ಸಾರಾಂಶ
ವಿಶ್ವಸಂಸ್ಥೆಯಲ್ಲಿರುವ ಭದ್ರತಾ ಮಂಡಳಿಗೆ ಜಗತ್ತಿನಲ್ಲಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವನ್ನು ಖಾಯಂ ಸದಸ್ಯ ಮಾಡಿಕೊಳ್ಳದಿರುವುದು ಅಸಂಬದ್ಧ ನಡೆಯಾಗಿದೆ ಎಂದು ಎಕ್ಸ್ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ತಿಳಿಸಿದ್ದಾರೆ.
ನ್ಯೂಯಾರ್ಕ್: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತ ದೇಶಕ್ಕೆ ಕಾಯಂ ಸ್ಥಾನ ನೀಡದಿರುವುದು ಅಸಂಬದ್ಧ ಎಂದು ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಯಾವುದೇ ಆಫ್ರಿಕನ್ ದೇಶಗಳು ಸ್ಥಾನ ಪಡೆದುಕೊಳ್ಳದಿರುವುದು ಕಳವಳಕಾರಿಯಾಗಿದೆ ಎಂಬ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಸ್ಕ್, ‘ಯಾರ ಬಳಿ ಹೆಚ್ಚು ಅಧಿಕಾರವಿದೆಯೋ ಅವರು ಅದನ್ನು ಇತರ ದೇಶಗಳಿಗೆ ಬಿಟ್ಟುಕೊಡುತ್ತಿಲ್ಲ.ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ಸಹ ಭಾರತ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಕಾಯಂ ಸ್ಥಾನ ಪಡೆದುಕೊಳ್ಳದಿರುವುದು ಅಸಂಬದ್ಧ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳನ್ನು ಪುನರ್‌ಪರಿಶೀಲನೆ ನಡೆಬೇಕಿದೆ’ ಎಂದು ಹೇಳಿದ್ದಾರೆ.
ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ಕಾಯಂ ಸದಸ್ಯ ರಾಷ್ಟ್ರಗಳಾಗಿವೆ.