ಭಾರತದಲ್ಲಿ ವಿಶ್ವಕ್ಕೆ ವಿರುದ್ಧ ಟ್ರೆಂಡ್‌ ಸೃಷ್ಟಿ : ಮೋದಿಗೆ ಹೆಚ್ಚಿದೆ ಸಪೋರ್ಟ್

| Published : Mar 31 2024, 02:14 AM IST / Updated: Mar 31 2024, 04:08 AM IST

ಭಾರತದಲ್ಲಿ ವಿಶ್ವಕ್ಕೆ ವಿರುದ್ಧ ಟ್ರೆಂಡ್‌ ಸೃಷ್ಟಿ : ಮೋದಿಗೆ ಹೆಚ್ಚಿದೆ ಸಪೋರ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಜಾಗತಿಕ ಮಟ್ಟದಲ್ಲಿ ಸುಶಿಕ್ಷಿತ ಮತದಾರರು ತಮ್ಮ ತಮ್ಮ ದೇಶಗಳ ಜನಪ್ರಿಯ ನಾಯಕರನ್ನು ಮೆಚ್ಚದೇ ಇರುವ ಸಂಪ್ರದಾಯ ಇದ್ದರೂ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಷಯದಲ್ಲಿ ಇದು ಸಂಪೂರ್ಣ ವಿರುದ್ಧವಾಗಿದೆ.

ನವದೆಹಲಿ: ಜಾಗತಿಕ ಮಟ್ಟದಲ್ಲಿ ಸುಶಿಕ್ಷಿತ ಮತದಾರರು ತಮ್ಮ ತಮ್ಮ ದೇಶಗಳ ಜನಪ್ರಿಯ ನಾಯಕರನ್ನು ಮೆಚ್ಚದೇ ಇರುವ ಸಂಪ್ರದಾಯ ಇದ್ದರೂ, ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಷಯದಲ್ಲಿ ಇದು ಸಂಪೂರ್ಣ ವಿರುದ್ಧವಾಗಿದೆ. 

ಭಾರತದಲ್ಲಿ ಸುಶಿಕ್ಷಿತ ಮತದಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ಬ್ರಿಟನ್‌ ಮೂಲದ ‘ದ ಎಕನಾಮಿಸ್ಟ್‌’ ಲೇಖನವೊಂದನ್ನು ಪ್ರಕಟಿಸಿದೆ.ಅಲ್ಲದೆ ಶಿಕ್ಷಿತ ಮತದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲು ಯಾವುದೇ ಅಡ್ಡಿ ಇಲ್ಲ ಎಂದೂ ಲೇಖನದಲ್ಲಿ ಅಭಿಪ್ರಾಯಪಡಲಾಗಿದೆ. ‘ವೈ ಇಂಡಿಯಾಸ್‌ ಎಲೈಟ್ಸ್‌ ಬ್ಯಾಕ್‌ ನರೇಂದ್ರ ಮೋದಿ’ ಎಂಬ ತಲೆಬರಹದ ಲೇಖನದಲ್ಲಿ ಮೋದಿ ಕುರಿತು ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಇದೇ ವೇಳೆ ಜನರೇಕೆ ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ? ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಏನೇನು ಆಗಬೇಕು? ಮೋದಿಯನ್ನು ತಕ್ಷಣಕ್ಕೆ ಅಧಿಕಾರದಿಂದ ಇಳಿಸಲು ಸಾಧ್ಯವೇ? ಎಂಬ ವಿಷಯಗಳ ಬಗ್ಗೆಯೂ ಲೇಖನ ಬೆಳಕು ಚೆಲ್ಲಿದೆ.ವಿರುದ್ಧ ಟ್ರೆಂಡ್‌:ಜಾಗತಿಕವಾಗಿ ಹಲವು ನಾಯಕರ ಜನಪ್ರಿಯತೆ ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಮುಂದಿನ ಚುನಾವಣೆಗಳಲ್ಲಿ ಕಡಿಮೆಯಾಗುತ್ತದೆ ಎಂದು ಹಲವು ಸಂಶೋಧನಾ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಪ್ರಧಾನಿ ಮೋದಿಯ ಜನಪ್ರಿಯತೆಗೆ ಯಾವುದೇ ಕುತ್ತು ಬಂದಿಲ್ಲ ಎಂದು ಪತ್ರಿಕೆಯ ವರದಿ ತಿಳಿಸಿದೆ.

