ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನರಭಕ್ಷಕ ತೋಳಗಳ ಭೀತಿ: ಐದು ಸೆರೆ, ಒಂದು ತೋಳ ಇನ್ನೂ ಸೆರೆ ಬಾಕಿ

| Published : Sep 11 2024, 01:00 AM IST / Updated: Sep 11 2024, 05:50 AM IST

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನರಭಕ್ಷಕ ತೋಳಗಳ ಭೀತಿ: ಐದು ಸೆರೆ, ಒಂದು ತೋಳ ಇನ್ನೂ ಸೆರೆ ಬಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹ್ರೈಚ್‌ನಲ್ಲಿ 8 ಮಂದಿಯನ್ನು ಬಲಿ ಪಡೆದಿದ್ದ 6 ನರಭಕ್ಷಕ ತೋಳಗಳ ಪೈಕಿ 5 ತೋಳಗಳನ್ನು ಸೆರೆ ಹಿಡಿಯಲಾಗಿದೆ. ಉಳಿದ ಒಂದು ತೋಳವನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ತೋಳಗಳಿಗೆ ರೇಬಿಸ್‌ ಅಥವಾ ಕೆನೈನ್‌ ಡಿಸ್ಟೆಂಬರ್‌ ವೈರಸ್‌ ತಗುಲಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.

ಬಹ್ರೈಚ್‌ (ಉ.ಪ್ರ.): ಇಲ್ಲಿ ಮಕ್ಕಳೂ ಸೇರಿದಂತೆ 8 ಮಂದಿಯನ್ನು ಕೊಂದು 20ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿ ಆತಂಕ ಸೃಷ್ಟಿಸಿದ್ದ 6 ನರಭಕ್ಷಕ ತೋಳಗಳ ಪೈಕಿ ಮಂಗಳವಾರ ತೋಳವೊಂದನ್ನು ಸೆರೆಹಿಡಿಯಲಾಗಿದೆ. ಇದರಿಂದ ಸೆರೆ ಹಿಡಿದ ತೋಳಗಳ ಸಂಖ್ಯೆ 5ಕ್ಕೆ ಏರಿಕೆ ಆಗಿದೆ ಹಾಗೂ ಇನ್ನೊಂದು ತೋಳದ ಸೆರೆ ಬಾಕಿ ಉಳಿದಂತಾಗಿದೆ.

ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಮಾತನಾಡಿ, ‘ಸೋಮವಾರ ರಾತ್ರಿ ಹೆಣ್ಣು ತೋಳವೊಂದು ನಾವು ಹಾಕಿದ್ದ ಬಲೆಯಲ್ಲಿ ಸಿಕ್ಕಿಬಿದ್ದಿದೆ. ಗ್ರಾಮಸ್ಥರ ನೆರವಿನಿಂದ ಅರಣ್ಯ ಸಿಬ್ಬಂದಿ ತೋಳವನ್ನು ಹಿಡಿದು ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಉಳಿದ ಒಂದು ತೋಳ ಈ ತೋಳಗಳ ಗುಂಪುನ ನಾಯಕ ಆಗಿರಬಹುದು. ಅದನ್ನು ಸಹ ಆದಷ್ಟು ಬೇಗ ಹಿಡಿಯುತ್ತೇವೆ’ ಎಂದು ತಿಳಿಸಿದ್ದಾರೆ. ಸೆರೆ ಸಿಕ್ಕ ತೋಳವನ್ನು ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

ಈ ತೋಳಗಳನ್ನು ಹಿಡಿಯಲು ಉತ್ತರಪ್ರದೇಶದ ಅರಣ್ಯ ಇಲಾಖೆ ‘ಆಪರೇಷನ್‌ ಭೇಡಿಯಾ’ ಅಭಿಯಾನ ಆರಂಭಿಸಿತ್ತು.

ದಾಳಿಗೆ ವೈರಸ್‌ ಕಾರಣ?:

ದಾಳಿಕೋರ ತೋಳಗಳಿಗೆ ರೇಬಿಸ್‌ ಅಥವಾ ಕೆನೈನ್‌ ಡಿಸ್ಟೆಂಬರ್‌ ವೈರಸ್ ತಗುಲಿರಬಹುದು. ಕಾಯಿಲೆಗೆ ಒಳಗಾದ ತೋಳಗಳು ಮಾನವನ ಭಯವನ್ನೇ ಕಳೆದುಕೊಳ್ಳುತ್ತವೆ. ಹೀಗಾಗಿ ಇಷ್ಟು ವರ್ಷ ಸುಮ್ಮನಿದ್ದ ತೋಳಗಳು ಏಕಾಏಕಿ ದಾಳಿ ಆರಂಭಿಸಿರಬಹುದು ಎಂದು ತಜ್ಞರು ಶಂಕಿಸಿದ್ದಾರೆ.