ಸಾರಾಂಶ
ಭಾರತದ ಆರ್ಥಿಕತೆಯು, ಇದೀಗ ನಿಧಾನಗತಿಯ ಆರ್ಥಿಕತೆ ಬೆಳವಣಿಗೆ ತೋರುತ್ತಿರುವ ವಿಶ್ವವನ್ನೇ ಮೇಲಕ್ಕೆ ಎತ್ತುವ ಸಾಮರ್ಥ್ಯ ಹೊಂದಿದೆ. ಶೀಘ್ರವೇ ನಾವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ
ನವದೆಹಲಿ: ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ಮಂತ್ರಗಳಿಂದ ನಿರ್ದೇಶಿಸಲ್ಪಟ್ಟಿರುವ ಭಾರತದ ಆರ್ಥಿಕತೆಯು, ಇದೀಗ ನಿಧಾನಗತಿಯ ಆರ್ಥಿಕತೆ ಬೆಳವಣಿಗೆ ತೋರುತ್ತಿರುವ ವಿಶ್ವವನ್ನೇ ಮೇಲಕ್ಕೆ ಎತ್ತುವ ಸಾಮರ್ಥ್ಯ ಹೊಂದಿದೆ. ಶೀಘ್ರವೇ ನಾವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಲಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಜೊತೆಗೆ ನಾವು ದಡದಲ್ಲಿ ಕುಳಿತು ನದಿಗೆ ಕಲ್ಲು ಎಸೆದು ಮಜಾ ತೆಗೆದುಕೊಳ್ಳುವ ವ್ಯಕ್ತಿಗಳಲ್ಲ, ನಾವು ನದಿಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿದ್ದೇವೆ ಎಂದು ಎನ್ನುವ ಮೂಲಕ ಭಾರತದ ಮೇಲೆ ತೆರಿಗೆ ದಾಳಿಯ ಬೆದರಿಕೆ ಹಾಕಿರುವ ಮತ್ತು ಬ್ರಿಕ್ಸ್ ದೇಶಗಳ ಒಕ್ಕೂಟಕ್ಕೆ ಬೆದರಿಕೆ ಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೇರಾನೇರ ಸಡ್ಡು ಹೊಡೆದಿದ್ದಾರೆ.
ಇಲ್ಲಿ ಆಯೋಜಿತ ‘ಎಕನಾಮಿಕ್ಸ್ ಟೈಮ್ಸ್ ವಿಶ್ವ ನಾಯಕರ ವೇದಿಕೆ’ ಕಾರ್ಯಕ್ರಮ ಉದ್ದೇಶಿಸಿ ಶನಿವಾರ ಮಾತನಾಡಿದ ಪ್ರಧಾನಿ ಮೋದಿ, ‘ಸುಧಾರಣೆ ಎನ್ನುವುದು ನಮ್ಮ ಸರ್ಕಾರದ ಪಾಲಿಗೆ ಬದ್ಧತೆ ಮತ್ತು ದೃಢಸಂಕಲ್ಪ. ಇದರ ಭಾಗವಾಗಿ ನಾವು ಹೊಸತಲೆಮಾರಿನ ಜಿಎಸ್ಟಿ ಸುಧಾರಣೆ ಜಾರಿಗೊಳಿಸುತ್ತಿದ್ದೇವೆ. ದೀಪಾವಳಿ ಹೊತ್ತಿಗೆ ಜಾರಿಗೊಳ್ಳಲಿರುವ ಈ ಸರಳೀಕೃತ ಕಾನೂನು ಹಲವು ವಸ್ತುಗಳ ದರವನ್ನು ಇಳಿಸಲಿದೆ’ ಎಂದು ಹೇಳಿದರು.
ಈಗ ನಾವು ಏನು ಸಾಧಿಸಿದ್ದೇವೋ ಅದರಿಂದ ನಾನು ತೃಪ್ತನಾಗಿಲ್ಲ. ಖಾಸಗಿ ವಲಯ ಸ್ವಚ್ಛ ಇಂಧನ, ಕ್ವಾಂಟಮ್ ತಂತ್ರಜ್ಞಾನ, ಬ್ಯಾಟರಿ ಸ್ಟೋರೇಜ್, ಬಯೋಟೆಕ್ನಾಲಜಿ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇನ್ನಷ್ಟು ಹೂಡಿಕೆ ಮಾಡಬೇಕು. ಸದ್ಯ ನಾವು ವಿಶ್ವದಲ್ಲೇ ಅತಿವೇಗದ ಆರ್ಥಿಕತೆಯಾಗಲಿದ್ದೇವೆ. ಶೀಘ್ರವೇ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಸುಧಾರಣೆ, ಸಾಧನೆ ಮತ್ತು ಪರಿವರ್ತನೆಯ ನಮ್ಮ ಈ ಮಂತ್ರ ನಿಧಾನಗತಿಯ ಆರ್ಥಿಕತೆ ಹೊಂದಿರುವ ಜಾಗತಿಕ ಆರ್ಥಿಕತೆಯನ್ನು ಮೇಲಕ್ಕೆತ್ತುವ ಸಾಮರ್ಥ್ಯ ಹೊಂದಿದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಪಾಲು ಶೀಘ್ರವೇ ಶೇ.20ಕ್ಕೆ ತಲುಪಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
5-6 ದಶಕದ ಹಿಂದೆಯೇ ಅವಕಾಶ ಇತ್ತು, ಆದ್ರೆ ಬಳಕೆ ಆಗ್ಲಿಲ್ಲ
‘ವರ್ಷಾಂತ್ಯದ ಒಳಗಾಗಿ ಭಾರತ ತನ್ನ ಮೊದಲ ಸ್ವಂತ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ 6ಜಿ ನೆಟ್‌ವರ್ಕ್ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ ಎಂದು ಹೇಳಿದ್ದಾರೆ.
‘ದೇಶ 50-60 ವರ್ಷಗಳ ಹಿಂದೆಯೇ ಸೆಮಿಕಂಡಕ್ಟರ್ ಉತ್ಪಾದನೆ ಆರಂಭಿಸಬಹುದಿತ್ತು. ಆದರೆ ಆಗ ಆ ಅವಕಾಶವನ್ನು ಕೈಚೆಲ್ಲಿದೆವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಾರತವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸಲು ಕಾರ್ಖಾನೆಗಳನ್ನು ಸ್ಥಾಪಿಸಿ ಚಿಪ್ ಉತ್ಪಾದಿಸಲಾಗುವುದು. 2025 ಮುಗಿಯುವ ಹೊತ್ತಿಗೆ ಚಿಪ್ ಮಾರುಕಟ್ಟೆಗೆ ಬರಲಿದೆ’ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, 100ಕ್ಕೂ ಅಧಿಕ ದೇಶಗಳಿಗೆ ವಿದ್ಯುತ್ ಚಾಲಿತ ವಾಹನಗಳನ್ನು ರಫ್ತು ಮಾಡುವ ಗುರಿಯ ಬಗ್ಗೆಯೂ ಮೋದಿ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.