ಸಾರಾಂಶ
ಪಿಟಿಐ ನವಾಡಾ (ಬಿಹಾರ)ಚುನಾವಣೆ ಹೊಸ್ತಿನಲ್ಲಿರುವ ಬಿಹಾರದಲ್ಲಿ ಮತ್ತೊಮ್ಮೆ ರಾಜಕೀಯ ಕೀಳು ಹೇಳಿಕೆ ಸದ್ದು ಮಾಡಿದ್ದು, ಆರ್‌ಜೆಡಿ ಮಾಜಿ ನಾಯಕ ರಾಜ್ ಬಲ್ಲಭ್ ಅವರು, ‘ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಪತ್ನಿ ಜರ್ಸಿ ಹಸು’ ಎಂದು ಕರೆದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಮಾಜಿ ಶಾಸಕ ರಾಜ್ ಬಲ್ಲಭ್, ತೇಜಸ್ವಿ ಪತ್ನಿ ವಿರುದ್ಧ ಕೀಳಾಗಿ ಮಾತನಾಡಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ‘ತೇಜಸ್ವಿ ಯಾದವ್ ಬಿಹಾರದ ಯಾದವರ ಮತಗಳನ್ನು ಬಯಸುತ್ತಾರೆ. ಆದರೆ ಆ ಸಮುದಾಯದ ಹುಡುಗಿ ತನ್ನ ಹೆಂಡತಿಯಾಗಲು ಯೋಗ್ಯಳೆಂದು ಅವರು ಭಾವಿಸಿರಲಿಲ್ಲ. ಬಹುಶಃ ಅವರು ಜೆರ್ಸಿ ದನವನ್ನು (ಅನ್ಯ ಭಾಗದ ಹಸು) ಹುಡುಕಿದ್ದರು’ ಎಂದಿದ್ದಾರೆ.
ತೇಜಸ್ವಿ ಚಂಡೀಗಢದ ರಾಜಶ್ರೀ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.
ವಿಶ್ವಾಸಮತಕ್ಕೆ ಸೋಲು; ಫ್ರಾನ್ಸ್ ಪ್ರಧಾನಿ ರಾಜೀನಾಮೆ
ಪ್ಯಾರಿಸ್: ಫ್ರಾನ್ಸ್ ಆರ್ಥಿಕ ಬಿಕ್ಕಟ್ಟು ನಿರ್ವಹಣೆಯಲ್ಲಿ ವಿಫಲರಾದ ಆರೋಪ ಹೊತ್ತಿದ್ದ ಫ್ರೆಂಚ್ ಪ್ರಧಾನಿ ಫ್ರಾಂಕೋಯಿಸ್ ಬೇರೂ ಸೋಮವಾರ ಸಂಸತ್ತಿನಲ್ಲಿ ವಿಶ್ವಾಸಮತ ಕಳೆದುಕೊಂಡಿದ್ದಾರೆ. 354-194 ಮತದಿಂದ ಅವರು ಸೋತಿದ್ದಾರೆ. 12 ತಿಂಗಳಲ್ಲಿ ಬದಲಾದ 3ನೇ ಫ್ರೆಂಚ್ ಪ್ರಧಾನಿ ಅವರಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಮ್ಯಾಕ್ರಾನ್‌ಗೆ ವರ್ಷದಲ್ಲಿ 4ನೇ ಪ್ರಧಾನಿ ಆಯ್ಕೆಯ ಸವಾಲು ಎದುರಾಗಿದೆ.
ಬಹಿರಂಗ ಮೂತ್ರ ವಿಸರ್ಜನೆಗೆ ಆಕ್ಷೇಪಿಸಿದ್ದಕ್ಕೆ ಅಮೆರಿಕದಲ್ಲಿ ಭಾರತೀಯನ ಹತ್ಯೆ
ಚಂಡೀಗಢ: ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಮೂತ್ರ ವಿಸರ್ಜನೆ ಆಕ್ಷೇಪಿಸಿದ್ದಕ್ಕೆ ಹರ್ಯಾಣ ಮೂಲದ ಯುವಕನನ್ನು ಸ್ಥಳೀಯ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಹರ್ಯಾಣದ ಜಿಂದ್ ಜಿಲ್ಲೆಯ ಕಪಿಲ್ ಎನ್ನುವ ಯುವಕ ಕಳೆದ ಮೂರು ವರ್ಷಗಳಿಂದ ಅಮೆರಿಕದ ಅಂಗಡಿಯೊಂದರಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ಈ ನಡುವೆ ಸ್ಥಳೀಯ ವ್ಯಕ್ತಿಯೊಬ್ಬ ಅಂಗಡಿ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆಗೆ ಮುಂದಾಗಿದ್ದಾನೆ. ಆಗ ಕರ್ತವ್ಯದಲ್ಲಿದ್ದ ಕಪಿಲ್ ಅದಕ್ಕೆ ಆಕ್ಷೇಪಿಸಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಆರೋಪಿ ಗನ್‌ನಿಂದ ಶೂಟ್ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಕಪಿಲ್ ಕುಟುಂಬಸ್ಥರು ಆರೋಪಿಸಿದ್ದಾರೆ.
