ಮಳೆ, ಉಕ್ಕೇರಿದ ಹೊಳೆ: ನದಿ ತೀರದಲ್ಲಿ ‘ನೆರೆ ರಾತ್ರಿ’!

| N/A | Published : Oct 03 2025, 07:47 AM IST

flood

ಸಾರಾಂಶ

ಜಿಲ್ಲೆಯ ಭೀಮಾ, ಕಾಗಿಣಾ, ಅಮರ್ಜಾ, ಬೆಣ್ಣೆತೊರಾ ನದಿ ತೀರದಲ್ಲಿರುವ 150ಕ್ಕೂ ಅಧಿಕ ಗ್ರಾಮಗಳ 7 ಸಾವಿರದಷ್ಟು ಜನರ ಪಾಲಿಗೆ ಈ ಬಾರಿಯ ನಾಡಹಬ್ಬ ನವರಾತ್ರಿ ನೆರೆ ರಾತ್ರಿಯಾಗಿ ಕಾಡಿತ್ತು!

ಶೇಷಮೂರ್ತಿ ಅವಧಾನಿ

 ಕಲಬುರಗಿ :  ಜಿಲ್ಲೆಯ ಭೀಮಾ, ಕಾಗಿಣಾ, ಅಮರ್ಜಾ, ಬೆಣ್ಣೆತೊರಾ ನದಿ ತೀರದಲ್ಲಿರುವ 150ಕ್ಕೂ ಅಧಿಕ ಗ್ರಾಮಗಳ 7 ಸಾವಿರದಷ್ಟು ಜನರ ಪಾಲಿಗೆ ಈ ಬಾರಿಯ ನಾಡಹಬ್ಬ ನವರಾತ್ರಿ ನೆರೆ ರಾತ್ರಿಯಾಗಿ ಕಾಡಿತ್ತು!

ಮೇಲೆ ಧೋ ಎಂದು ಸುರಿವ ಮಳೆ, ಕೆಳಗೆ ಹಾವಿನಂತೆ ಮರಳಿ ಹೊರಳಿ ಉಕ್ಕೇರುವ ಹೊಳೆ ಇವೆರಡೂ ಏಳೆಂಟು ದಿನ ಪೂರ್ತಿ ಕಾಡಿದ್ದರಿಂದ ನದಿ ತೀರದ ನಿವಾಸಿಗಳು, ಕೆಳದಂಡೆಯ ಗ್ರಾಮಸ್ಥರು ಕರಾಳ ಅನುಭವ ಪಡೆದರು.

ಘಟಸ್ಥಾಪನೆ, ದೀಪೋತ್ಸವದಲ್ಲಿ ಮಿಂದೇಳುತ್ತ ತಮ್ಮ ಬದುಕಿನ ಹಬ್ಬದ ಸವಿ ಸವಿಯಬೇಕಿದ್ದವರಿಗೆ ಈ ಬಾರಿ ಅತಿವೃಷ್ಟಿ ಹಾಗೂ ಮಹಾರಾಷ್ಟ್ರದಿಂದ ಹರಿದು ಬಂದ ಅಪಾರ ಜಲರಾಶಿ ಸಮಸ್ಯೆ ಉಂಟು ಮಾಡಿತು. ನವರಾತ್ರಿ ಆರಂಭದೊಂದಿಗೆ ನೆರೆ ಹಾವಳಿ ಇಡೀ ಹಬ್ಬವನ್ನೇ ಆಪೋಷಣ ಪಡೆದಿತ್ತು.

‘ಯಲ್ಲಮ್ಮದೇವಿ ಉಪವಾಸ ಮಾಡಿ ದೀಪ ಹಾಕೋದ್ರಲ್ಲಿದ್ದೆ, ಮನಿ ಎಲ್ಲಾ ಹಸನ ಮಾಡಿದ್ದೆ, ಹೊಳಿ ಬಂದು ಎಲ್ಲವೂ ಸತ್ಯಾನಾಶ ಆಯ್ತು. ನಿಂದರ್ಲಿಕ್ಕೇ ಜಾಗ ಇಲ್ಲದ ಮನ್ಯಾಗ ದೀಪ ಹ್ಯಾಂಗ ಹಾಕೋದು, ಗಂಜಿ ಕೇಂದ್ರದಾಗೇ ನವರಾತ್ರಿ ಆಯ್ತು’ ಎಂದು ಮಣ್ಣೂರಿನ ಸತ್ಯವ್ವ ನೋವಿನಿಂದ ಹೇಳುತ್ತಾರೆ.

‘ಕನ್ನಡಪ್ರಭ’ ಜೊತೆ ಮಾತನಾಡಿದ ಅನೇಕರ ನೆರೆ ಸಂತ್ರಸ್ತರು ಈ ಬಾರಿ ನಾಡಹಬ್ಬ ದಸರಾ ಅವರ ಪಾಲಿಗೆ ಕರಾಳ ಹಬ್ಬವಾಗಿ ಪರಿಣಿಸಿತ್ತು ಎಂದಿದ್ದಾರೆ. ದೈವಾರಾಧನೆಯ ಯಾವ ಚಟುವಚಟಿಕೆಗಳು ಇವರ ಮನೆಯಲ್ಲಿ ನಡೆಯದೆ ಬರೀ ಮಳೆ ನೀರು, ಹೊಳೆ ನೀರು ಹೊರಗೆ ಹಾಕೋದ್ರಲ್ಲೇ ಮುಳುಗುವಂತಾಗಿತ್ತು. ಹೊಳಿ ನಿಯಂತ್ರಣ ತಪ್ಪಿ ಉಕ್ಕೇರಿ ನೀರು ಮನಿ ಹೊಕ್ಕಾಗ ಇವ್ರೆಲ್ಲರೂ ಗಂಜಿ ಕೇಂದ್ರಗಳಲ್ಲಿ ಆಸರೆ ಪಡೆಯೋದು ಅನಿವಾರ್ಯವಾಗಿತ್ತು.

