ಸಾರಾಂಶ
ಮುಂಬೈ: ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆಯ ತಮ್ಮ ಬಣ ಸ್ಪರ್ಧಿಸಿದ ಬಹುತೇಕ ಕ್ಷೇತ್ರಗಳಲ್ಲಿ ಜಯ ಗಳಿಸುವ ಮೂಲಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಮ್ಮದೇ ಒರಿಜಿನಲ್ ಶಿವಸೇನೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾಯುತಿ ಮೈತ್ರಿಕೂಟದಲ್ಲಿ ಶಿಂಧೆ ಬಣದ ಶಿವಸೇನೆ ಸ್ಪರ್ಧಿಸಿದ್ದ 81 ಕ್ಷೇತ್ರಗಳಲ್ಲಿ ಸುಮಾರು ಶೇ.70ರಷ್ಟು ಕ್ಷೇತ್ರದಲ್ಲಿ ಗೆದ್ದಿದೆ. ಮಹಾವಿಕಾಸ ಅಘಾಡಿ ಮೈತ್ರಿಕೂಟದಲ್ಲಿ ಉದ್ಧವ್ ಬಣದ ಶಿವಸೇನೆ ಸ್ಪರ್ಧಿಸಿದ್ದ 95 ಕ್ಷೇತ್ರಗಳಲ್ಲಿ ಸುಮಾರು ಶೇ.24ರಷ್ಟು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ.
2022ರಲ್ಲಿ ಶಿವಸೇನೆಯನ್ನು ಒಡೆದು, ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದ ಮಹಾವಿಕಾಸ ಅಘಾಡಿ ಸರ್ಕಾರವನ್ನು ಬೀಳಿಸಿ, ಬಿಜೆಪಿ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿ ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದರು. ಆಗ ತಮ್ಮದೇ ಮೂಲ ಶಿವಸೇನೆ ಎಂದು ಉದ್ಧವ್ ಬಣ ಕೋರ್ಟ್‌ಗೆ ಹೋಗಿತ್ತು. ಆದರೆ ವಿಧಾನಸಭೆಯ ಸ್ಪೀಕರ್ ಅವರು ಶಿಂಧೆ ಬಣವೇ ಮೂಲ ಶಿವಸೇನೆಯೆಂದು ರೂಲಿಂಗ್ ನೀಡಿದ್ದರು. ಚುನಾವಣಾ ಪ್ರಚಾರದ ವೇಳೆ ಉದ್ಧವ್ ಬಣವು ಶಿಂಧೆಯನ್ನು ಪಕ್ಷ ಒಡೆದ ‘ವಂಚಕ’ ಎಂದು ಜರೆದಿತ್ತು.