ಸಾರಾಂಶ
ಜೈಪುರ: ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಶತ್ರುಗಳ ವಿರುದ್ಧ ಕ್ರಮ ಕೈಗೊಳ್ಳಲೂ ನಮ್ಮ ಯೋಧರಿಗೆ ಅವಕಾಶ ನೀಡುತ್ತಿರಲಿಲ್ಲ. ಅವರ ಕೈ ಕಟ್ಟಿ ಹಾಕಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಭಾರತವನ್ನು ಕೆಣಕಿದರೆ ಅವರು ದೇಶಗಳಗೆ ನುಗ್ಗಿ ಹೊಡಿತಾರೆ. ಏಕೆಂದರೆ ಇದು ನವ ಭಾರತ ಎಂಬುದು ಇದೀಗ ಶತ್ರುಗಳಿಗೂ ಗೊತ್ತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಪಾಕ್‌ನಲ್ಲಿ ಉಗ್ರರ ನಿಗೂಢ ಹತ್ಯೆಯಲ್ಲಿ ಭಾರತದ ಕೈವಾಡದ ಕುರಿತು ಬ್ರಿಟನ್ ಪತ್ರಿಕೆ ವರದಿ ಮತ್ತು ಭಾರತದ ಬಾಲಾಕೋಟ್ ದಾಳಿಯನ್ನು ಕಾಂಗ್ರೆಸ್ ನಾಯಕರು ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ಪಾಕಿಸ್ತಾನ ಮತ್ತು ಕಾಂಗ್ರೆಸ್ ಎರಡನ್ನೂ ಗುರಿಯಾಗಿಸಿ ಪ್ರಧಾನಿ ಮೋದಿ ಈ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ರಾಜಸ್ತಾನದ ಚುರುವಿನಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ಮೋದಿ, ‘ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉಗ್ರರು ನಮ್ಮ ದೇಶದೊಳಗೆ ನುಗ್ಗಿ ದಾಳಿ ನಡೆಸಿ ಪರಾರಿಯಾಗುತ್ತಿದ್ದರು. ಅವರ ವಿರುದ್ಧ ಪ್ರತಿದಾಳಿ ನಡೆಸಲೂ ನಮ್ಮ ಯೋಧರಿಗೆ ಸರ್ಕಾರ ಅವಕಾಶ ನೀಡುತ್ತಿರಲಿಲ್ಲ. ನಮ್ಮ ಯೋಧರು ಒಂದು ರ್‍ಯಾಂಕ್, ಒಂದು ಪಿಂಚಣಿಗೆ ಮನವಿ ಮಾಡಿದರೂ ಸರ್ಕಾರ ಆ ಬಗ್ಗೆ ಗಮನ ಹರಿಸಲಿಲ್ಲ.ಆದರೆ ನಮ್ಮ ಸರ್ಕಾರ ಬರುತ್ತಲೇ, ಗಡಿಯಲ್ಲಿ ಶತ್ರುಗಳಿಗೆ ಸೂಕ್ತ ಎದಿರೇಟು ನೀಡಲು ನಮ್ಮ ಯೋಧರಿಗೆ ಮುಕ್ತ ಅವಕಾಶ ಕಲ್ಪಿಸಲಾಯಿತು. ಹೀಗಾಗಿ ಇಂದು ಶತ್ರುಗಳು ಕೂಡಾ. ‘ಇದು ಮೋದಿ ಯುಗ; ಇದು ಶತ್ರುದೇಶದ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿಯುವ ನವಭಾರತ’ ಎಂದು ಕಂಡುಕೊಂಡಿದ್ದಾರೆ ಎಂದು ಹೇಳಿದರು.
