ಸಾರಾಂಶ
ಲೋಕಸಭಾ ಚುನಾವಣೆಗೆ ಪ್ರಚಾರ ಮಾಡುವುದನ್ನು ತಡೆಯುವ ಉದ್ದೇಶದಿಂದ ಜಾರಿ ನಿರ್ದೇಶನಾಲಯದ ಮೂಲಕ ತನ್ನನ್ನು ಬಂಧಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಪ್ರಚಾರ ಮಾಡುವುದನ್ನು ತಡೆಯುವ ಉದ್ದೇಶದಿಂದ ಜಾರಿ ನಿರ್ದೇಶನಾಲಯದ ಮೂಲಕ ತನ್ನನ್ನು ಬಂಧಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ನೇತಾರ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾರಿ ನಿರ್ದೇಶನಾಲಯದಿಂದ ಕಾನೂನುಬಾಹಿರ ಸಮನ್ಸ್ ಕಳುಹಿಸಿ ನನ್ನ ಚಾರಿತ್ರ್ಯಹರಣ ಮಾಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. 2 ವರ್ಷ ಸುಮ್ಮನಿದ್ದು ಚುನಾವಣೆ ವೇಳೆ ಸಮನ್ಸ್ ನೀಡುತ್ತಿದೆ. ಆದರೆ ಪ್ರಾಮಾಣಿಕತೆಯೇ ನನಗೆ ಬಹುದೊಡ್ಡ ಆಸ್ತಿಯಾಗಿದ್ದು, ಕಾನೂನುಬಾಹಿರ ಸಮನ್ಸ್‌ಗೆ ನಾನು ಹಾಜರಾಗುವುದು ನಿರರ್ಥಕ ಎಂದು ನನ್ನ ವಕೀಲರು ತಿಳಿಸಿದ್ದಾರೆ. ಈ ಕುರಿತು ನಾನು ಜಾರಿ ನಿರ್ದೇಶನಾಲಯಕ್ಕೆ ಪತ್ರ ಮುಖೇನ ತಿಳಿಸಿದ್ದು, ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದರು.
ಅಲ್ಲದೆ ಇಲ್ಲಿಯವರೆಗೂ ಆಮ್ ಆದ್ಮಿ ಪಕ್ಷದ ನಾಯಕರು ಜೈಲಿನಲ್ಲಿರುವುದು ಹಗರಣ ಮಾಡಿದ ಕಾರಣಕ್ಕಲ್ಲ. ಬದಲಾಗಿ ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣಕ್ಕಾಗಿ ಎಂದೂ ಸಹ ಕೇಜ್ರಿವಾಲ್ ಆರೋಪಿಸಿದರು.
ಆಪ್ ಪ್ರತಿಕ್ರಿಯೆ:ಅಬಕಾರಿ ಹಗರಣದಲ್ಲಿ ಜಾರಿ ನಿರ್ದೇಶನಾಲಯವು ಕಾನೂನುಬದ್ಧವಾಗಿ ಸಮನ್ಸ್ ನೀಡಿದರೆ ಖಂಡಿತ ಹಾಜರಾಗುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕರಾದ ಜಾಸ್ಮಿನ್ ಶಾ ತಿಳಿಸಿದ್ದಾರೆ. ಜಾರಿ ನಿರ್ದೇಶನಾಲಯವು ಈವರೆಗೆ 500ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ, 1000ಕ್ಕೂ ಅಧಿಕ ದಾಳಿಯನ್ನು ನಡೆಸಿದರೂ ಒಂದು ರು. ಕೂಡ ಅಕ್ರಮ ನಡೆದಿರುವ ಬಗ್ಗೆಯೂ ಸಾಕ್ಷ್ಯ ಸಿಗದಿರುವುದು ಅಬಕಾರಿ ಹಗರಣವು ರಾಜಕೀಯ ಪ್ರೇರಿತ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದರು.