ಸಾರಾಂಶ
ಚೆನ್ನೈ: 50 ವರ್ಷಗಳ ಹಿಂದೆ ದೇಶದಲ್ಲಿ ಮೊದಲ ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದ ಮತ್ತು ದೇಶದಲ್ಲೇ ಮೊದಲ ಶ್ವಾಸಕೋಶ ಕಸಿ ನಡೆಸಿದ್ದ ಖ್ಯಾತ ಹೃದಯ ತಜ್ಞ ಡಾ. ಕೆ.ಎಂ. ಚೆರಿಯನ್ ಭಾನುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.
ಹೃದಯರೋಗ ಚಿಕಿತ್ಸೆಯಲ್ಲಿ ಅವರನ್ನು ಭಾರತದಲ್ಲೇ ಅವರನ್ನು ಪಿತಾಮಹ ಎಂದು ಬಣ್ಣಿಸಲಾಗುತ್ತಿತ್ತು. ಡಾ. ಚೆರಿಯನ್ ಮಣಿಪಾಲದಲ್ಲಿ ಶಿಕ್ಷಣ ಪೂರೈಸಿದ್ದು, ಚೆನ್ನೈನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಅವರಿಗೆ 1991ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಚೆರಿಯನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸನಾತನ ಭಾರತದ ರಾಷ್ಟ್ರೀಯ ಧರ್ಮ: ಯುಪಿ ಸಿಎಂ ಯೋಗಿ
ನವದೆಹಲಿ: ‘ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಇದು ಮಾನವೀಯತೆಯ ಧರ್ಮ. ಪೂಜೆಯ ಪ್ರಕ್ರಿಯೆಯು ವಿಭಿನ್ನವಾಗಿರಬಹುದು. ಆದರೆ ಧರ್ಮ ಒಂದೇ ಮತ್ತು ಆ ಧರ್ಮವೇ ಸನಾತನ ಧರ್ಮ. ಆ ಸನಾತನ ಧರ್ಮದ ಪ್ರತಿನಿಧಿಯೇ ಕುಂಭ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಖಾಸಗಿ ವಾಹಿನಿ ಆಯೋಜಿಸಿದ್ದ ಮಹಾಕುಂಭ ಸಂವಾದದಲ್ಲಿ ಮಾತನಾಡಿದ ಯೋಗಿ ಮಹಾಕುಂಭವು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ. ಇದು ಎಲ್ಲಾ ಧರ್ಮ, ಸಂಸ್ಕೃತಿ ಮತ್ತು ಪಂಥಗಳ ಮಹಾನ್ ಸಮ್ಮಿಲನವಾಗಿದೆ ಎಂದು ಹೇಳಿದರು.
ದಿಬ್ರೂಗಢ ಅಸ್ಸಾಂ 2ನೇ ರಾಜಧಾನಿ: ಸಿಎಂ ಹಿಮಂತ ಬಿಸ್ವಾ ಘೋಷಣೆ
ದಿಬ್ರೂಗಢ: ಮುಂದಿನ 3 ವರ್ಷಗಳಲ್ಲಿ ದಿಬ್ರೂಗಢವನ್ನು ಅಸ್ಸಾಂನ 2ನೇ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಭಾನುವಾರ ಘೋಷಿಸಿದ್ದಾರೆ. ದಿಸ್ಪುರ ಹಾಲಿ ಅಸ್ಸಾಂ ರಾಜಧಾನಿಯಾಗಿದೆ. 2027ರಿಂದ ಅಸ್ಸಾಂ ವಿಧಾನಸಭೆಯ ಒಂದು ಅಧಿವೇಶನವನ್ನು ದಿಬ್ರೂಗಢದಲ್ಲಿಯೇ ನಡೆಸಲಾಗುವುದು ಎಂದೂ ಅವರು ಹೇಳಿದ್ದಾರೆ. ಗಣರಾಜ್ಯ ದಿನದ ನಿಮಿತ್ತ ಧ್ವಜಾರೋಹಣ ಮಾಡಿದ ಅವರು ‘ಐತಿಹಾಸಿಕ ನಗರ ದಿಬ್ರೂಗಢಕ್ಕೆ ಇದು ಮಹತ್ವದ ದಿನ. ಮುಂದಿನ ವರ್ಷ ಜ.25ರಿಂದ ಇಲ್ಲಿ ವಿಧಾನಸೌಧದ ನಿರ್ಮಾಣ ಆರಂಭವಾಗುತ್ತದೆ. ಸರ್ಕಾರದ ನಗರೀಕರಣ ಯೋಜನೆಯ ಅಡಿಯಲ್ಲಿ ದಿಬ್ರೂಗಢದ ಜತೆಯಲ್ಲೇ ತೇಜಪುರ ಮತ್ತು ಸಿಲ್ಚಾರ್‌ಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು’ ಎಂದು ತಿಳಿಸಿದರು.
2 ತಿಂಗಳಲ್ಲಿ 3 ಕುಟುಂಬದ 17 ಜನರ ನಿಗೂಢ ಸಾವು!
ಜಮ್ಮು: ಇಲ್ಲಿನ ಕೋಟರಂಕಾದ ಬದಹಾಲ್ ಗ್ರಾಮದಲ್ಲಿ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡಿದ್ದು, ಕಳೆದ ಒಂದೂವರೆ ತಿಂಗಳಲ್ಲಿ 3 ಪರಿವಾರಗಳ 17 ಜನರನ್ನು ಬಲಿಪಡೆದಿದೆ. ಡಿ.8ರಂದು ಗ್ರಾಮದಲ್ಲಿ ಮೊದಲ ಸಾವು ಸಂಭವಿಸಿದ್ದು ಬಳಿಕ ಒಟ್ಟು 16 ಜನರು ಸಾವನ್ನಪ್ಪಿದ್ದು ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಈ ಹಿನ್ನೆಲೆಯಲ್ಲಿ ಕಾಯಿಲೆಗೆ ತುತ್ತಾದವರ ಪರಿವಾರದ 200 ನಿಕಟ ಸಂಬಂಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಜೊತೆಗೆ ಬದಹಾಲ್ ಗ್ರಾಮ ಪ್ರವೇಶದ ಹಾಗೂ ಗುಂಪುಗೂಡುವ ಮೇಲೆ ನಿರ್ಬಂಧ ಹೇರಲಾಗಿದೆ.3 ಪರಿವಾರಗಳ 4 ವಯಸ್ಕರು ಹಾಗೂ 13 ಮಕ್ಕಳ ಸಾಮೂಹಿಕ ಸಾವಿಗೆ ಕಾರಣವಾದ ವಿಷಕಾರಿ ಅಂಶದ ಪತ್ತೆಗೆ ಕಾರ್ಯ ಶುರುವಾಗಿದ್ದು, ಮೃತರ ದೇಹದಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ನರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಲ್ಲ ವಿಷಕಾರಿ ಅಂಶ ಕಂಡುಬಂದಿದೆ. ಇದರ ಹಿಂದೆ ಕ್ರಿಮಿನಲ್ ಉದ್ದೇಶ ಇರುವ ಬಗ್ಗೆಯೂ ತನಿಖೆ ನಡೆಸಲು 11 ಜನರ ವಿಶೇಷ ತಂಡ ರಚಿಸಲಾಗಿದ್ದು, ಈವರೆಗೆ 50 ಜನರ ವಿಚಾರಣೆ ನಡೆಸಲಾಗಿದೆ.
ವೈದ್ಯರ ರಜೆ ರದ್ದು:ನಿಗೂಢ ಕಾಯಿಲೆಯ ಹಿನ್ನೆಲೆಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಗಿದ್ದು, ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರ ಚಳಿಗಾಲದ ರಜೆಯನ್ನು ರದ್ದಿಪಡಿಸಿ ಕರ್ತವ್ಯಕ್ಕೆ ಮರಳುವಂತೆ ಸೂಚಿಸಲಾಗಿದೆ. ಹೆಚ್ಚುವರಿ 10 ವೈದ್ಯಕೀಯ ವಿದ್ಯಾರ್ಥಿಗಳನ್ನು ಸರ್ಕಾರ ರೋಗಿಗಳ ಚಿಕಿತ್ಸೆಗೆ ನಿಯೋಜಿಸಿದೆ.
ನರಸಂಬಂಧಿ ಜಿಬಿಎಸ್ ರೋಗಕ್ಕೆ ಮಹಾರಾಷ್ಟ್ರದಲ್ಲಿ ಮೊದಲ ಬಲಿ
ಮುಂಬೈ: ರಾಜ್ಯದಲ್ಲಿ ಆರ್ಭಟಿಸುತ್ತಿರುವ ನರ ಸಂಬಂಧಿ ಕಾಯಿಲೆಯಾದ ಗುಯಿಲಿನ್ ಬಾರ್ರೆ ಸಿಂಡ್ರೋಮ್‌ಗೆ ಪುಣೆ ಮೂಲದ ಚಾರ್ಟೆಡ್ ಅಕೌಂಟೆಂಟ್ ಒಬ್ಬರು ಸಾವನ್ನಪ್ಪಿದ್ದಾರೆ. ಇದು ಈ ರೋಗದಿಂದ ಮಹಾರಾಷ್ಟ್ರದಲ್ಲಿ ಸಂಭವಿಸಿದ ಮೊದಲ ಸಾವಾಗಿದೆ. ಮೃತರು ಹಲವು ದಿನಗಳಿಂದ ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದು, ಸೋಲಾಪುರ ಜಿಲ್ಲೆಯ ತಮ್ಮ ಹಳ್ಳಿಗೆ ತೆರಳಿದ್ದರು. ನಿಶ್ಶಕ್ತಿ ಉಂಟಾದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಜಿಬಿಎಸ್ ಪತ್ತೆಯಾಗಿದೆ. ಕೂಡಲೇ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಕೆಲ ಕಾಲ ಅವರಿಗೆ ಕೈಕಾಲು ಆಡಿಸುವುದು ಅಸಾಧ್ಯವಾಗಿತ್ತು. ಆರೋಗ್ಯ ಸ್ಥಿತಿ ಸ್ಥಿರವಾದ ಬಳಿಕ ಅವರನ್ನು ಮತ್ತೆ ಐಸಿಯುಗೆ ವರ್ಗಾಯಿಸಲಾಯಿತು. ಆದರೆ ಬಳಿಕ ಉಸಿರಾಟ ಸಮಸ್ಯೆಯಿಂದಾಗಿ ಅವರು ಸಾವನ್ನಪ್ಪಿದ್ದಾರೆ.
ಈವರೆಗೆ ಪುಣೆಯಲ್ಲಿ ಜಿಬಿಎಸ್‌ನ 73 ಪ್ರಕರಣಗಳು ಪತ್ತೆಯಾಗಿದ್ದು, 14 ಜನರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ.
ಜಿಬಿಎಸ್ ಎಂದರೇನು?:
ದೇಹದ ರೋಗನಿರೋಧಕ ಶಕ್ತಿಯು ನರಮಂಡಲದ ಮೇಲೆ ದಾಳಿ ಮಾಡಿದ ಪರಿಣಾಮವಾಗಿ ಮಾಂಸಖಂಡಗಳು ನಿಶ್ಶಕ್ತವಾಗಿ ಕೈಕಾಲು ಮರಗಟ್ಟುತ್ತವೆ. ಅತಿಸಾರ, ಹೊಟ್ಟೆನೋವು, ಜ್ವರ, ವಾಕರಿಕೆ ಅಥವಾ ವಾಂತಿ ಇದರ ಲಕ್ಷಣಗಳು. ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ಜಿಬಿಎಸ್ ಉಂಟಾಗುತ್ತದೆ ಎನ್ನಲಾಗಿದೆ. ಇದನ್ನು 1ರಿಂದ 3 ವಾರಗಳಲ್ಲಿ ಪತ್ತೆ ಮಾಡಬಹುದು.