ಸಾರಾಂಶ
ನವದೆಹಲಿ: ಬಹುನಿರೀಕ್ಷಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಚುನಾವಣಾ ದಿನಾಂಕ ಪ್ರಕಟಿಸಿದೆ.
ಕಣಿವೆ ರಾಜ್ಯದಲ್ಲಿ ಸೆ.18ರಿಂದ ಮೂರು ಹಂತದಲ್ಲಿ ಮತ್ತು ಹರ್ಯಾಣದಲ್ಲಿ ಅ.1ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಅ.4ಕ್ಕೆ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.ಮಹಾರಾಷ್ಟ್ರದಲ್ಲಿ ಕಳೆದ 15 ವರ್ಷಗಳಿಂದ ಹರ್ಯಾಣದ ಜೊತೆಗೆ ಚುನಾವಣೆ ನಡೆಯುತ್ತಿತ್ತಾದರೂ, ಈ ವರ್ಷ ಅಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗದೆ ಇರುವ ಕಾರಣ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತಾ ಪಡೆಗಳ ನಿಯೋಜನೆ ಅಗತ್ಯವಿರುವ ಕಾರಣ ಅಲ್ಲಿಗೆ ಚುನಾವಣೆ ಘೋಷಿಸಿಲ್ಲ.
ಕಾಶ್ಮೀರ:
ಜಮ್ಮು ಮತ್ತು ಕಾಶ್ಮೀರದ 90 ಸ್ಥಾನ ಬಲದ ವಿಧಾನಸಭೆಗೆ ಸೆ.18 (24 ಸ್ಥಾನ), ಸೆ.25 (26 ಸ್ಥಾನ) ಮತ್ತು ಅ.1ರಂದು (40ಸ್ಥಾನ) ನಡೆಯಲಿದೆ. ಚುನಾವಣೆಗೆ ಆ.20, ಆ.29, ಸೆ.5ರಂದು ಅಧಿಸೂಚನೆ ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಆ.27, ಸೆ.5, ಸೆ.12 ಕಡೆಯ ದಿನ. ನಾಮಪತ್ರ ಹಿಂಪಡೆಯಲು ಆ.30, ಸೆ.9, ಸೆ.17 ಕಡೆಯ ದಿನ.
2014ರಲ್ಲಿ ಕಡೆಯ ಬಾರಿ ವಿಧಾನಸಭಾ ಚುನಾವಣೆ ನಡೆದಾಗ 5 ಹಂತದಲ್ಲಿ ನಡೆಸಲಾಗಿತ್ತು. ಅಂದರೆ 10 ವರ್ಷಗಳ ಬಳಿಕ ಅಲ್ಲಿ ಚುನಾವಣೆ ಘೋಷಣೆಯಾಗಿದೆ.ಆದರೆ 2019ರಲ್ಲಿ ಕೇಂದ್ರ ಸರ್ಕಾರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಪಡಿಸಿತ್ತು. ಜೊತೆಗೆ ಲಡಾಖ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕ ಮಾಡಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರವನ್ನೂ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿತ್ತು. ಬಳಿಕ ಅಲ್ಲಿ ಚುನಾವಣೆ ನಡೆದಿರಲಿಲ್ಲ. ಇದೀಗ 5 ವರ್ಷಗಳ ಬಳಿಕ ಮತ್ತೆ ರಾಜ್ಯ ಚುನಾವಣೆಗೆ ಸಜ್ಜಾಗಿದೆ.
ಮತದಾರರು:ಜಮ್ಮು ಮತ್ತು ಕಾಶ್ಮೀರದಲ್ಲಿ 87.07 ಲಕ್ಷ ಮತದಾರರಿದ್ದು, ಈ ಪೈಕಿ 42.6 ಲಕ್ಷ ಮಹಿಳೆಯರು. 3.71 ಲಕ್ಷ ಜನರು ಮೊದಲ ಬಾರಿ ಮತದಾನದ ಹಕ್ಕು ಪಡೆದಿದ್ದಾರೆ. 90 ಕ್ಷೇತ್ರಗಳ ಪೈಕಿ 74 ಸಾಮಾನ್ಯ, 7 ಎಸ್‌ಸಿ, 9 ಎಸ್ಟಿ ಮೀಸಲು ಕ್ಷೇತ್ರಗಳು.
ಹರ್ಯಾಣ: ಹರ್ಯಾಣದ 90 ಸ್ಥಾನಬಲದ ವಿಧಾನಸಭೆಗೆ ಅ.1ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಸೆ.5ರಂದು ಅಧಿಸೂಚನೆ ಪ್ರಕಟ. ನಾಮಪತ್ರ ಸಲ್ಲಿಕೆಗೆ ಸೆ.12 ಕಡೆಯ ದಿನ. ಸೆ.13ಕ್ಕೆ ನಾಮಪತ್ರ ಪರಿಶೀಲನೆ. ನಾಮಪತ್ರ ಹಿಂಪಡೆಯಲು ಸೆ.16 ಕಡೆಯ ದಿನ.
2019ರಲ್ಲಿ ಹರ್ಯಾಣದಲ್ಲಿ ಏನಾಗಿತ್ತು? 2019ರ ವಿಧಾನಸಭಾ ಚುನಾವಣೆಯಲ್ಲಿ ಜೆಜೆಪಿ 40 ಮತ್ತು ದುಷ್ಯಂತ್ ಸಿಂಗ್ ಚೌತಾಲ 10 ಸ್ಥಾನ ಗೆದ್ದು ಮೈತ್ರಿ ಸರ್ಕಾರ ರಚನೆಯಾಗಿತ್ತು. ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ದುಷ್ಯಂತ್ ಡಿಸಿಎಮ ಆಗಿದ್ದರು. ಕಾಂಗ್ರೆಸ್ 31, ಪಕ್ಷೇತರರು 7 ಸ್ಥಾನ ಗೆದ್ದಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಬಿಜೆಪಿ- ಜೆಎಲ್‌ಎಲ್ ಮೈತ್ರಿ ಮುರಿದುಬಿದ್ದಿತ್ತು.
2014ರಲ್ಲಿ ಕಾಶ್ಮೀರದಲ್ಲಿ ಏನಾಗಿತ್ತು?
2014ರಲ್ಲಿ ರಾಜ್ಯದ 87 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ತೀವ್ರವಾದಿ ಪಕ್ಷಗಳು ಚುನಾವಣೆ ಬಹಿಷ್ಕರಿಸಿದ್ದರೂ ಶೇ.65ರಷ್ಟು ಮತ ಚಲಾವಣೆಯಾಗಿತ್ತು. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ಮೈತ್ರಿ ಸರ್ಕಾರ ರಚಿಸಿದ್ದವು. ಓಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದರು. ಆದರೆ ಕೆಲ ಕಾಲದಲ್ಲೇ ಮೈತ್ರಿಮುರಿದು ಓಮರ್ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿ ಬೆಂಬಲದೊಂದಿಗೆ ಪಿಡಿಪಿ ಸರ್ಕಾರ ರಚಿಸಿತು. ಮೆಹಬೂಬಾ ಸಿಎಂ ಆದರು. 2018ರಲ್ಲಿ ಬಿಜೆಪಿ ಬೆಂಬಲ ಹಿಂಪಡೆಯಿತು. ಬಳಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸಲಾಗಿತ್ತು.