ ಎಕ್ಸ್ ಮೇಲೂ ಅವರು ಅಸಮಾಧಾನ ಹೊರಹಾಕಿದ್ದಾರೆ.