ಮಹಾದೇವ್‌ ಆ್ಯಪ್ ಮೇಲೆ ಮತ್ತೆ ದಾಳಿ: ₹580 ಕೋಟಿ ಜಪ್ತಿ

| Published : Mar 02 2024, 01:48 AM IST

ಸಾರಾಂಶ

ಬೆಟ್ಟಿಂಗ್‌ ದಂಧೆಯ ಮೂಲಕ ಕುಖ್ಯಾತವಾಗಿರುವ ದುಬೈ ಮೂಲದ ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ನ ಭಾರತೀಯ ವಿವಿಧ ಸ್ಥಳಗಳ ಮೇಲೆ ದಾಳಿ ಮಾಡಿ ಜಾರಿ ನಿರ್ದೇಶನಾಲಯ 580 ಕೋಟಿ ರು. ಜಪ್ತಿ ಮಾಡಿಕೊಂಡಿದೆ.

ಪಿಟಿಐ ನವದೆಹಲಿ

ಹವಾಲಾ ದಂಧೆಯಲ್ಲಿ ತೊಡಗಿರುವ ದುಬೈ ಮೂಲದ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ನ ಕಚೇರಿಗಳ ಮೇಲೆ ಮತ್ತೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 580 ಕೋಟಿ ರು.ಗೂ ಅಧಿಕ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ.ಶುಕ್ರವಾರ ಕೋಲ್ಕತಾ, ಗುರುಗ್ರಾಮ, ದೆಹಲಿ, ಇಂದೋರ್‌, ಮುಂಬೈ ಹಾಗೂ ರಾಯ್ಪುರದ 28 ಸ್ಥಳಗಳ ಮೇಲೆ ದಾಳಿ ನಡೆದಿದೆ. ಈ ವೇಳೆ ಕಂಪನಿಯು ಹೊಂದಿರುವ 580 ಕೋಟಿ ರು. ಮೊತ್ತದ ಷೇರುಗಳು ಹಾಗೂ 3.64 ಕೋಟಿ ರು. ನಗದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಹಾದೇವ್ ಆ್ಯಪ್‌ನ ಪ್ರವರ್ತಕರ ಜೊತೆ ಸಂಪರ್ಕ ಹೊಂದಿರುವ ಹವಾಲಾ ದಂಧೆಕೋರ ಹರಿಶಂಕರ್‌ ತಿಬ್ರೆವಾಲ್‌ ಎಂಬಾತ ಈ ಹಗರಣದಲ್ಲಿ ಪ್ರಮುಖ ಪಾತ್ರ ಹೊಂದಿರುವ ಸಂಗತಿ ಇ.ಡಿ.ಗೆ ತಿಳಿದುಬಂದಿದೆ. ಸದ್ಯ ಆತ ದುಬೈನಲ್ಲಿ ನೆಲೆಸಿದ್ದು, ಈಗ ನಡೆದಿರುವ ದಾಳಿಯಲ್ಲಿ ಆತ ಭಾರತದಲ್ಲಿ ಹೊಂದಿರುವ ಕಚೇರಿಗಳೂ ಸೇರಿವೆ. ಹರಿಶಂಕರ್‌ ‘ಸ್ಕೈಎಕ್ಸ್‌ಚೇಂಜ್‌’ ಎಂಬ ಇನ್ನೊಂದು ಅಕ್ರಮ ಬೆಟ್ಟಿಂಗ್‌ ಆ್ಯಪ್‌ ಕೂಡ ನಡೆಸುತ್ತಿದ್ದಾನೆ ಎಂದು ಮೂಲಗಳು ಹೇಳಿವೆ.