ಕೇರಳ ಸಿಎಂ ಪುತ್ರಿ ವೀಣಾ ಮೇಲೆ ಇ.ಡಿ. ಕೇಸ್‌ ದಾಖಲು

| Published : Mar 28 2024, 12:51 AM IST / Updated: Mar 28 2024, 12:01 PM IST

ಸಾರಾಂಶ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ವೀಣಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಕುಣಿಕೆ ಸುತ್ತಿಕೊಳ್ಳುವುದು ಖಚಿತವಾಗಿದೆ.

ಕೊಚ್ಚಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ವೀಣಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಕುಣಿಕೆ ಸುತ್ತಿಕೊಳ್ಳುವುದು ಖಚಿತವಾಗಿದೆ. ವೀಣಾ ಅವರಿಗೆ ಸೇರಿದ ಐಟಿ ಕಂಪನಿಗೆ ಮಿನರಲ್ಸ್‌ ಕಂಪನಿಯೊಂದು ಅಕ್ರಮ ಹಣ ವರ್ಗಾಯಿಸಿದೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ (ಇ.ಡಿ.), ಅವರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ. 

ವೀಣಾ ಅವರು ಮುನ್ನಡೆಸುತ್ತಿರುವ ಎಕ್ಸಾಲಾಜಿಕ್‌ ಐಟಿ ಸಲ್ಯೂಷನ್ಸ್‌ಗೆ ಕೊಚ್ಚಿ ಮಿನರಲ್ಸ್‌ ಮತ್ತು ರ್‍ಯೂಟೈಲ್‌ ಲಿಮಿಟೆಡ್‌ ಎಂಬ ಕಂಪನಿಗಳು 2018-19ರ ಅವಧಿಯಲ್ಲಿ ಯಾವುದೇ ಸೇವೆ ಪಡೆಯದೇ 1.72 ಕೋಟಿ ರು. ಅಕ್ರಮ ಹಣ ವರ್ಗಾವಣೆ ಮಾಡಿವೆ ಎಂದು ಇ.ಡಿ. ಆರೋಪಿಸಿದೆ. 

ಈ ಬಗ್ಗೆ ಶೀಘ್ರದಲ್ಲೇ ಸಮನ್ಸ್‌ ನೀಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಈ ಹಿಂದೆ ಗಂಭೀರ ಆಪರಾದಗಳ ತನಿಖಾ ಕಚೇರಿ (ಎಸ್‌ಎಫ್‌ಐಒ) ಆರಂಭಿಸಿದ್ದ ತನಿಖೆಯನ್ನು ರದ್ದು ಮಾಡಬೇಕೆಂದು ಕೋರಿ ವೀಣಾ ಅವರ ಕಂಪನಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆಗೆ ಕಳೆದ ತಿಂಗಳಷ್ಟೇ ನ್ಯಾಯಾಲಯ ತಿರಸ್ಕರಿಸಿ ವಜಾ ಮಾಡಿತ್ತು.