ದಿಲ್ಲಿಯತ್ತ 20 ಸಾವಿರ ರೈತರು: ರಾಜಧಾನಿ ಗಡಿ ಬಂದ್‌ಗೆ ಸಿದ್ಧತೆ!

| Published : Feb 12 2024, 01:30 AM IST / Updated: Feb 12 2024, 08:34 AM IST

Delhi Chalo Farmer Protest

ಸಾರಾಂಶ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಮಂಗಳವಾರ ದಿಲ್ಲಿ ಚಲೋಗೆ ಕರೆ ನೀಡಿವೆ.

ನವದೆಹಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಮಂಗಳವಾರ ದಿಲ್ಲಿ ಚಲೋಗೆ ಕರೆ ನೀಡಿವೆ. 

ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ.ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ ಕರೆ ನೀಡಿರುವ ಈ ಪ್ರತಿಭಟನೆಗೆ 200 ರೈತ ಸಂಘಟನೆಗಳು ಬೆಂಬಲ ನೀಡಿದ್ದು, ಕನಿಷ್ಠ 20 ಸಾವಿರ ರೈತರು ದೆಹಲಿ ಪ್ರವೇಶಿಸುವ ಯತ್ನ ಮಾಡಬಹುದು ಎಂಬ ಗುಪ್ತಚರ ಇಲಾಖೆ ಅಂದಾಜಿಸಿದೆ. 

ರೈತರು ಅಂಬಾಲ- ಶಂಭು, ಕನೌರಿ- ಜಿಂದ್‌ ಮತ್ತು ದಬಾವಲಿ ಗಡಿ ಮೂಲಕ ರಾಜಧಾನಿ ಪ್ರವೇಶಕ್ಕೆ ಯೋಜಿಸಿದ್ದಾರೆ. 

ಈಗಾಗಲೇ ಪಂಜಾಬ್‌ ಹಾಗೂ ಹರ್ಯಾಣದಿಂದ ಟ್ರ್ಯಾಕ್ಟರ್‌ಗಳಲ್ಲಿ ರೈತರು ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಗಡಿಯಲ್ಲಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಘೋಷಿಸಲಾಗಿದೆ.

ದಿಲ್ಲಿ ಹೆಬ್ಬಾಗಿಲು ಬಂದ್‌: ಈ ಎರಡೂ ಗಡಿಗಳಲ್ಲಿ ಕ್ರೇನ್‌ ಮತ್ತು ಕಂಟೇನರ್‌ಗಳನ್ನು ತಂದಿಡಲಾಗಿದ್ದು, ರೈತರು ದೆಹಲಿ ಪ್ರವೇಶ ಮಾಡಲು ಯತ್ನಿಸಿದರೆ ಹೆದ್ದಾರಿ ಬಂದ್ ಮಾಡಲು ದೆಹಲಿ ಪೊಲೀಸರು ಯೋಜಿಸಿದ್ದಾರೆ. 

ಅಲ್ಲದೆ ಯಾವುದೇ ಅನಾಹುತಕಾರಿ ಘಟನೆ ತಡೆಯಲು ಗಡಿ ಮತ್ತು ದೆಹಲಿಯ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಜೊತೆಗೆ ದೆಹಲಿಯ ಸೀಲಂಪುರ ಜಿಲ್ಲೆ ಮತ್ತು ಹರ್ಯಾಣದ ಪಂಚಕುಲ ಜಿಲ್ಲೆಗಳಲ್ಲಿ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. 

ಅಲ್ಲದೆ, ಅನಿವಾರ್ಯ ಕಾರಣಗಳಿಲ್ಲದ ಹೊರತು ಮುಂದಿನ ಒಂದೆರಡು ದಿನ ಪಂಜಾಬ್‌ಗೆ ತೆರಳಬೇಡಿ ಎಂದು ಹರ್ಯಾಣ ಪೊಲೀಸರು ನಾಗರಿಕರಿಗೆ ಸಲಹೆ ನೀಡಿದ್ದಾರೆ. 

ಅಲ್ಲದೆ ಭದ್ರತಾ ಕ್ರಮಗಳ ಕಾರಣ ಪಂಜಾಬ್‌ಗೆ ತೆರಳುವ ಮಾರ್ಗದಲ್ಲಿ ಸಂಚಾರದಲ್ಲಿ ಅಡಚಣೆ ಆಗಬಹುದು ಎಂದು ಎಚ್ಚರಿಸಿದ್ದಾರೆ.

ಈ ನಡುವೆ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ನಾಯಕ ಜಗಜಿತ್‌ ಸಿಂಗ್‌ ದಲ್ಲೇವಾಲಾ, ಒಂದೆಡೆ ಸರ್ಕಾರ ನಮಗೆ ಮಾತುಕತೆಗೆ ಆಹ್ವಾನ ನೀಡಿದ್ದರೆ, ಮತ್ತೊಂದೆಡೆ ಹರ್ಯಾಣದಲ್ಲಿ ನಮ್ಮನ್ನು ಹೆದರಿಸುವ ಯತ್ನ ಮಾಡುತ್ತಿದೆ.

ಗಡಿಗಳನ್ನು ಮುಚ್ಚಲಾಗುತ್ತಿದೆ, ಸೆಕ್ಷನ್‌ 144 ಜಾರಿ ಮಾಡಲಾಗುತ್ತಿದೆ, ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. 

ಇಂಥ ಯತ್ನಗಳನ್ನು ಮಾಡಿದರೆ ಉಭಯ ಬಣಗಳ ನಡುವೆ ರಚನಾತ್ಮಕ ಮತ್ತು ಫಲಪ್ರದವಾದ ಮಾತುಕತೆ ಸಾಧ್ಯವೇ? ಈ ವಿಷಯದ ಬಗ್ಗೆ ಸರ್ಕಾರ ಮೊದಲು ಗಮನ ಹರಿಸಬೇಕು’ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ನಮ್ಮ ಬೇಡಿಕೆ ಕುರಿತು ಫೆ.12ರಂದು ಸಂಜೆ 5 ಗಂಟೆಗೆ ಕೇಂದ್ರ ಸಚಿವರಾದ ಅರ್ಜುನ್‌ ಮುಂಡಾ, ಪೀಯೂಷ್‌ ಗೋಯಲ್‌ ಮತ್ತು ನಿತ್ಯಾನಂದ್‌ ರೈ ಜೊತೆ ಸಭೆ ನಿಗದಿಯಾಗಿದೆ ಎಂದು ಪಂಜಾಬ್‌ ಕಿಸಾನ್‌ ಮಜ್ದೂರ್‌ ಸಂಘರ್ಷ್‌ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸರ್ವಣ್‌ ಸಿಂಗ್‌ ಪಂಧೇರ್‌ ಮಾಹಿತಿ ನೀಡಿದ್ದಾರೆ.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಭಯ ರಾಜ್ಯಗಳ ರೈತರು ಕಳೆದ ಡಿಸೆಂಬರ್‌ನಿಂದಲೂ ರಾಜ್ಯದೊಳಗೆ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.

2020-21ರಲ್ಲಿ ಕೂಡ ರೈತರು ದೆಹಲಿಗೆ ಆಗಮಿಸಿ 3 ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಗ ಹಲವು ತಿಂಗಳು ಕಾಲ ಪ್ರತಿಭಟನೆ ವಿಸ್ತರಿಸಿ ಕೊನೆಗೆ ಭಾರೀ ಹಿಂಸಾಚಾರಕ್ಕೂ ಕಾರಣವಾಗಿ ಹಲವರು ಸಾವನ್ನಪ್ಪಿದ್ದರು.

ಬ್ಯಾರಿಕೇಡ್ ಧ್ವಂಸಕ್ಕೆ ಟ್ರಾಕ್ಟರ್‌ಗೆ ಹಿಟಾಚಿ ರೂಪ?
ನವದೆಹಲಿ: ರೈತರು ತಮ್ಮ ಟ್ರಾಕ್ಟರ್‌ಗಳನ್ನು ಹಿಟಾಚಿ ರೂಪದಲ್ಲಿ ರೂಪಾಂತರಿಸಿಕೊಂಡಿದ್ದಾರೆ. ಪೊಲೀಸರು ಹಾಕಿರುವ ಬ್ಯಾರಿಕೇಡ್‌ ಧ್ವಂಸಕ್ಕೆ ಹೀಗೆ ಮಾಡಿದ್ದಾರೆ ಎಂದು ಗುಪ್ತಚರ ದಳಕ್ಕೆ ಮಾಹಿತಿ ಲಭಿಸಿದೆ. 

ಈ ಬಗ್ಗೆ ಪೊಲೀಸರಿಗೆ ಗುಪ್ತದಳ ಎಚ್ಚರಿಕೆ ಸಂದೇಶ ನೀಡಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.