ಚಂಡೀಗಢದ ಮೇಲೆ ಕೇಂದ್ರದ ಹಿಡಿತ ಮತ್ತಷ್ಟು ಬಿಗಿ?

| Published : Nov 24 2025, 02:15 AM IST

ಸಾರಾಂಶ

ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಹಾಲಿ ಇರುವ ಆಡಳಿತಾಧಿಕಾರಿ ಬದಲು ಲೆಫ್ಟಿನೆಂಟ್‌ ಗವರ್ನರ್‌ ನೇಮಕ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನ ತಾತ್ಕಾಲಿಕ ಮಸೂದೆ ಪಟ್ಟಿಯಲ್ಲಿ ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಕುರಿತು ಪ್ರಸ್ತಾಪ ಮಾಡಲಾಗಿದೆ.

ಕೇಂದ್ರಾಡಳಿತ ಪ್ರದೇಶಕ್ಕೆ ಎಲ್‌ಜಿ ನೇಮಕಕ್ಕೆ ಮಸೂದೆ

ಕೇಂದ್ರದ ಕ್ರಮಕ್ಕೆ ಕಾಂಗ್ರೆಸ್‌, ಆಪ್‌, ಅಕಾಲಿ ದಳ ಕಿಡಿ

ಪಂಜಾಬ್‌ ಬಿಜೆಪಿ ಅಧ್ಯಕ್ಷರಿಂದಲೂ ಪ್ರಸ್ತಾವನೆಗೆ ಆಕ್ಷೇಪ

ಈ ಅಧಿವೇಶನದಲ್ಲಿ ಬಿಲ್‌ ಮಂಡನೆ ಉದ್ದೇಶವಿಲ್ಲ: ಕೇಂದ್ರ

==

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಹಾಲಿ ಇರುವ ಆಡಳಿತಾಧಿಕಾರಿ ಬದಲು ಲೆಫ್ಟಿನೆಂಟ್‌ ಗವರ್ನರ್‌ ನೇಮಕ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನ ತಾತ್ಕಾಲಿಕ ಮಸೂದೆ ಪಟ್ಟಿಯಲ್ಲಿ ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಕುರಿತು ಪ್ರಸ್ತಾಪ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರದ ಕ್ರಮವನ್ನು ಪಂಜಾಬ್‌ನ ಆಡಳಿತಾರೂಢ ಆಪ್‌, ವಿಪಕ್ಷ ಕಾಂಗ್ರೆಸ್‌, ಶಿರೋಮಣಿ ಅಕಾಲಿದಳ ತೀವ್ರವಾಗಿ ವಿರೋಧಿಸಿವೆ. ಇದು ಚಂಡಿಗಢದ ಮೇಲಿನ ಪಂಜಾಬ್‌ನ ಹಕ್ಕು ಕಸಿಯುವ ಯತ್ನ ಎಂದು ಆರೋಪಿಸಿದೆ. ಇನ್ನೊಂದೆಡೆ ಸ್ವತಃ ಪಂಜಾಬ್‌ ಬಿಜೆಪಿ ಅಧ್ಯಕ್ಷ ಕೂಡಾ ಕೇಂದ್ರದ ಪ್ರಸ್ತಾಪವನ್ನು ವಿರೋಧಿಸಿದ್ದಾರೆ.

ವಿಷಯ ಭಾರೀ ಗದ್ದಲಕ್ಕೆ ಕಾರಣವಾಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಚಂಡೀಗಢದ ಆಡಳಿತ ಸುಸೂತ್ರಗೊಳಿಸುವ ಪ್ರಸ್ತಾಪಿಸ ಮಸೂದೆಯನ್ನು ಸಂಸತ್ತಿನ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲಾಗುವುದಿಲ್ಲ. ಈ ಕುರಿತು ಎಲ್ಲರೊಂದಿಗೂ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಭರವಸೆ ನೀಡಿದೆ.

ಏನಿದು ವಿವಾದ?:

ಚಂಡೀಗಢ, ಪಂಜಾಬ್‌ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ರಾಜಧಾನಿ. ಆದರೆ ಚಂಡೀಗಢ ನಗರಿ ಕೇಂದ್ರಾಡಳಿತ ಪ್ರದೇಶ. ಇದರ ಆಡಳಿತವನ್ನು ಪಂಜಾಬ್‌ನ ರಾಜ್ಯಪಾಲರು ನೋಡಿಕೊಳ್ಳುತ್ತಾರೆ. ಆದರೆ ಇದೀಗ ಚಂಡೀಗಢವನ್ನು ಸಂವಿಧಾನದ 240ನೇ ವಿಧಿಯ ವ್ಯಾಪ್ತಿಗೆ ತರುವ ಮೂಲಕ, ಅದಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ನೇಮಕಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಸಕ್ತ ಅಂಡಮಾನ್-ನಿಕೋಬಾರ್, ಲಕ್ಷದ್ವೀಪ, ದಾದ್ರಾ ಮತ್ತು ನಾಗರ ಹಾವೇಲಿ, ದಮನ್ ಮತ್ತು ದಿಯುಗಳಂತೆ ಚಂಡೀಗಢದ ಮೇಲೂ ಹೆಚ್ಚಿನ ಅಧಿಕಾರ ಕೇಂದ್ರ ಸರ್ಕಾರಕ್ಕೆ ಸಿಗಲಿದೆ.

