ಸಾರಾಂಶ
ನೋಯ್ಡಾ: ಇಲ್ಲಿನ ಸೆಕ್ಟರ್-70ರಲ್ಲಿ ನಕಲಿ ಅಂತಾರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ ಸ್ಥಾಪಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ 6 ಜನರನ್ನು ಪೊಲೀಸರು ಶನಿವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಇವರೆಲ್ಲಾ ಪಶ್ಚಿಮ ಬಂಗಾಳದವರು ಎಂದು ತಿಳಿದುಬಂದಿದೆ. ಸರ್ಕಾರಿ ಅಧಿಕಾರಿಗಳಂತೆ ನಡೆಸುತ್ತಿದ್ದ ವಂಚಕರು, 10 ದಿನದ ಹಿಂದಷ್ಟೇ ತೆರೆಯಲಾಗಿದ್ದ ನಕಲಿ ಕಚೇರಿಯಲ್ಲಿ ನಕಲಿ ದಾಖಲೆಗಳು, ಗುರುತಿನ ಚೀಟಿ, ಪೊಲೀಸ್ ಲಾಂಛನ, ಕೆಲ ಸಚಿವಾಲಯಗಳ ನಕಲಿ ಪ್ರಮಾಣಪತ್ರಗಳನ್ನು ಪ್ರದರ್ಶಿಸುತ್ತಿದ್ದರು. ಜತೆಗೆ www.intlpcrib.in ಎಂಬ ನಕಲಿ ವೆಬ್‌ಸೈಟ್ ಮೂಲಕ ದೇಣಿಗೆಯನ್ನೂ ಕೇಳಿ ಸುಲಿಗೆ ಮಾಡುತ್ತಿದ್ದರು. ಪೊಲೀಸ್ ದೃಢೀಕರಣ ಬಯಸುವ ವ್ಯಕ್ತಿಗಳನ್ನು ಸಂಪರ್ಕಿಸಿ ದುಡ್ಡು ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ವಿಷಯ ತಿಳಿದ ಪೊಲೀಸರು ಈ ಜಾಲದ ಮೇಲೆ ದಾಳಿ ಮಾಡಿ ಅವರಿಂದ ನಕಲಿ ಗುರುತಿನ ಚೀಟಿ, ಸಚಿವಾಲಯ ಪ್ರಮಾಣಪತ್ರ, ಚೆಕ್ ಪುಸ್ತಕ, ಎಟಿಎಂ ಕಾರ್ಡ್, ವಿಸಿಟಿಂಗ್ ಕಾರ್ಡ್, ಸೈನ್‌ಬೋರ್ಡ್, ಮೊಬೈಲ್ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಜೂ.22ರಂದು ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಎಂಬಾತನನ್ನು ಬಂಧಿಸಲಾಗಿತ್ತು.