ಆ.15ರಿಂದ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ ವಿತರಣೆ ಶುರು

| N/A | Published : Aug 11 2025, 01:40 AM IST / Updated: Aug 11 2025, 05:01 AM IST

ಆ.15ರಿಂದ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ ವಿತರಣೆ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಓಡಾಡುವ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆಮಾಡುವ ಉದ್ದೇಶದಿಂದ ಈಗಾಗಲೇ ಘೋಷಿಸಲಾಗಿರುವ ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಾಸ್‌ ವಿತರಣಾ ಕಾರ್ಯಕ್ಕೆ ಆ.15ರಿಂದ ಚಾಲನೆ ಸಿಗಲಿದೆ.

 ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ಓಡಾಡುವ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಟೋಲ್‌ಗೇಟ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆಮಾಡುವ ಉದ್ದೇಶದಿಂದ ಈಗಾಗಲೇ ಘೋಷಿಸಲಾಗಿರುವ ವಾರ್ಷಿಕ ಫಾಸ್ಟ್‌ಟ್ಯಾಗ್‌ ಪಾಸ್‌ ವಿತರಣಾ ಕಾರ್ಯಕ್ಕೆ ಆ.15ರಿಂದ ಚಾಲನೆ ಸಿಗಲಿದೆ.

ವಾಣಿಜ್ಯೇತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್‌ಗಳ ಮಾಲೀಕರಿಗೆ ಗರಿಷ್ಠ 200 ಟ್ರಿಪ್ ಅಥವಾ ಒಂದಿಡೀ ವರ್ಷ ಟೋಲ್‌ ಬಳಕೆಗಾಗಿ (ಯಾವುದು ಮೊದಲೋ ಅದು) 3000 ರು. ಪಾವತಿಸಿದರೆ ಸಾಕು. ಈ ಫಾಸ್ಟ್‌ಟ್ಯಾಗ್‌ ವಾರ್ಷಿಕ ಪಾಸ್‌ನಿಂದ ಪದೇ ಪದೆ ಫಾಸ್ಟ್‌ಟ್ಯಾಗ್‌ ರಿಚಾರ್ಜ್‌ ಮಾಡುವ ಕಿರಿಕಿರಿಯಿಂದ ವಾಹನ ಮಾಲೀಕರಿಗೆ ಮುಕ್ತಿ ಸಿಗಲಿದೆ.

ಈ ವರ್ಷ ಜೂನ್‌ನಲ್ಲೇ ಈ ಫಾಸ್ಟ್‌ಟ್ಯಾಗ್‌ ಪಾಸ್‌ ಕುರಿತು ಘೋಷಣೆ ಮಾಡಲಾಗಿದ್ದು, ಇದು ಕೇವಲ ಖಾಸಗಿ ಹಾಗೂ ವಾಣಿಜ್ಯೇತರ ವಾಹನಗಳಿಗಷ್ಟೇ ಸೀಮಿತವಾಗಿದೆ.

ಈ ಫಾಸ್ಟ್‌ ಟ್ಯಾಗ್‌ ಪಾಸ್‌ಗಾಗಿ ಪ್ರತ್ಯೇಕವಾಗಿ ಫಾಸ್ಟ್‌ ಟ್ಯಾಗ್‌ ಖರೀದಿಸಬೇಕೆಂದೇನೂ ಇಲ್ಲ. ಹಾಲಿ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್‌ ಅನ್ನೇ ಮೇಲ್ದರ್ಜೆಗೇರಿಸಬಹುದಾಗಿದೆ. ಈ ಫಾಸ್ಟ್‌ಟ್ಯಾಗ್‌ ಪಾಸ್‌ ಕೇವಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದಡಿ ಬರುವ ರಾಷ್ಟ್ರೀಯ ಹೆದ್ದಾರಿಗಷ್ಟೇ ಅನ್ವಯವಾಗುತ್ತದೆಯೇ ಹೊರತು ರಾಜ್ಯ ಹೆದ್ದಾರಿಗಳಿಗಲ್ಲ.

ಪಾಸ್‌ ಖರೀದಿ ಹೇಗೆ?:

ವಾಹನ ಮಾಲೀಕರು ರಾಜ್‌ಮಾರ್ಗ್‌ ಯಾತ್ರಾ ಆ್ಯಪ್‌ ಅಥವಾ ಎನ್‌ಎಚ್‌ಎಐ/ಎಂಆರ್‌ಟಿಎಚ್‌ ವೆಬ್‌ಸೈಟ್‌ಗೆ ಹೋಗಬೇಕು. ವಾಹನ ಸಂಖ್ಯೆ ಮತ್ತು ಫಾಸ್ಟ್‌ಟ್ಯಾಗ್‌ ಐಡಿ ಹಾಕಿ ಲಾಗಿನ್‌ ಆಗಬೇಕು. ಇದಕ್ಕೂ ಮೊದಲು ನಿಮ್ಮ ಹಾಲಿ ಫಾಸ್ಟ್‌ಟ್ಯಾಗ್ ಚಾಲ್ತಿಯಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್‌ಗಷ್ಟೇ ಈ ಪಾಸ್‌ ಅನ್ವಯ ಆಗುತ್ತದೆ. ಬಳಿಕ ಯುಪಿಐ, ಕ್ರೆಡಿಟ್‌ ಕಾರ್ಡ್‌ ಅಥವಾ ನೆಟ್‌ ಬ್ಯಾಂಕಿಂಗ್‌ ಬಳಸಿ 3,000 ರು. ಪಾವತಿಸಬೇಕು. ಇದರ ಬೆನ್ನಲ್ಲೇ ವಾರ್ಷಿಕ ಪಾಸ್‌ ನಿಮ್ಮ ಹಾಲಿ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್‌ ಜತೆ ಜೋಡಣೆಯಾಗುತ್ತದೆ. ಇದನ್ನು ಎಸ್‌ಎಂಎಸ್‌ ಸಂದೇಶದ ಮೂಲಕ ಖಾತ್ರಿಪಡಿಸಲಾಗುತ್ತದೆ.

ರಾಷ್ಟ್ರೀಯ ಹೆದ್ದಾರಿಗೆ ಮಾತ್ರ ಅನ್ವಯ

ವಾರ್ಷಿಕ ಟೋಲ್‌ ಫಾಸ್ಟ್ಯಾಗ್‌ ಪಾಸ್‌ ಕೇವಲ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯವಾಗುತ್ತದೆ. ರಾಜ್ಯ ಹೆದ್ದಾರಿಗಳಿಗೆ ಹಾಗೂ ಬೆಂಗಳೂರಿನ ನೈಸ್‌ನಂಥ ಖಾಸಗಿ ಹೆದ್ದಾರಿಗೆ ಅನ್ವಯವಾಗಲ್ಲ. ರಾಜ್ಯ ಹೆದ್ದಾರಿ ಹಾಗೂ ಖಾಸಗಿ ಹೆದ್ದಾರಿಗಳಲ್ಲಿ ಸಂಚರಿಸುವವರು ಎಂದಿನ ಟೋಲ್‌ ದರವನ್ನೇ ಪಾವತಿಸಬೇಕು.

Read more Articles on