ಸುಖ-ಶಾಂತಿಯಲ್ಲಿ ಬದುಕಿ, ರೊಟ್ಟಿ ತಿನ್ನಿ. ಇಲ್ಲದಿದ್ದರೆ ನನ್ನ ಬಳಿ ಗುಂಡು ಇದ್ದೇ ಇದೆ ಎಂದು ಪ್ರಧಾನಿ ನರೆಂದ್ರ ಮೋದಿ ಅವರು, ಉಗ್ರರನ್ನು ಪೋಷಿಸುವ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಭುಜ್‌ : ಪಾಕಿಸ್ತಾನಿಯರು ಉಗ್ರವಾದವನ್ನು ಮುಗಿಸಲು ಮುಂದೆ ಬರಬೇಕು. ಸುಖ-ಶಾಂತಿಯಲ್ಲಿ ಬದುಕಿ, ರೊಟ್ಟಿ ತಿನ್ನಿ. ಇಲ್ಲದಿದ್ದರೆ ನನ್ನ ಬಳಿ ಗುಂಡು ಇದ್ದೇ ಇದೆ ಎಂದು ಪ್ರಧಾನಿ ನರೆಂದ್ರ ಮೋದಿ ಅವರು, ಉಗ್ರರನ್ನು ಪೋಷಿಸುವ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದೊಂದಿಗೆ ಭೂ ಮತ್ತು ಜಲಗಡಿಯನ್ನು ಹಂಚಿಕೊಂಡಿರುವ ಕಛ್‌ ಜಿಲ್ಲೆಯ ಭುಜ್‌ನಲ್ಲಿ ಮೋದಿ ಹೀಗೆ ಹೇಳಿದರು.

ಇದಕ್ಕೂ ಮೊದಲು, ದೇಶದ ಮೊದಲ 9,000 ಹಾರ್ಸ್‌ಪವರ್‌ ಲೋಕೋಮೋಟಿವ್ ಎಂಜಿನ್ ಹಾಗೂ 21,405 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ರೋಲಿಂಗ್ ಸ್ಟಾಕ್ ಕಾರ್ಯಾಗಾರವನ್ನು ಅನಾವರಣಗೊಳಿಸಿದ ಬಳಿಕ ಇಲ್ಲಿ ನಡೆದ ರ್‍ಯಾಲಿಯಲ್ಲಿ ಮೋದಿ ಮಾತನಾಡಿದರು. ಈ ವೇಳೆ, ‘ನಮ್ಮ ಸಹೋದರಿಯರ ಹಣೆಯಿಂದ ಸಿಂದೂರವನ್ನು ಅಳಿಸುವ ಧೈರ್ಯ ಮಾಡುವವರ ಅಂತ್ಯ ನಿಶ್ಚಿತ. ಮೋದಿ ವಿರುದ್ಧ ಹೋರಾಡುವುದು ಎಷ್ಟು ಕಷ್ಟವೆಂದು ಉಗ್ರರು ಕನಸಲ್ಲೂ ಯೋಚಿಸಿರಲಿಕ್ಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ, ಪಾಕ್‌ ಪೋಷಿತ ಉಗ್ರರಿಗೆ ಮತ್ತೊಮ್ಮೆ ನೇರಾನೇರ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ, ‘ಭಾರತವು ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿಯಂತಹ ಗುರಿಗಳನ್ನು ಹಾಕಿಕೊಂಡಿದ್ದರೆ, ಪಾಕಿಸ್ತಾನದ ಮಾತ್ರ ಭಾರತವನ್ನು ದ್ವೇಷಿಸುತ್ತ ಅದಕ್ಕೆ ಹಾನಿ ಮಾಡುವ ಬಗ್ಗೆಯೇ ಯೋಚಿಸುತ್ತಿರುತ್ತದೆ’ ಎಂದು ಕಿಡಿಕಾರಿದ್ದಾರೆ.

