ಎಮರ್ಜೆನ್ಸಿ ಸಿನಿಮಾಗೆ ಯುಎ ಸರ್ಟಿಫಿಕೇಟ್‌

| Published : Sep 09 2024, 01:31 AM IST

ಸಾರಾಂಶ

ವಿವಾದಗಳಿಂದ ಸುದ್ದಿಯಾಗಿದ್ದ ಹಾಗೂ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ‘ಎಮರ್ಜೆನ್ಸಿ’ಸಿನಿಮಾಗೆ ಸೆನ್ಸಾರ್‌ ಮಂಡಳಿ ಕೆಲವು ಷರತ್ತುಗಳೊಂದಿಗೆ ಯುಎ ಪ್ರಮಾಣ ಪತ್ರ ನೀಡಿದೆ.

ಮುಂಬೈ: ವಿವಾದಗಳಿಂದ ಸುದ್ದಿಯಾಗಿದ್ದ ಹಾಗೂ ನಟಿ, ಬಿಜೆಪಿ ಸಂಸದೆ ಕಂಗನಾ ರಾಣಾವತ್‌ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ‘ಎಮರ್ಜೆನ್ಸಿ’ಸಿನಿಮಾಗೆ ಸೆನ್ಸಾರ್‌ ಮಂಡಳಿ ಕೆಲವು ಷರತ್ತುಗಳೊಂದಿಗೆ ಯುಎ ಪ್ರಮಾಣ ಪತ್ರ ನೀಡಿದೆ.

ಸಿನಿಮಾದಲ್ಲಿನ ಕೆಲ ದೃಶ್ಯಗಳನ್ನು ತೆಗೆದುಹಾಕಲು ಮತ್ತು ಕೆಲವು ಐತಿಹಾಸಿಕ ಘಟನೆಗಳಿಗೆ ಡಿಸ್‌ಕ್ಲೇಮರ್‌ ಬರೆಯಲು ನಿರ್ದೇಶಕರಿಗೆ ಮಂಡಳಿ ತಾಕೀತು ಮಾಡಿದೆ.

ಈ ನಡುವೆ ಕೆಲ ಸಿಖ್‌ ಸಂಘಟನೆಗಳು ಸಿನಿಮಾವನ್ನು ವಿರೋಧಿಸಿ, ಸಿಖ್‌ ಅಂಗರಕ್ಷಕರು ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ಕಾರಣ ಚಿತ್ರದಲ್ಲಿ ಸಿಖ್ಖರನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂದು ದೂರಿದ್ದವು. ಹೀಗಾಗಿ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಅನುಮೋದನೆ ತಡೆ ಹಿಡಿದಿತ್ತು ಹಾಗೂ ಸೆ.6ರಂದು ಉದ್ದೇಶಿಸಿದ್ದ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿತ್ತು. ಇದೀಗ ಯುಎ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಬಾಕಿ ಉಳಿದಿದೆ.

ಇಂದಿರಾ ಹೇರಿದ್ದ ತುರ್ತುಸ್ಥಿತಿ ಕಥಾನಕದ ‘ಎಮರ್ಜೆನ್ಸಿ’ಯಲ್ಲಿ ಕಂಗನಾ ಜತೆ ಅನುಪಮ್ ಖೇರ್‌. ಶ್ರೇಯಸ್‌ ತಲ್ಪಾಡೆ ಸೇರಿದಂತೆ ಬಹು ತಾರಾಂಗಣ ಇದೆ.

ಯುಎ ಪ್ರಮಾಣಪತ್ರ ಎಂದರೆ ಈ ಸಿನಿಮಾವನ್ನು ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ನೋಡಬಹುದು ಎಂದರ್ಥ.