ನೆರೆ ಪೀಡಿತ ಗ್ರಾಮ:

ಜೇವರ್ಗಿ-30, ಅಫಜಲಪುರ-17, ಚಿತ್ತಾಪುರ-12, ಕಾಳಗಿ- 8, ಕಲಬುರಗಿ-7, ಸೇಡಂ-5, ಶಹಾಬಾದ್‌, ಆಳಂದ ಹಾಗೂ ಚಿಂಚೋಳಿ ತಲಾ 3 ಗ್ರಾಮಗಳು, ಜಿಲ್ಲಾದ್ಯಂತ ಭೀಮಾ, ಕಾಗಿಣಾ, ಬೆಣ್ಣೊತೋರಾ, ಕಮಲಾವತಿ ನದಿ ತೀರದಲ್ಲಿ ಮಹಾಪೂರಕ್ಕೆ 88 ಗ್ರಾಮಗಳು ತೊಂದರೆಗೆ ಒಗೊಳಗಾಗಿದ್ದು 7 ಸಾವಿರ ಜನ ಅಕ್ಷರಶಃ 9 ರಿಂದ 10 ದಿನ ನರಕ ಯಾತನೆ ಎದುರಿಸಿದ್ದರು.

ಸ್ಥಳಾಂತರ:

ಜೇವರ್ಗಿಯಲ್ಲಿ ನೆರೆ ಸಂದರ್ಭದಲ್ಲಿ 3, 455 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಇದು ನೆರೆ ಪೀಡಿತ ತಾಲೂಕುಗಳಲ್ಲೇ ಹೆಚ್ಚಿನ ಜನ ಸ್ಥಳಾಂತರವಾಗಿದೆ. ಇದಲ್ಲದೆ ಅಫಜಲಪುರ 819, ಕಲಬುರಗಿ 743, ಚಿತ್ತಾಪುರ 432, ಸೇಡಂ 124, ಶಹಾಬಾದ್‌ 150 ಜನರನ್ನು ನದಿ ತೀರದಿಂದ ಸ್ಥಳಾತಂರಿಸಿ ಕಾಳಜಿ ಕಂದ್ರಗಳಲ್ಲಿ ಆಸರೆ ನೀಡಲಾಗಿತ್ತು.

ಆಗ್ರಹ:

ಹೊಳೆ ಬಂದಾಗೊಮ್ಮೆ ಬಂದು ಬಿಸ್ಕತ್ತು ಎಸೆದು ಹೋಗ್ತಾರ, ನಂತರ ಮತ್ತೊಮ್ಮೆ ಹಳಿ ಬಂದಾಗ್ಲೇ ಬರ್ತಾರ, ನಾವು ಹೊಳಿ ದಂಡಿಮ್ಯಾಗ 2 ಪತ್ರಾ ಹಾಕ್ಕೊಂಡು ಇದ್ದವ್ರಿಗೆ ಎಲ್ಲಿದೆ ಹೋಗಲಿಕ್ಕೆ ಜಾಗ? ಹೊಲಿ ನೀರ ನಮ್ಮ ಬದುಕನ್ನೇ ಸತ್ಯಾನಾಶ ಮಾಡಿದ್ರೂ ನಾವಲ್ಲೇ ಇರಬೇಕಲ್ರಿ, ಹೀಂಗ ಬಂದು ಹೋಗದೆ ನಮಗ ಎತ್ತರದ ಸ್ಥಳದಲ್ಲಿ ಮನಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ ಎಂದು ನೆರೆ ಸಂತ್ರಸ್ತರೆಲ್ಲರೂ ಕಾಯಂ ಪರಿಹಾರದ ಬೇಡಿಕೆ ಮುಂದಿಟ್ಟಿದ್ದಾರೆ.

ಗಾಣಗಾಪುರದ ನೆರೆ ಪೀಡಿತರೆಲ್ಲರೂ ಕಾಯಂ ಸೂರು ಕೊಡಲು ಸರ್ಕಾರ ಮುಂದೆ ಬರಬೇಕು, ನೋವು, ಯಾತನೆ ಎಂಎಲ್‌ಎಂ ಸಾಹೇಬರು ಸರ್ಕಾರದ ಗಮನಕ್ಕೆ ತರಬೇಕೆಂದು ಆಗ್ರಹಿಸಿದ್ದಾರೆ.

ನೆರೆ ಸಂತ್ರಸ್ತೆ ಸುಮಂಗಲಾ, ಜಮುನಾಬಾಯಿ, ನದಿಯೊಳಗ ಇನ್ನೆಷ್ಟು ನಾವು ಮುಳಗೋದು ಹೇಳ್ರಿ, ಕಾಯಂ ಮನಿ ಕೊಡ್ರಿ, ನಿಮ್ಮ ಪರಿಹಾರ ಬೇಡ, ನಮಗೊಂದು ನೆಲೆ ಒದಗಿಸಿರಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

Read more Articles on