ಸಾರಾಂಶ
ಚೆನ್ನೈ: ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಮತ್ತು ಆತನ ಕಂಪನಿಗಳ ವಿರುದ್ಧ ನಡೆದಿರುವ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಕರ್ನಾಟಕ ಸೇರಿ 6 ರಾಜ್ಯಗಳ 22 ಸ್ಥಳಗಳಲ್ಲಿ ದಾಳಿ ಮಾಡಿದೆ ಹಾಗೂ 12.41 ಕೋಟಿ ರು. ನಗದು ಹಾಗೂ 6.42 ಕೋಟಿ ರು. ನಿಶ್ಚಿತ ಠೇವಣಿಯನ್ನು ವಶಪಡಿಸಿಕೊಂಡಿದೆ.
‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಮಾರ್ಟಿನ್ ಮತ್ತು ಆತನ ಸಂಸ್ಥೆ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಸಹವರ್ತಿಗಳಿಗೆ ಸಂಬಂಧಿಸಿದ ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಮೇಘಾಲಯ ಮತ್ತು ಪಂಜಾಬ್ ರಾಜ್ಯಗಳ 22 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದೇವೆ.
ಈ ಶೋಧ ಕಾರ್ಯಾಚರಣೆ ವೇಳೆ ವಿವಿಧ ದೋಷಾರೋಪಣೆ ದಾಖಲೆಗಳು, ಡಿಜಿಟಲ್ ಸಾಧನಗಳು,12.41 ಕೋಟಿ ರು. ನಗದು ವಶಪಡಿಸಿಕೊಳ್ಳಲಾಗಿದೆ. ಇದರ ಜತೆಗೆ 6.42 ಕೋಟಿ ರು. ನಿಶ್ಚಿತ ಠೇವಣಿ (ಎಫ್‌ಡಿ) ಕೂಡ ಫ್ರೀಜ್ ಮಾಡಲಾಗಿದೆ’ ಎಂದು ಹೇಳಿಕೆಯಲ್ಲಿ ಇ.ಡಿ. ಸೋಮವಾರ ತಿಳಿಸಿದೆ. ಕಳೆದ ವರ್ಷ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಟಿನ್‌ನ 457 ಕೋಟಿ ರು. ಆಸ್ತಿಯನ್ನು ಇ.ಡಿ. ಜಪ್ತಿ ಮಾಡಿತ್ತು. ಈತನ ಫ್ಯೂಚರ್ ಗೇಮಿಂಗ್ ಕಂಪನಿ, ಸುಪ್ರೀಂ ಕೋರ್ಟ್‌ನಿಂದ ಈಗ ರದ್ದಾಗಿರುವ ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳಿಗೆ 1300 ಕೋಟಿ ರು. ದೇಣಿಗೆ ನೀಡಿ ಸುದ್ದಿ ಮಾಡಿತ್ತು.