‘ಆಪರೇಷನ್‌ ಸಿಂದೂರ ಕೇವಲ ಸೇನಾ ಕಾರ್ಯಾಚರಣೆಯಲ್ಲ, ಅದು ಭಾರತದ ನೀತಿ ಮತ್ತು ಭಾವನೆಗಳ ಅಭಿವ್ಯಕ್ತಿ’ ಎಂದ ಮೋದಿ, ಕಾಶ್ಮೀರದಲ್ಲಿ ಉಗ್ರರು ನಡೆಸಿದ ಭೀಕರ ನರಮೇಧವನ್ನು ಸ್ಮರಿಸಿದರು. ‘ಪಹಲ್ಗಾಂ ದಾಳಿಯ ಬಳಿಕ, ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬಹುದೆಂದು ಕಾದೆ. ಆದರೆ ಅದೇ ಅವರ ಆದಾಯವಾಗಿದೆ. ಅಂತಹ ಉಗ್ರದಾಳಿಯ ಬಳಿಕ ಭಾರತ ಮತ್ತು ಮೋದಿ ಸುಮ್ಮನೆ ಕೂರಲು ಸಾಧ್ಯವೇ? ನಮ್ಮ ಸಹೋದರಿಯರ ಹಣೆಯಿಂದ ಸಿಂದೂರವನ್ನು ಅಳಿಸುವ ಧೈರ್ಯ ಮಾಡುವವರ ಅಂತ್ಯ ನಿಶ್ಚಿತ. ಮೋದಿ ವಿರುದ್ಧ ಹೋರಾಡುವುದು ಎಷ್ಟು ಕಷ್ಟವೆಂದು ಉಗ್ರರು ಕನಸಲ್ಲೂ ಯೋಚಿಸಿರಲಿಕ್ಕಿಲ್ಲ’ ಎಂದು ಹೇಳಿದರು.

ಸ್ವದೇಶಿ ಉತ್ಪನ್ನಗಳ ಬಳಸಿ:

‘ಹಬ್ಬದ ಸಮಯದಲ್ಲಿ ನಾವು ವಿದೇಶಿ ವಸ್ತುಗಳ ಖರೀದಿ ನಿಲ್ಲಿಸಬೇಕು. ದೇಶದ ಅಭಿವೃದ್ಧಿಗಾಗಿ, ಭಾರತದಲ್ಲಿ ತಯಾರಿಸಲಾದ ಉತ್ಪನ್ನಗಳನ್ನೇ ಖರೀದಿಸಬೇಕು’ ಎಂದು ಪ್ರಧಾನಿ ಕರೆ ನೀಡಿದರು. ಈ ಮೂಲಕ, ಭಾರತದಲ್ಲಿ ತನ್ನ ವಸ್ತುಗಳನ್ನು ಸುರಿಯುವ ಪಾಕ್‌ನ ಪರಮಮಿತ್ರ ಚೀನಾಗೂ ತಿರುಗೇಟು ನೀಡಿದ್ದಾರೆ.

ರ್‍ಯಾಲಿ ವೇಳೆ ಕ। ಖುರೇಷಿ ಕುಟುಂಬದಿಂದ ಪುಷ್ಪವೃಷ್ಟಿ

ಆಪರೇಷನ್‌ ಸಿಂದೂರದ ಬಗ್ಗೆ ಪತ್ರಿಕಾಗೋಷ್ಠಿಗಳಲ್ಲಿ ಮಾಹಿತಿ ನೀಡಿದ್ದ ಕ। ಸೋಫಿಯಾ ಖುರೇಷಿ ಅವರ ಪರಿವಾರ, ರ್‍ಯಾಲಿ ವೇಳೆ ವಿಶೇಷ ವೇದಿಕೆಯೊಂದರ ಮೇಲೆ ನಿಂತು, ಪ್ರಧಾನಿ ಮೋದಿ ಅವರ ಮೇಲೆ ಪುಷ್ಪವೃಷ್ಟಿ ಮಾಡಿತು. ಖುರೇಷಿಯವರ ಪೋಷಕರಾದ ತಾಜ್ ಮೊಹಮ್ಮದ್ ಖುರೇಷಿ ಮತ್ತು ಹಲೀಮಾ, ಅವಳಿ ಸಹೋದರಿ ಶೈನಾ ಸುನ್ಸಾರಾ ಮತ್ತು ಸಹೋದರ ಸಂಜಯ್ ಖುರೇಷಿ ಉಪಸ್ಥಿತರಿದ್ದರು. ಇದರ ಫೋಟೋವನ್ನು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.