ಇಸ್ರೇಲ್‌ನಲ್ಲಿ ಹಮಾಸ್ ಭಾರೀ ಗುಂಡಿನ ದಾಳಿ: ಐವರು ಸಾವು
ಜೆರುಸಲೇಂ: ಇಸ್ರೇಲ್ ರಾಜಧಾನಿ ಜೆರುಸಲೇಂನ ಜನನಿಬಿಡ ಬಸ್ ನಿಲ್ದಾಣವೊಂದರಲ್ಲಿ ಶಂಕಿತ ಹಮಾಸ್ ಬಂದೂಕುಧಾರಿಗಳು ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.ದಾಳಿಕೋರರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಬಂದೂಕುಧಾರಿಗಳು ಬಸ್ ಒಳಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದೂ ವರದಿಯಾಗಿದೆ. ಇನ್ನು ಗುಂಡಿನ ದಾಳಿಯಿಂದ ಭಯಗೊಂಡು ಜನರು ದಿಕ್ಕಪಾಲಾಗಿ ಓಡುತ್ತಿರುವ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಒಬ್ಬ ಭದ್ರತಾ ಅಧಿಕಾರಿ, ನಾಗರಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಟ್ಟು ಐವರು ಬಲಿಯಾಗಿದ್ದಾರೆ. 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ,
ಇನ್ನು ಈ ವಿಧ್ವಂಸಕ ಕೃತ್ಯದ ಬಗ್ಗೆ ಹಮಾಸ್ ಪ್ರತಿಕ್ರಿಯಿಸಿದ್ದು, ‘ನಮ್ಮ ಜನರ ವಿರುದ್ಧದ ಆಕ್ರಮಣಕ್ಕೆ ಇದು ಸಹಜ ಪ್ರತಿಕ್ರಿಯೆ’ ಎಂದಿದೆ. ಆದರೆ ದಾಳಿ ಹೊಣೆ ಹೊತ್ತುಕೊಂಡಿಲ್ಲ.
ಆರ್‌ಎಸ್‌ಎಸ್ ನಾಯಕ ಹೊಸಬಾಳೆಗೆ ಹೈ ಬೀಪಿ: ಆಸ್ಪತ್ರೆಗೆ ದಾಖಲು
ನವದೆಹಲಿ: ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರ ರಕ್ತದೊತ್ತಡ ಹೆಚ್ಚಾದ ಕಾರಣ ಸೋಮವಾರ ರಾಜಸ್ಥಾನದ ಜೋಧಪುರ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಮೇಲೆ ನಿಗಾ ವಹಿಸಲಾಗಿದೆ. ಅವರು ಸದ್ಯಕ್ಕೆ ಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.‘ಹೊಸಬಾಳೆ ಈಗ ಚೇತರಿಸಿಕೊಂಡಿದ್ದು, ಸಂಪೂರ್ಣ ಆರೋಗ್ಯವಾಗಿದ್ದಾರೆ’ ಎಂದು ಆರ್‌ಎಸ್‌ಎಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.
ಆರ್‌ಎಸ್‌ಎಸ್ ಹಿರಿಯ ನಾಯಕರನ್ನೊಳಗೊಂಡ 3 ದಿನಗಳ ಸಭೆ ಜೋಧಪುರದಲ್ಲಿ ಭಾನುವಾರ ಮುಕ್ತಾಯವಾಗಿತ್ತು. ಅದರಲ್ಲಿ ಭಾಗವಹಿಸಿದ್ದ ಹೊಸಬಾಳೆಗೆ ಹೈ ಬೀಪಿ ಬಾಧಿಸಿದೆ.