ಮೆಡಿಕಲ್ ಕಾಲೇಜಿನ ಮೇಲೆ ದಾಳಿ ರಾಜ್ಯ ಸರ್ಕಾರದ ವೈಫಲ್ಯ: ಕೋಲ್ಕತಾ ಹೈಕೋರ್ಟ್‌ ಕಿಡಿ

| Published : Aug 17 2024, 12:46 AM IST / Updated: Aug 17 2024, 05:09 AM IST

ಸಾರಾಂಶ

ವೈದ್ಯೆ ಮೇಲೆ ಅತ್ಯಾಚಾರ ನಡೆದ ಪಶ್ಚಿಮ ಬಂಗಾಳದ ಆರ್ಜಿ ಕೆ ಆರ್ ಮೆಡಿಕಲ್ ಕಾಲೇಜಿನ ಮೇಲೆ ಗುರುವಾರ ನಡೆದ ದಾಳಿ ರಾಜ್ಯ ಸರ್ಕಾರದ ಆಡಳಿತ ಯಂತ್ರದ ವೈಫಲ್ಯ ಎಂದು ಕೋಲ್ಕತಾ ಹೈಕೋರ್ಟ್‌ ಕಿಡಿಕಾರಿದೆ.

ಕೋಲ್ಕತಾ: ವೈದ್ಯೆ ಮೇಲೆ ಅತ್ಯಾಚಾರ ನಡೆದ ಪಶ್ಚಿಮ ಬಂಗಾಳದ ಆರ್ಜಿ ಕೆ ಆರ್ ಮೆಡಿಕಲ್ ಕಾಲೇಜಿನ ಮೇಲೆ ಗುರುವಾರ ನಡೆದ ದಾಳಿ ರಾಜ್ಯ ಸರ್ಕಾರದ ಆಡಳಿತ ಯಂತ್ರದ ವೈಫಲ್ಯ ಎಂದು ಕೋಲ್ಕತಾ ಹೈಕೋರ್ಟ್‌ ಕಿಡಿಕಾರಿದೆ.

ಗುರುವಾರ ಬೆಳಿಗ್ಗೆ ಆಸ್ಪತ್ರೆ ಬಳಿ 7000 ಜನರ ಗುಂಪು ನೆರೆದಿತ್ತು ಎಂಬ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಯಾವುದೇ ಮಾಹಿತಿ ಇಲ್ಲವೆಂದಾದಲ್ಲಿ ಅದನ್ನು ನಂಬುವುದು ಕಷ್ಟ. ಪೊಲೀಸರಿಗೆ ತಮ್ಮನ್ನೇ ತಾವು ರಕ್ಷಿಸಿಕೊಳ್ಳಲಾಗಲಿಲ್ಲ ಎಂದಾದಲ್ಲಿ ನೀವು ವೈದ್ಯರಿಗೆ ಹೇಗೆ ರಕ್ಷಣೆ ನೀಡುತ್ತೀರಿ? ವೈದ್ಯರಿಗೆ ಸೂಕ್ತ ರಕ್ಷಣೆ ನೀಡದೇ ಹೋದಲ್ಲಿ ಅವರು ನಿರ್ಭಯವಾಗಿ ಕಾರ್ಯನಿರ್ವಹಿಸುವುದು ಹೇಗೆ ಎಂದು ಪ್ರಶ್ನಿಸಿದ ಹೈಕೋರ್ಟ್, ಈ ಕುರಿತು ಸತ್ಯಾಂಶಗಳನ್ನು ಒಳಗೊಂಡ ವರದಿ ಸಲ್ಲಿಸುವಂತೆ ಪೊಲೀಸರ ಮತ್ತು ಆಸ್ಪತ್ರೆಗೆ ಸೂಚಿಸಿ ವಿಚಾರಣೆಯನ್ನು 21ಕ್ಕೆ ಮುಂದೂಡಿಕೆ ಮಾಡಿದೆ.ವೈದ್ಯೆ ಮೇಲಿನ ರೇಪ್ ಖಂಡಿಸಿ, ವೈದ್ಯರು ಗುರುವಾರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಸುಮಾರು 40 ಮಂದಿ ಉದ್ರಿಕ್ತರ ಗುಂಪು ಆಸ್ಪತ್ರೆಗೆ ನುಗ್ಗಿ , ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿನ ಕೆಲ ವಸ್ತುಗಳನ್ನು ಧ್ವಂಸ ಮಾಡಿದ್ದರು.

