ಕೆನಡಾದ ಕಾಲೇಜುಗಳಿಂದ ಅಮೆರಿಕಕ್ಕೆ ಅಪಾರ ಪ್ರಮಾಣದ ಭಾರತೀಯ ವಿದ್ಯಾರ್ಥಿಗಳ ಕಳ್ಳಸಾಗಣೆ?

| Published : Dec 26 2024, 01:04 AM IST / Updated: Dec 26 2024, 04:29 AM IST

ಸಾರಾಂಶ

ಅಪಾರ ಪ್ರಮಾಣದ ಭಾರತೀಯ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಕೆನಡಾದ ಕಾಲೇಜುಗಳು, ಭಾರತೀಯರನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡುವ ದೊಡ್ಡ ಜಾಲದಲ್ಲಿ ಭಾಗಿಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.

ನವದೆಹಲಿ: ಅಪಾರ ಪ್ರಮಾಣದ ಭಾರತೀಯ ವಿದ್ಯಾರ್ಥಿಗಳನ್ನು ಸೆಳೆಯುತ್ತಿರುವ ಕೆನಡಾದ ಕಾಲೇಜುಗಳು, ಭಾರತೀಯರನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡುವ ದೊಡ್ಡ ಜಾಲದಲ್ಲಿ ಭಾಗಿಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.

2022ರ ಜ.19ರಂದು ಕೆನಡಾ ಗಡಿ ಮೂಲಕ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿ ಅಲ್ಲಿ ಚಳಿ ತಾಳಲಾಗದೇ ನಾಲ್ವರು ಗುಜರಾತಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆ ನಡೆಸಿದ ತನಿಖಾ ಸಂಸ್ಥೆಗಳಿಗೆ ಈ ಅಕ್ರಮ ಕಳ್ಳಸಾಗಣೆಯಲ್ಲಿ ಕೆನಡಾದ 250ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.

ಕಳ್ಳಸಾಗಣೆ ಹೇಗೆ?:

ಭಾರತದಿಂದ ಕೆನಡಾಗೆ ಅಕ್ರಮವಾಗಿ ಹೋಗಬಯಸುವವರನ್ನು ಇದೇ ದಂಧೆಯಲ್ಲಿ ಭಾಗಿಯಾಗಿರುವ ತಂಡವೊಂದು ಕೆನಡಾದ ಕಾಲೇಜುಗಳಲ್ಲಿ, ವಿಶೇಷವಾಗಿ ಅಮೆರಿಕದ ಗಡಿಗೆ ಸಮೀಪವಿರುವ ಕಾಲೇಜುಗಳಿಗೆ ದಾಖಲಿಸುತ್ತಿತ್ತು. ನಂತರ ವಿದ್ಯಾರ್ಥಿ ವೀಸಾ ಪಡೆದು ಅವರು ಕೆನಡಾ ತಲುಪುತ್ತಿದ್ದರು. ಆದರೆ ವಿದ್ಯಾಭ್ಯಾಸ ಮಾಡುತ್ತಿರಲಿಲ್ಲ. ಬದಲಿಗೆ, ಅಕ್ರಮವಾಗಿ ಕೆನಡಾ- ಅಮೆರಿಕ ಗಡಿ ದಾಟುತ್ತಿದ್ದರು. ಅವರು ಕಟ್ಟಿದ್ದ ಶುಲ್ಕವನ್ನೂ ಕಾಲೇಜುಗಳು ಮರಳಿಸುತ್ತಿದ್ದವು. ಇದಕ್ಕೆ ಅವು ಕಮಿಷನ್‌ ಪಡೆದುಕೊಳ್ಳುತ್ತಿದ್ದವು. ಮತ್ತೊಂದೆಡೆ ಪ್ರತಿ ವ್ಯಕ್ತಿಯನ್ನು ಅಮೆರಿಕಕ್ಕೆ ಕಳ್ಳಸಾಗಣೆ ಮಾಡಲು ದಂಧೆಕೋರರು 50- 60 ಲಕ್ಷ ರು. ಹಣ ಪಡೆಯುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.