ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಎನ್‌ಕೌಂಟರ್ : 8 ನಕ್ಸಲರ ಹತ್ಯೆ

| N/A | Published : Apr 22 2025, 01:54 AM IST / Updated: Apr 22 2025, 05:37 AM IST

ಸಾರಾಂಶ

ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 8 ನಕ್ಸಲರು ಹತರಾಗಿದ್ದಾರೆ. ಈ ಮೂಲಕ ಈ ವರ್ಷ ಛತ್ತೀಸಗಢದಲ್ಲಿ 140 ನಕ್ಸಲರ ಹತ್ಯೆಯಾದಂತಾಗಿದೆ.

ರಾಂಚಿ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ 8 ನಕ್ಸಲರು ಹತರಾಗಿದ್ದಾರೆ. ಈ ಮೂಲಕ ಈ ವರ್ಷ ಛತ್ತೀಸಗಢದಲ್ಲಿ 140 ನಕ್ಸಲರ ಹತ್ಯೆಯಾದಂತಾಗಿದೆ.

ಜಿಲ್ಲೆಯ ಲಾಲ್ಪಾನಿಯಾ ಪ್ರದೇಶದ ಲುಗು ಬೆಟ್ಟ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 5.30ರ ಸುಮಾರಿಗೆ ಗುಂಡಿನ ಚಕಮಕಿ ಆರಂಭವಾಗಿದ್ದು, ಬಳಿಕ 8 ನಕ್ಸಲರನ್ನು ಸಾಯಿಸಲಾಗಿದೆ. ಹತ 8 ನಕ್ಸಲರ ಪೈಕಿ ಒಬ್ಬನ ಪತ್ತೆಗೆ 1 ಕೋಟಿ ರು. ಬಹುಮಾನ ಘೋಷಿಸಲಾಗಿತ್ತು. ನಕ್ಸಲರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಯಾವುದೇ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲಿಸಂ ನಿರ್ಮೂಲನೆ ಗುರಿ- ಶಾ:ಘಟನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ನಕ್ಸಲಿಸಂ ನಿರ್ಮೂಲನೆ ಮಾಡುವ ನಮ್ಮ ಕಾರ್ಯ ನಿರಂತರವಾಗಿ ಮುಂದುವರೆದಿದೆ. ನಕ್ಸಲಿಸಂ ಅನ್ನು ಬೇರುಸಹಿತ ಕಿತ್ತೊಗೆಯುವಲ್ಲಿ ಭದ್ರತಾ ಪಡೆಗಳು ಮತ್ತೊಂದು ಮಹತ್ವದ ಯಶಸ್ಸನ್ನು ಸಾಧಿಸಿವೆ’ ಎಂದಿದ್ದಾರೆ.

ನಕ್ಸಲರ ಸ್ಫೋಟಕಕ್ಕೆ ಸಿಎಎಫ್ ಸಿಬ್ಬಂದಿ ಬಲಿ:

ಮತ್ತೊಂದು ಘಟನೆಯಲ್ಲಿ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಸೋಮವಾರ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್)ಯ ಒಬ್ಬ ಯೋಧ ಸಾವನ್ನಪ್ಪಿದ್ದಾರೆ.

ರಸ್ತೆ ನಿರ್ಮಾಣ ಕಾರ್ಯಕ್ಕೆ ಭದ್ರತೆ ಒದಗಿಸಲು ಗಸ್ತು ತಿರುಗುತ್ತಿದ್ದ ವೇಳೆ ಟೊಯ್ನಾರ್ ಮತ್ತು ಫರ್ಸೆಗಢ ಗ್ರಾಮಗಳ ನಡುವೆ ಸ್ಫೋಟ ಸಂಭವಿಸಿದೆ. ಸಿಎಎಫ್‌ನ 19ನೇ ಬೆಟಾಲಿಯನ್‌ನ ಮನೋಜ್ ಪೂಜಾರಿ (26) ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.