 ನಿಸ್ವಾರ್ಥ ರಾಜಕಾರಣ ಕಾರಣ:  ಪ್ರಧಾನಿ ಮೋದಿ ನಿಸ್ವಾರ್ಥ ರಾಜಕಾರಣ ಮಾಡುವ ಹಿನ್ನೆಲೆಯಲ್ಲಿ ಅವರನ್ನು ಹಲವು ಜನ ಅಭಿಮಾನದಿಂದ ಕಾಣುತ್ತಾರೆ. ಆದಕ್ಕೆ ಪ್ರಮುಖವಾಗಿ ಭಾರತದ ಆರ್ಥಿಕತೆ ಏರುಗತಿಯಲ್ಲಿ ಸ್ಥಿರವಾಗಿರುವುದು ಮೂಲ ಕಾರಣವಾಗಿದೆ ಎಂದು ವರದಿ ಹೇಳಿದೆ.

ಸುಶಿಕ್ಷಿತ ಬೆಂಬಲ:  ಬಹುತೇಕ ದೇಶಗಳಲ್ಲಿ, ಉದಾಹರಣೆಗೆ ಟ್ರಂಪ್‌ ವಿಷಯದಲ್ಲಿ ಅಥವಾ ಬ್ರಿಟನ್‌ ಬ್ರೆಕ್ಸಿಟ್‌ ನೀತಿ ವಿಷಯಗಳಿಗೆ ಬಂದಾಗ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣ ಪಡೆದವರು ಜನಪ್ರಿಯ ನಾಯಕರ ನೀತಿಗೆ ವಿರುದ್ಧವಾದ ಅಭಿಪ್ರಾಯ ಹೊಂದಿದ್ದರು. ಆದರೆ ಭಾರತದಲ್ಲಿ ಹಾಗಲ್ಲ. ಅದನ್ನು ಬೇಕಾದರೆ ನೀವು ಮೋದಿ ವಿರೋಧಾಭಾಸ ಎನ್ನಿ. ಈ ವಿಷಯವೇ ಮೋದಿ ಅವರೇಕೆ ಉಳಿದ ಪ್ರಮುಖ ಪ್ರಜಾಪ್ರಭುತ್ವ ದೇಶಗಳಿಗೆ ಹೋಲಿಸಿದರೆ ಅಷ್ಟು ಜನಪ್ರಿಯ ವ್ಯಕ್ತಿ ಎಂಬುದನ್ನು ತೋರಿಸುತ್ತದೆ ಎಂದು ಲೇಖನ ಮೋದಿ ಅವರನ್ನು ಹೊಗಳಿದೆ.

ಕೆಲ ಸಮಯದ ಹಿಂದೆ ಬಿಡುಗಡೆಯಾದ ಗ್ಯಾಲಪ್‌ ಸಮೀಕ್ಷಾ ವರದಿ ಉಲ್ಲೇಖಿಸಿರುವ ವರದಿ, ‘ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವರಲ್ಲಿ ಶೇ.26ರಷ್ಟು ಜನರು ಮಾತ್ರವೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನು ಬೆಂಬಲಿಸಿದ್ದರು. 

ಟ್ರಂಪ್‌ ಬೆಂಬಲಿಗರಲ್ಲಿ ಶೆ.50ರಷ್ಟು ಜನರು ಸುಶಿಕ್ಷಿತ ವರ್ಗಕ್ಕೆ ಸೇರಿದವರಾಗಿರಲಿಲ್ಲ. ಆದರೆ ಮೋದಿ ಇದಕ್ಕೆ ಪೂರ್ಣವಾದ ಟ್ರೆಂಡ್‌ ಹೊಂದಿದ್ದರು.ಇನ್ನು ಪ್ಯೂ ರಿಸರ್ಚ್‌ ವರದಿ ಅನ್ವಯ ‘2017ರಲ್ಲಿ ಉನ್ನತ ಶಿಕ್ಷಣ ಪಡೆದವರ ಪೈಕಿ ಶೇ.80ರಷ್ಟು ಮಂದಿ ಹಾಗೂ ಪ್ರಾಥಮಿಕ ಶಿಕ್ಷಣ ಪಡೆದವರ ಪೈಕಿ ಶೇ.66ರಷ್ಟು ಜನ ಪ್ರಧಾನಿ ಮೋದಿಯ ಬಗ್ಗೆ ಅಭಿಮಾನ ಹೊಂದಿದ್ದರು. 2019ರ ಲೋಕಸಭಾ ಬಳಿಕ ಪ್ರಕಟವಾದ ಲೋಕನೀತಿ ಸಮೀಕ್ಷೆಯಲ್ಲಿ ಪದವಿ ಪಡೆದಿರುವ ವರ್ಗದ ಶೇ.42ರಷ್ಟು ಜನರು ಮೋದಿ ನೇತೃತ್ವದ ಬಿಜೆಪಿ ಬೆಂಬಲಿಸಿದ್ದಾಗಿ ಹೇಳಿದ್ದರು. ಈ ಪ್ರಮಾಣ ಪ್ರಾಥಮಿಕ ಶಿಕ್ಷಣ ಪಡೆದವರಲ್ಲಿ ಶೇ.35ರಷ್ಟಿತ್ತು’ ಎಂದು ಲೇಖನ ಹೇಳಿದೆ.