ನಮ್ಮ ಯೋಧರು ಸರ್ಜಿಕಲ್ ದಾಳಿ ನಡೆಸಿದಾಗ ‘ಘಮಂಡಿಯಾ ಘಠಬಂಧನ್’ ಯೋಧರ ಸಾಹಸದ ಬಗ್ಗೆಯೇ ಸಾಕ್ಷ್ಯ ಕೇಳಿದ್ದರು. ಸೇನೆಗೆ ಅವಮಾನ ಮಾಡುವುದು ಮತ್ತು ದೇಶವನ್ನು ವಿಭಜಿಸುವ ಕೆಲಸ ಮಾಡುವುದು ಕಾಂಗ್ರೆಸ್‌ನ ಹೆಗ್ಗುರುತು ಎಂದು ಮೋದಿ ಕಿಡಿಕಾರಿದರು.ಇದೇ ವೇಳೆ ಕೆಲ ತಿಂಗಳ ಹಿಂದೆ ನಾವು ಆಯೋಧ್ಯೆಯ ರಾಮಮಂದಿರದ ಭರವಸೆ ಈಡೇರಿಸಿದಾಗ ಕಾಂಗ್ರೆಸ್ ಬಹಿರಂಗವಾಗಿಯೇ ನಮ್ಮ ನಂಬಿಕೆಯನ್ನು ಅವಮಾನಿಸಿತ್ತು. ಶ್ರೀರಾಮಮನ್ನು ಕಾಲ್ಪನಿಕ ಎಂದಿತ್ತು. ಕಾಂಗ್ರೆಸ್‌ನ ಪಾಪಗಳಿಂದಾಗಿ ದೇಶ ಸಾಕಷ್ಟು ಬೆಲೆತೆರಬೇಕಾಗಿ ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದರು.
ಮುಂದಿದೆ ದೊಡ್ಡ ಅಭಿವೃದ್ಧಿ:
ಈ ನಡುವೆ ಕಳೆದ 10 ವರ್ಷಗಳ ನಮ್ಮ ಸರ್ಕಾರದ ಅವಧಿಯಲ್ಲಿ ದೇಶ ನೋಡಿದ್ದು ಕೇವಲ ಅಭಿವೃದ್ಧಿಯ ಟ್ರೇಲರ್ ಅಷ್ಟೇ. ಮುಂದೆ ದೊಡ್ಡಮಟ್ಟದ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿದೆ. ಲೋಕಸಭೆ ಚುನಾವಣೆ ಬಳಿಕ ಮತ್ತೆ ರಚನೆಯಾಗಲಿರುವ ನಮ್ಮ ಸರ್ಕಾರ ಅಭಿವೃದ್ಧಿಯ ಹೊಸ ಶಖೆ ಆರಂಭಿಸಲಿದೆ ಎಂದರು.ಕಾಂಗ್ರೆಸ್ ಅವಧಿಯಲ್ಲಿ ದೇಶದ ಆರ್ಥಿಕತೆ ಕುಸಿದಿತ್ತು. ಜನತೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದ ಪರದಾಡುತ್ತಿದ್ದರು. ದೇಶದಲ್ಲಿ ಇನ್ನೇನೂ ಬದಲಾವಣೆ ಆಗಲ್ಲ ಎಂದೇ ಜನ ನಂಬುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂಥ ಹೊತ್ತಿನಲ್ಲೇ 2014ರಲ್ಲಿ ನೀವು ಬಡವರ ಮಗನಿಗೆ ದೇಶಸೇವೆಯ ಅವಕಾಶ ನೀಡಿದಿರಿ. ಅಂದಿನಿಂದಲೂ ನಿರಾಸೆ ಮತ್ತು ಹತಾಶೆ ಎಂದಿಗೂ ನನ್ನ ಬಳಿ ಬರಲಾಗದು. ದೇಶದ ಪರಿಸ್ಥಿತಿಯನ್ನು ಬದಲಾಯಿಸಲೇಬೇಕು ಎಂದು ನಾನು ನಿಶ್ಚಯಿಸಿದ್ದೆ. ಅದರಂತೆ ನೋಡಿಕೊಂಡಿದ್ದೇನೆ ಎಂದು ಮೋದಿ ಹೇಳಿದರು.