ಸಾರಾಂಶ
ಸೋಲ್: ದಕ್ಷಿಣ ಕೊರಿಯಾದಲ್ಲಿ ತುರ್ತು ಸ್ಥಿತಿ ಹೇರಿದ ಸಂಬಂಧ ಬಂಧಿತರಾಗಿರುವ ನಿರ್ಗಮಿತ ರಕ್ಷಣಾ ಸಚಿವ ಕಿಮ್ ಯೋಂಗ್ ಹ್ಯುನ್ ತಮ್ಮ ಒಳ ಉಡುಪು ಬಳಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಆದರೆ ಬಂಧನ ಕೇಂದ್ರದಲ್ಲಿದ್ದ ಅಧಿಕಾರಿಗಳ ಮಧ್ಯಪ್ರವೇಶದಿಂದ ಆತ್ಮಹತ್ಯೆಯ ಯತ್ನ ವಿಫಲವಾಗಿದೆ.
ತುರ್ತು ಸ್ಥಿತಿ ಪ್ರಕರಣದ ಸಂಬಂಧ ತನಿಖೆ ತೀವ್ರಗೊಂಡು ತಮ್ಮ ಅಧಿಕೃತ ಬಂಧನವಾಗುವ ಮುನ್ನ ಶೌಚಾಲಯಕ್ಕೆ ತೆರಳಿದ ಕಿಮ್ ತಮ್ಮ ಜೀವನವನ್ನು ಕೊನೆಗಾಣಿಸಿಕೊಳ್ಳಲು ಯತ್ನಿಸಿದ್ದರು. ಆಗ ಅಧಿಕಾರಿಗಳು ಬಾಗಿಲು ತೆರೆದ ಕಾರಣ ಕಿಮ್ ಆ ಪ್ರಯತ್ನವನ್ನು ಕೈಬಿಟ್ಟಿದ್ದಾರೆ ಎಂದು ಕೊರಿಯಾದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
2 ಪೊಲೀಸ್ ಅಧಿಕಾರಿ ವಶಕ್ಕೆ:
ದಕ್ಷಿಣ ಕೊರಿಯಾದ 2 ಉನ್ನತ ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅಧ್ಯಕ್ಷ ಯೂನ್ ಸುಕ್ ಯೋಲ್ ಹೇರಿದ್ದ ತುರ್ತು ಸ್ಥಿತಿಯಲ್ಲಿ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಯೂನ್‌ರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವ ಬ್ಗಗೆ ವಿಪಕ್ಷ ಡೆಮಾಕ್ರಟಿಕ್ ಪಾರ್ಟಿ ಆಗ್ರಹಿಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ವಿಪಕ್ಷಗಳು ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿ ಡಿ.3ರಂದು ಅಧ್ಯಕ್ಷ ಯೂನ್ ತುರ್ತು ಸ್ಥಿತಿ ಹೇರಿದ್ದರು. ಆದರೆ ಜನರ ಆಕ್ರೋಶಕ್ಕೆ ಮಣಿದು ಕೆಲವೇ ಗಂಟೆಗಳಲ್ಲಿ ಅದನ್ನು ತೆರವುಗೊಳಿಸಿದ್ದರು.