ಪ್ರಬಲ ಭಾರತ:  ಮೋದಿ ಆಡಳಿತದ ಅವಧಿಯಲ್ಲಿ ಭಾರತ ಆರ್ಥಿಕವಾಗಿ ಸದೃಢವಾಯಿತು ಮತ್ತು ಜಾಗತಿಕವಾಗಿಯೂ ದೇಶ ಹೆಚ್ಚು ಮನ್ನಣೆ ಪಡೆಯಿತು. ನೆರೆ ಹೊರೆಯಲ್ಲಿ ಚೀನಾ ಹಾಗೂ ಪೂರ್ವ ಏಷ್ಯಾದ ಹುಲಿಗಳು ಅನ್ನಿಸಿಕೊಂಡಿರುವ ದೇಶಗಳ ಇರುವಾಗ ಭಾರತಕ್ಕೆ ಇಂಥದ್ದೊಂದು ಶಕ್ತಿಶಾಲಿ ನಾಯಕನ ಅವಶ್ಯಕತೆ ಇತ್ತು ಎಂಬುದು ಬಹುತೇಕ ಅಭಿಮತ ಎಂದು ಲೇಖನ ಹೇಳಿದೆ.

 ಮೋದಿಗೆ ಅಪಾಯ ಹೇಗೆ?:  ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ಬಂಧಿಸಿದಂಥ ಪ್ರಕರಣಗಳು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರು ಸುಶಿಕ್ಷಿತ ಜನರ ಬೆಂಬಲ ಕಳೆದುಕೊಳ್ಳಲು ಕಾರಣವಾಗಬಹುದು. ಏಕೆಂದರೆ ಸುಶಿಕ್ಷಿತ ಮತದಾರರು ಈಗಲೂ ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಸೂಕ್ತ ಪರ್ಯಾಯ ನಾಯಕತ್ವ ಲಭ್ಯ ಆಗುವವರೆಗೂ ಮೋದಿ ಅವರನ್ನೇ ಬೆಂಬಲಿಸುವ ನಿಲುವನ್ನು ಅವರು ಹೊಂದಿದ್ದಾರೆ ಎಂದು ಲೇಖನ ಹೇಳಿದೆ. 

ರಾಹುಲ್‌ ಬಗ್ಗೆ ನಂಬಿಕೆ ಇಲ್ಲ:ಬಹುತೇಕ ಸುಶಿಕ್ಷಿತರು ಕಾಂಗ್ರೆಸ್‌ ಮತ್ತು ಅದರ ನಾಯಕ ರಾಹುಲ್‌ ಗಾಂಧಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಹುಲ್‌ ಗಾಂಧಿ ವಂಶಪಾರಂಪರ್ಯ ರಾಜಕಾರಣದ ವ್ಯಕ್ತಿಯಾಗಿ ಕಾಣುತ್ತಾರೆ ಮತ್ತು ಅವರು ಜನರೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ ಎಂಬುದು ಸುಶಿಕ್ಷಿತರ ಅಭಿಮತ ಎಂದು ಲೇಖನ ಹೇಳಿದೆ.

ಸದ್ಯಕ್ಕೆ ಮೋದಿಗೆ ಅಪಾಯವಿಲ್ಲ:  ಸದೃಢ ವಿರೋಧಪಕ್ಷವೊಂದೇ ಸುಶಿಕ್ಷಿತರು ಮೋದಿಯಿಂದ ದೂರವಾಗಲು ಕಾರಣವಾಗಬಹುದು. ಆದರೆ ಸದ್ಯಕ್ಕಂತೂ ಎಲ್ಲಿಯೂ ಆ ವಿಷಯ ಗೋಚರವಾಗುತ್ತಿಲ್ಲ ಎಂದು ಲೇಖನ ಹೇಳಿದೆ.