1ನೇ ತರಗತಿಗೆ 6 ವರ್ಷ ಕಡ್ಡಾಯ ಮಾಡಿ: ಕೇಂದ್ರ ಸೂಚನೆ

| Published : Feb 27 2024, 01:34 AM IST / Updated: Feb 27 2024, 09:38 AM IST

ಸಾರಾಂಶ

ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳುವಾಗ 6 ವರ್ಷ ಕಡ್ಡಾಯವಾಗಿರಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯದಿಂದ ಪುನಃ ರಾಜ್ಯಗಳಿಗೆ ನೆನಪೋಲೆ ಬಂದಿದೆ.

ನವದೆಹಲಿ: ಮುಂಬರುವ (2024-25) ಶೈಕ್ಷಣಿಕ ವರ್ಷಕ್ಕೆ ದಾಖಲಾತಿಗಳು ಆರಂಭವಾಗುತ್ತಿರುವ ನಡುವೆಯೇ 1ನೇ ತರಗತಿಗೆ ದಾಖಲು ಮಾಡಿಕೊಳ್ಳಲು ವಿದ್ಯಾರ್ಥಿಗೆ 6 ವರ್ಷ ವಯಸ್ಸಾಗಿರಬೇಕೆಂದು ಕಡ್ಡಾಯ ನಿಯಮ ಜಾರಿಗೆ ತರಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. 

ಈ ಕುರಿತು ನಿರ್ದೇಶಿಸಿರುವ ಪತ್ರದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರಲ್ಲಿ ಸೂಚಿಸಿರುವಂತೆ 1ನೇ ತರಗತಿಗೆ ಸೇರುವ ಮಕ್ಕಳಿಗೆ 6 ವರ್ಷ ವಯಸ್ಸಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಇದನ್ನು 2024-25ನೇ ಸಾಲಿನಿಂದಲೇ ಜಾರಿ ಮಾಡಲು ನಿರ್ದೇಶಿಸಲಾಗಿದೆ’ ಎಂದು ಪತ್ರ ತಿಳಿಸಿದೆ.

ಈವರೆಗೂ 5 ವರ್ಷ 10 ತಿಂಗಳು ತುಂಬಿದವರನ್ನು 1ನೇ ಕ್ಲಾಸಿಗೆ ಅಡ್ಮಿಷನ್‌ ಮಾಡಿಕೊಳ್ಳಲಾಗುತ್ತಿತ್ತು. ಆದರೆ 2 ವರ್ಷ ಹಿಂದೆ ಕೇಂದ್ರ ಸರ್ಕಾರ ನಿಯಮಾವಳಿ ಬದಲಿಸಿ 6 ವರ್ಷ ತುಂಬಿದವರನ್ನು 1ನೇ ತರಗತಿಗೆ ದಾಖಲು ಮಾಡಿಕೊಳ್ಳಬೇಕು. ಇದು 2024-25ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿತ್ತು.