ಸಾರಾಂಶ
ಎರಡನೇ ದಿನವೂ ಬಂಗಾಳ ಸಚಿವರ ನಿಯೋಗ ಸಂದೇಶ್‌ಖಾಲಿಗೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಅಲಿಸಿದೆ. ಈ ಡುವೆ ಸತ್ಯ ಶೋಧನಾ ಸಮಿತಿಗೆ ಸಂದೇಶ್‌ಖಾಲಿ ಗಡಿಯಲ್ಲಿ ಪೊಲೀಸರು ತಡೆ ನೀಡಿದ್ದಾರೆ.
ಕೊಲ್ಕತಾ: ಪ.ಬಂಗಾಳದ ಗಲಭೆಪೀಡಿತ ಸಂದೇಶ್‌ಖಾಲಿಯಲ್ಲಿ ಜನರ ಸಮಸ್ಯೆ ಆಲಿಸಲು ತೆರಳುತ್ತಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ, ಐಪಿಎಸ್ ಅಧಿಕಾರಿ, ರಾಷ್ಟ್ರಯ ಮಹಿಳಾ ಆಯೋಗದ ಸದಸ್ಯೆ, ವಕೀಲರು ಮತ್ತು ಪತ್ರಕರ್ತರ ಸತ್ಯ ಶೋಧನಾ ಸಮಿತಿಗೆ ಬಂಗಾಳ ಪೊಲೀಸರು ಗಡಿಯಲ್ಲೇ ತಡೆಯೊಡ್ಡಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪಟನಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನರಸಿಂಹ ರೆಡ್ಡಿ, ‘ಪೊಲೀಸರು ನಮ್ಮನ್ನು ತಡೆಯೊಡ್ಡುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಮ್ಮನ್ನು ಎರಡು ತಂಡಗಳಲ್ಲಿ ಸಮಸ್ಯೆ ಆಲಿಸಲು ಅನುವು ಮಾಡಿಕೊಡಬೇಕು. ಕನಿಷ್ಠ ಪಕ್ಷ ಮಹಿಳಾ ಸದಸ್ಯರನ್ನಾದರೂ ಸಂದೇಶ್‌ಖಾಲಿಗೆ ಬಿಡಬೇಕು’ ಎಂದು ಆಗ್ರಹಿಸಿದರು. ಈ ಬೆನ್ನಲ್ಲೇ ಸಮಿತಿಯ ಸದಸ್ಯರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಗಾಳ ಸಚಿವರ ಭೇಟಿ:
ಈ ನಡುವೆ ಬಂಗಾಳ ಸಚಿವರ ನಿಯೋಗವು ಸಂದೇಶ್‌ಖಾಲಿಗೆ ಸತತ ಎರಡನೇ ದಿನವೂ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿದೆ. ಈ ವೇಳೆ ಸಚಿವರು ಸಂತ್ರಸ್ತರ ಬಳಿ ಒಂದೂವರೆ ತಿಂಗಳಲ್ಲಿ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಭರವಸೆ ನೀಡಿದ್ದಾರೆ.