ಸಾರಾಂಶ
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ಆರ್ಭಟದಿಂದಾಗಿ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮತ್ತೊಂದೆಡೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಇಲ್ಲಿನ ಜೈತಾಪುರದ ಹರಿನಗರದ ಮೋಹನ್ ಬಾಬಾ ಮಂದಿರ ಬಳಿ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ದೆಹಲಿಯಲ್ಲಿ ಶುಕ್ರವಾರ ರಾತ್ರಿಯಿಂದ ವರುಣ ಆರ್ಭಟಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ಜನಜೀವ ಅಸ್ತವ್ಯಸ್ತಗೊಂಡಿದೆ. ಯಮುನಾ ನದಿ ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮತ್ತೊಂದೆಡೆ ಪ್ರಮುಖ ನಗರಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ರಸ್ತೆಯಲ್ಲಿಯೇ ಪರದಾಡುವಂತಾಯಿತು. ಮಳೆಯಿಂದ ಉಂಟಾದ ಹವಾಮಾನ ವೈಪರೀತ್ಯ 100ಕ್ಕೂ ಹೆಚ್ಚು ವಿಮಾನ ಸಂಚಾರದ ಮೇಲೆಯೂ ಪರಿಣಾಮ ಬೀರಿದೆ.