ರಸ್ತೆಗಿಳಿದು ಖುದ್ದು ಸಿಎಂ ಮಮತಾ ಪ್ರತಿಭಟನೆ!

ಕೋಲ್ಕತಾ: ವೈದ್ಯ ವಿದ್ಯಾರ್ಥಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ವತಃ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿದ್ದಾರೆ.ಶುಕ್ರವಾರ ಕೋಲ್ಕತಾದ ಮೌಲಾಲಿಯಿಂದ ದೌರಾಲಿ ಕ್ರಾಸಿಂಗ್‌ ವರೆಗೆ ಟಿಎಂಸಿ ಕಾರ್ಯಕರ್ತರೊಂದಿಗೆ ಮಮತಾ ಪ್ರತಿಭಟನೆ ನಡೆಸಿದರು. ಈ ವೇಳೆ ಸಿಪಿಎಂ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿ, ಆರೋಪಿಗಳನ್ನು ಎರಡೂ ಪಕ್ಷಗಳು ಮರೆ ಮಾಚುತ್ತಿದೆ ಎಂದು ಆರೋಪಿಸಿದರು. ಜೊತೆಗೆ ಕೋಲ್ಕತಾ ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಕ್ಕೆ ಅವರನ್ನು ಅಭಿನಂದಿಸಿದ ಅವರು, ಭಾನುವಾರದ ಒಳಗಾಗಿ ತನಿಖೆಯನ್ನು ಪೂರ್ಣಗೊಳಿಸಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಕೋಲ್ಕತ್ತಾ ಕೇಸಿನ ಬೆನ್ನಲ್ಲೇ ಕೊಯಮತ್ತೂರು ಹೌಸ್‌ ಸರ್ಜನ್‌ಗೆ ಲೈಂಗಿಕ ಕಿರುಕುಳ

ಕೊಯಮತ್ತೂರು: ಕೋಲ್ಕತ್ತಾ ವೈದ್ಯೆ ರೇಪ್‌ ಪ್ರಕರಣದ ಬೆನ್ನಲ್ಲೇ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳಾ ಹೌಸ್‌ ಸರ್ಜನ್‌ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು 150ಕ್ಕೂ ಹೆಚ್ಚು ಹೌಸ್‌ ಸರ್ಜನ್ನರು ಕಾಲೇಜು ಡೀನ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಬುಧವಾರ ರಾತ್ರಿ ಮಹಿಳಾ ಹೌಸ್‌ ಸರ್ಜನ್‌ ತನ್ನ ಸ್ಕೂಟರ್‌ ತೆಗೆದುಕೊಳ್ಳಲು ಪಾರ್ಕಿಂಗ್‌ ಸ್ಥಳಕ್ಕೆ ಹೋಗಿದ್ದು, ಆ ಸಂದರ್ಭದಲ್ಲಿ ಅಪರಿಚಿತ ವಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕಾಲೇಜಿನ ಡೀನ್ ಡಾ. ನಿರ್ಮಲಾ ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಂಸೆ ನಡೆದ 6 ಗಂಟೆಯೊಳಗೆ ಸಾಂಸ್ಥಿಕ ಎಫ್‌ಐಆರ್‌ಗೆ ಆದೇಶ

ನವದೆಹಲಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಹಿಂಸಾಚಾರದ ಘಟನೆ ನಡೆದ ಆರು ಗಂಟೆಯೊಳಗೆ ಸಾಂಸ್ಥಿಕ ಎಫ್‌ಐಆರ್‌ ದಾಖಲಿಸುವಂತೆ ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಕೇಂದ್ರ ಸರ್ಕಾರ ಸೂಚಿಸಿದೆ.ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲಿ ಈ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಜ್ಞಾಪಕ ಪತ್ರವನ್ನು ಹೊರಡಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯದಲ್ಲಿರುವ ಯಾವುದೇ ಸಿಬ್ಬಂದಿ ವಿರುದ್ಧ ಹಿಂಸಾಚಾರ ನಡೆದರೆ, ಹಿಂಸಾಚಾರ ನಡೆದ ಆರು ಗಂಟೆಯೊಳಗೆ ಸಾಂಸ್ಥಿಕ ಎಫ್‌ಐಆರ್‌ಅನ್ನು ದಾಖಲಿಸುವ ಜವಾಬ್ದಾರಿಯನ್ನು ಆಸ್ಪತ್ರೆಯ ಮುಖ್ಯಸ್ಥರು ಹೊಂದಿರುತ್ತಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.