ಸಾರಾಂಶ
ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಮುಂಗಾರು ತೀವ್ರಗೊಂಡಿದೆ. ಕಳೆದ 24 ತಾಸಿನಲ್ಲಿ ಉತ್ತರ ಪ್ರದೇಶದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ವಾರಾಣಸಿ, ಪ್ರಯಾಗರಾಜ್ ಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಹೈದರಾಬಾದ್/ಜೈಪುರ/ಲಖನೌ: ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಮುಂಗಾರು ತೀವ್ರಗೊಂಡಿದೆ. ಕಳೆದ 24 ತಾಸಿನಲ್ಲಿ ಉತ್ತರ ಪ್ರದೇಶದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ವಾರಾಣಸಿ, ಪ್ರಯಾಗರಾಜ್ ಸೇರಿ ಅನೇಕ ಕಡೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ರಾಜಸ್ಥಾನದಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಮಳೆಯಾಗಿದ್ದು, ಹಲವು ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ. ಅಜ್ಮೇರ್, ಪುಷ್ಕರ್, ಬೂಂದಿ, ಸವಾಯಿ, ಮಾಧೋಪುರ ಮತ್ತು ಪಾಲಿ ಜಿಲ್ಲೆಗಳು ಪ್ರವಾಹಕ್ಕೆ ಬಾಧಿತವಾಗಿವೆ. ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.
ಹೈದರಾಬಾದ್‌ನಲ್ಲಿ ಒಂದೇ ದಿನ 10 ಸೆಂ.ಮೀ. ಮಳೆಯ ಕಾರಣ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಫ್ಲೈ ಓವರ್ ಮೇಲೂ ಪ್ರವಾಹ ಉಕ್ಕೇರಿದೆ. ಇದರಿಂದಾಗಿ ಹೈದರಾಬಾದ್ ನಗರ ಬೆಂಗಳೂರು ಮೀರಿಸಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಕೇರಳದಲ್ಲೂ ಭಾರಿ ಮಳೆಯಾಗುತ್ತಿದ್ದು, ಅನೇಕ ಕಡೆ ರೆಡ್ ಹಾಗೂ ಆರೆಂಜ್ ಅಲರ್ಟ್ ಸಾರಲಾಗಿದೆ. ಉತ್ತರ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಪ.ಬಂಗಾಳದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.