ಅನಿಲ್‌ ಅಂಬಾನಿ ಆಪ್ತ ಪಾಲ್‌ ಬಂಧನ

| N/A | Published : Oct 12 2025, 01:00 AM IST

ಸಾರಾಂಶ

68 ಕೋಟಿ ರು. ಮೌಲ್ಯದ ನಕಲಿ ಬ್ಯಾಂಕ್‌ ಗ್ಯಾರಂಟಿ ಜಾರಿ ಪ್ರಕರಣದಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಪವರ್‌ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

 ನವದೆಹಲಿ: 68 ಕೋಟಿ ರು. ಮೌಲ್ಯದ ನಕಲಿ ಬ್ಯಾಂಕ್‌ ಗ್ಯಾರಂಟಿ ಜಾರಿ ಪ್ರಕರಣದಲ್ಲಿ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಪವರ್‌ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ, ಅನಿಲ್‌ ಆಪ್ತನೂ ಆದ ಸಿಎಫ್‌ಒ ಅಶೋಕ್‌ ಪಾಲ್‌ ರನ್ನು ಶುಕ್ರವಾರ ರಾತ್ರಿ ಇ.ಡಿ. ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿತ್ತು. ಬಳಿಕ ಅವರನ್ನು ಬಂಧಿಸಿ, ಕೋರ್ಟ್ ಮೂಲಕ 2 ದಿನ ಕಾಲ ಇ.ಡಿ. ವಶಕ್ಕೆ ಪಡೆಯಲಾಗಿದೆ.

ರಿಲಯನ್ಸ್‌ ಪವರ್‌ನ ಅಂಗಸಂಸ್ಥೆಯಾದ ರಿಲಯನ್ಸ್‌ ಎನ್‌ಯು ಬಿಇಎಸ್‌ಎಸ್‌ ಲಿಮಿಟೆಡ್‌ನ ಪರ, ಸೋಲಾರ್‌ ಎನರ್ಜಿ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿ.ಗೆ (ಎಸ್‌ಇಸಿಐ) 68.2 ಕೋಟಿ ರು. ಮೌಲ್ಯದ ನಕಲಿ ಬ್ಯಾಂಕ್‌ ಗ್ಯಾರಂಟಿ ನೀಡಿದ ಆರೋಪ ಇದೆ. ಹೀಗಾಗಿ ಪಾಲ್‌ರನ್ನು ಬಂಧಿಸಲಾಗಿದೆ.

ಒಡಿಶಾ ಮೂಲದ ಬಿಸ್ವಾಲ್‌ ಟ್ರೇಡ್‌ಲಿಂಕ್‌ ಈ ನಕಲಿ ಬ್ಯಾಂಕ್‌ ಗ್ಯಾರಂಟಿ ಒದಗಿಸಿತ್ತು. ಈ ಸಂಬಂಧ ಇ.ಡಿ.ಯು ಆಗಸ್ಟ್‌ನಲ್ಲಿ ಆ ಕಂಪನಿ, ಅದರ ಪ್ರವರ್ತಕರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್‌ ರನ್ನು ಬಂಧಿಸಿದೆ.

ಸೋಲಾರ್‌ ಎನರ್ಜಿ ಕಾರ್ಪೊರೇಷನ್‌ಗೆ ಫಿಲಿಪ್ಪೀನ್ಸ್‌ನ ಮನಿಲಾದಲ್ಲಿರುವ ಫಸ್ಟ್‌ ಲ್ಯಾಂಡ್‌ ಬ್ಯಾಂಕ್‌ನ ಬ್ಯಾಂಕ್‌ ಗ್ಯಾರಂಟಿ ನೀಡಿದೆ. ಆದರೆ ಆ ದೇಶದಲ್ಲಿ ಬ್ಯಾಂಕ್‌ನ ಶಾಖೆಯೇ ಇಲ್ಲ ಎಂದು ಮೂಲಗಳು ತಿಳಿಸಿವೆ.

Read more Articles on