ವಿರೋಧ ಏಕೆ?:

ಚಂಡೀಗಢ ಕೇಂದ್ರಾಡಳಿತ ಪ್ರದೇಶವಾದರೂ, ಅದು ತನ್ನದೇ ಭಾಗ ಎಂಬುದು ಪಂಜಾಬ್‌ನ ವಾದ. ಜೊತೆಗೆ ಎಲ್‌ಜಿ ನೇಮಕವಾದರೆ ರಾಜಧಾನಿಯ ಮೇಲೆ ರಾಜ್ಯ ಸರ್ಕಾರದ ಹಿಡಿತ ತಗ್ಗಿ, ಅದು ರಾಷ್ಟ್ರಪತಿಗಳಿಂದ ಆಯ್ಕೆಯಾಗುವ ಲೆಫ್ಟಿನೆಂಟ್ ಗವರ್ನರ್‌ ಕೈಸೇರುತ್ತದೆ ಹಾಗೂ ನೇರವಾಗಿ ಕೇಂದ್ರ ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತದೆ. ಇದು, ಪಂಜಾಬ್‌ನ ಆಡಳಿತಾರೂಢ ಆಮ್‌ ಆದ್ಮಿ ಸರ್ಕಾರಕ್ಕೆ ಇಷ್ಟವಿಲ್ಲ.

ವಿಪಕ್ಷ ಆಕ್ರೋಶ:

ಚಂಡೀಗಢವನ್ನು 240ನೇ ವಿಧಿಯ ವ್ಯಾಪ್ತಿಗೆ ತರುವ ನಡೆಗೆ ಪಂಜಾಬ್‌ನ ಆಡಳಿತಾರೂಢ ಆಪ್‌, ವಿಪಕ್ಷಗಳಾದ ಶಿರೋಮಣಿ ಅಕಾಲಿ ದಳ, ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿವೆ. ‘ಇದು, ದೇಶಕ್ಕಾಗಿ ಹಲವು ತ್ಯಾಗಗಳನ್ನು ಮಾಡಿರುವ ಪಂಜಾಬ್‌ನ ಗುರುತು ಮತ್ತು ಸಾಂವಿಧಾನಿಕ ಹಕ್ಕಿನ ಮೇಲೆ ಕೇಂದ್ರ ಸರ್ಕಾರದ ನೇರ ದಾಳಿ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮತ್ತು ಪಂಜಾಬಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಮನಸ್ಥಿತಿ ಅಪಾಯಕಾರಿ’ ಎಂದು ವಾಗ್ದಾಳಿ ನಡೆಸಿವೆ.

ಅತ್ತ ಕಾಂಗ್ರೆಸ್‌, ‘ಇದು ಮೊದಲು ಘೋಷಿಸಿ ಬಳಿಕ ಯೋಚಿಸುವ ಬಿಜೆಪಿ ಮಾದರಿಯ ಮತ್ತೊಂದು ಉದಾಹರಣೆ’ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಬಿಜೆಪಿಯದ್ದೂ ಅಪಸ್ವರ:

ಕೇಂದ್ರ ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ, ಪಂಜಾಬ್‌ ಬಿಜೆಪಿ ಅಧ್ಯಕ್ಷ ಸುನಿಲ್‌ ಜಾಖಡ್‌ ಕೂಡ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ‘ಚಂಡೀಗಢ ಬರೀ ಭೂಭಾಗವಲ್ಲ. ಚಂಡೀಗಢದ ಆಡಳಿತಾತ್ಮಕ ಅವಶ್ಯಕತೆಗಳನ್ನು ಸುಗಮಗೊಳಿಸಲು, ಪಂಜಾಬ್‌ನ ಭಾವನೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ’ ಎಂದು ಅವರು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಸ್ಪಷ್ಟನೆ:

ಚಂಡೀಗಢದ ಅಧಿಕಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಜಟಾಪಟಿ ಶುರುವಾಗುತ್ತಿದ್ದಂತೆ ಆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯ, ‘ಚಳಿಗಾಲದ ಅಧಿವೇಶನದಲ್ಲಿ ಚಂಡೀಗಢಕ್ಕೆ ಸಂಬಂಧಿಸಿದ ಮಸೂದೆ ಪ್ರಸ್ತಾಪಿಸುವ ಉದ್ದೇಶವಿಲ್ಲ’ ಎಂದಿದೆ. ಜತೆಗೆ, ‘ಈ ಪ್ರಸ್ತಾಪವು ಇನ್ನೂ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಕೇಂದ್ರಾಡಳಿತ ಪ್ರದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಿತರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟೀಕರಣ ನೀಡಿದೆ.